ಬೆಂಗಳೂರು: ಪಾದರಾಯನಪುರ ಕಾರ್ಪೊರೇಟರ್ ಇಮ್ರಾನ್ ಪಾಷಾಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಇದೀಗ ಮನೆಯಿಂದ ಹೊರಬಂದಿರುವ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕ್ವಾರಂಟೈನ್ನಲ್ಲಿ ಇರಿಸಲು ಸ್ಥಳಾಂತರಿಸಲಾಗಿದೆ.
ನಿನ್ನೆ ರಾತ್ರಿಯೇ ಪಾಷಾ ಅವರ ಕೊರೊನಾ ವರದಿ ಪಾಸಿಟಿವ್ ಬಂದಿತ್ತು. ಇದಾದ ಬಳಿಕ ಅವರು ಮನೆಯಲ್ಲೇ ಇದ್ದರು. ಕ್ವಾರಂಟೈನ್ ಮಾಡಲು ಆರೋಗ್ಯ ಇಲಾಖೆ ಅಧಿಕಾರಿಗಳು ಬೆಳಗ್ಗೆಯಿಂದ ಪಿಪಿಇ ಕಿಟ್ ಧರಿಸಿ ಮನೆ ಹೊರಗೆ ಕಾಯುತ್ತಿದ್ದರೂ, ಕಾರ್ಪೊರೇಟರ್ ಮಾತ್ರ ಹೊರಬಂದಿರಲಿಲ್ಲ.
ನಿನ್ನೆ ನಗರದ ವಿಕ್ರಂ ಆಸ್ಪತ್ರೆಯಲ್ಲಿ ಗಂಟಲು ದ್ರವ ಪರೀಕ್ಷೆ ನಡೆಸಿದ್ದು, ರಾತ್ರಿ ವೇಳೆಗೆ ರಿಪೋರ್ಟ್ ಬಂದಿದೆ. ಅದರಲ್ಲಿ ಕೊರೊನಾ ಪಾಸಿಟಿವ್ ಇರೋದು ದೃಢವಾಗಿತ್ತು. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಆಸ್ಪತ್ರೆಗೆ ಕರೆತರಲು ಕಾಯುತ್ತಿದ್ದರು. ರಿಪೋರ್ಟ್ ಬಂದು ಸುಮಾರು 12 ಗಂಟೆಗಳೇ ಕಳೆದರೂ ಕಾರ್ಪೊರೇಟರ್ ಮಾತ್ರ ಮನೆಯಿಂದ ಹೊರ ಬಂದಿರಲಿಲ್ಲ.
ಇದರ ನಡುವೆ ಪಾಲಿಕೆ ಅವರ ಮನೆಯ ಸುತ್ತಮುತ್ತಲು ಸೋಂಕು ನಿವಾರಕ ದ್ರಾವಣ ಸಿಂಪಡಿಸಿ ಮುಂಜಾಗ್ರತಾ ಕ್ರಮ ಕೈಗೊಂಡಿತ್ತು. ಆದರೆ ಪಾಷಾ ಮನೆ ಮುಂದಿರುವ ರಸ್ತೆಯನ್ನು ಕಂಟೇನ್ಮೆಂಟ್ ಝೋನ್ ಎಂದು ಘೋಷಣೆ ಮಾಡಿಲ್ಲ. ಜನರ ಓಡಾಟ ಎಂದಿನಂತೆ ಇದೆ.