ಬೆಂಗಳೂರು: ದಿನೇ ದಿನೇ ಕೊರೊನಾ ಪ್ರಕರಣಗಳು ರಾಜ್ಯವನ್ನು ಬೆಚ್ಚಿ ಬೀಳಿಸುವಂತಿವೆ. ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ರೇಟ್ ಏರಿಕೆ ಎಲ್ಲರ ನಿದ್ದೆಗೆಡಿಸುವಂತಿದೆ. ಲಾಕ್‌ಡೌನ್‌ನಿಂದ ಮೇಲ್ನೋಟಕ್ಕೆ ಸೋಂಕು ಕಡಿಮೆಯಾದಂತೆ ಕಂಡರೂ ಪಾಸಿಟಿವ್ ರೇಟ್ ಮಾತ್ರ ಹೆಚ್ಚಾಗುತ್ತಲೇ ಇದೆ.
ನಿನ್ನೆ ಒಟ್ಟು 38,603 ಮಂದಿಗೆ ಸೋಂಕು ತಗುಲಿದೆ. ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದು, ಪಾಸಿಟಿವ್ ರೇಟ್ ದಾಖಲೆಯ ಶೇ.39.7ಕ್ಕೆ ಏರಿಕೆಯಾಗಿದೆ.
ಅಂದ್ರೆ ಪ್ರತಿ 100 ಜನರನ್ನು ಟೆಸ್ಟ್ ಮಾಡಿದರೆ ಸರಾಸರಿ 40 ಜನರಿಗೆ ಪಾಸಿಟಿವ್ ಬರುವ ಸಾಧ್ಯತೆ ಇದೆ. ಇಷ್ಟು ದಿನ ನಗರ, ಜೆಲ್ಲೆ, ತಾಲೂಕುಗಳಲ್ಲಿ ಆರ್ಭಟಿಸುತ್ತಿದ್ದ ಕೊರೊನಾ ಸೋಂಕು ಇದೀಗ ಈ ಎಲ್ಲವನ್ನೂ ದಾಟಿ ಹಳ್ಳಿ ಹಳ್ಳಿಗೂ ವ್ಯಾಪಿಸಿ ಜನರ ನಿದ್ದೆಗೆಡಿಸಿದೆ.
ನಿನ್ನೆ ರಾಜ್ಯದಲ್ಲಿ 97 ಸಾವಿರ ಮಂದಿ ಕೋವಿಡ್ ಟೆಸ್ಟ್ ಮಾಡಿಸಿದರೆ, ಇವರಲ್ಲಿ 38 ಸಾವಿರಕ್ಕೂ ಅಧಿಕ ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಜೊತೆಗೆ ಸಾವಿನ ಪ್ರಕರಣಗಳು ಕೂಡ ಹೆಚ್ಚಾಗಿವೆ. ರಾಜ್ಯದಲ್ಲಿ ಒಟ್ಟು ಸೋಮವಾರ 476 ಜನ ಮರಣ ಹೊಂದಿದ್ದು, ಬೆಂಗಳೂರೊಂದರಲ್ಲೇ 239 ಮಂದಿ ಉಸಿರು ಚೆಲ್ಲಿದ್ದಾರೆ.
ಇದನ್ನೂ ಓದಿ: ಗ್ರಾಮೀಣ ಪ್ರದೇಶದಲ್ಲಿ ಕೊರೊನಾ ಹೆಚ್ಚಳಕ್ಕೆ ಕಾರಣವೇನು? ಇಲ್ಲಿದೆ ಕಂಪ್ಲೀಟ್ ಮಾಹಿತಿ