ದೊಡ್ಡಬಳ್ಳಾಪುರ: ಧಾರ್ಮಿಕ ದತ್ತಿ ಇಲಾಖೆಯ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಬಡವರ ಮದುವೆಗಾಗಿ ಸಪ್ತಪದಿ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದೆ. ಆದರೆ ಕೊರೊನಾ ಎರಡನೇ ಅಲೆಯಿಂದಾಗಿ ಈ ಬಾರಿಯ ಸಪ್ತಪದಿ ಸಾಮೂಹಿಕ ವಿವಾಹ ಮಹೋತ್ಸವವನ್ನು ಮುಂದೂಡಲಾಗಿದೆ.
ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಬಡವರ ಮದುವೆಗಾಗಿ ಸಪ್ತಪದಿ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ನಡೆಸಿಕೊಂಡು ಬರಲಾಗುತ್ತಿದೆ. ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಎರಡು ತಿಂಗಳಿಗೊಮ್ಮೆ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಸಲಾಗುತ್ತಿದೆ. ಏಪ್ರಿಲ್ 29ರಂದು ಸಪ್ತಪದಿ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ನಿಗದಿ ಮಾಡಲಾಗಿತ್ತು. ಮದುವೆಗಾಗಿ 43 ಅರ್ಜಿಗಳು ಸಹ ಬಂದಿದ್ದವು. ಆದ್ರೆ ದೇಶದ್ಯಾಂತ ಕೊರೊನಾ ಎರಡನೇ ಅಲೆ ವೇಗವಾಗಿ ಹಬ್ಬುತ್ತಿದ್ದು, ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದೆ.
ಮದುವೆ ಕಾರ್ಯಕ್ರಮದಲ್ಲಿ 200 ಜನರ ಗರಿಷ್ಠ ಮಿತಿ ಹಾಕಿದೆ. ಆದರೆ ಸಾಮೂಹಿಕ ವಿವಾಹದಲ್ಲಿ 200ಕ್ಕೂ ಹೆಚ್ಚು ಜನರು ಭಾಗಿಯಾಗುವ ಹಿನ್ನೆಲೆ ಕೋವಿಡ್ ನಿಯಮಗಳ ಉಲ್ಲಂಘನೆಯಾಗಲಿದೆ. ಇದರಿಂದ ಸಾಮೂಹಿಕ ವಿವಾಹಕ್ಕೆ ನಿಗದಿ ಮಾಡಿದ್ದ ದಿನವನ್ನು ರದ್ದು ಮಾಡಲಾಗಿದೆ. ಮುಂದಿನ ದಿನಾಂಕ ಘೋಷಣೆ ಮಾಡುವುದಾಗಿ ಧಾರ್ಮಿಕ ದತ್ತಿ ಇಲಾಖೆ ಹೇಳಿದೆ.