ಬೆಂಗಳೂರು: ಕಳೆದ ಮೂರು ದಿನಗಳ ಹಿಂದೆ ಕೊರೊನಾ ದೃಢಪಟ್ಟಿದ್ದ ಅಶೋಕ ನಗರ ಸಂಚಾರಿ ಠಾಣಾ ಸಿಬ್ಬಂದಿಯೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಆರು ಜನ ಸಿಬ್ಬಂದಿಗೆ ಸೋಂಕು ತಗುಲಿದೆ.
ಇಬ್ಬರು ಮಹಿಳಾ ಕಾನ್ಸ್ಟೆಬಲ್, ಓರ್ವ ಮಹಿಳಾ ಹೆಡ್ ಕಾನ್ಸ್ಟೆಬಲ್, ಇಬ್ಬರು ಕಾನ್ಸ್ಟೆಬಲ್, ಓರ್ವ ಎಎಸ್ಐ ಸೇರಿದಂತೆ ಆರು ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಸೋಂಕಿತರೊಂದಿಗೆ ಸಂಪರ್ಕದಲ್ಲಿದ್ದವರ ಮಾಹಿತಿಯನ್ನು ಆರೋಗ್ಯ ಇಲಾಖೆ ಪಟ್ಟಿ ಮಾಡುತ್ತಿದೆ.
ಕಂದಮ್ಮನಿಗೂ ಸೋಂಕು:
ಸಂಪಂಗಿರಾಮ ನಗರ ಠಾಣೆಯ ಪೊಲೀಸ್ ಕಾನ್ಸ್ಟೆಬಲ್ ಜೊತೆ ಸಂಪರ್ಕದಲ್ಲಿದ್ದ ಕುಟುಂಬದವರಿಗೂ ಸೋಂಕು ಬಾಧಿಸಿದೆ. ಸೋಂಕಿತ ಕಾನ್ಸ್ಟೆಬಲ್ ಪತ್ನಿ, ಒಂದು ವರ್ಷ ಮೂರು ತಿಂಗಳ ಮಗು ಹಾಗೂ ಪತ್ನಿಯ ಸಹೋದರಿಗೂ ಸೋಂಕು ಹರಡಿದೆ.
ಮೂರು ದಿನಗಳ ಹಿಂದೆ ಪೊಲೀಸ್ ಕಾನ್ಸ್ಟೆಬಲ್ ಸೋಂಕು ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಸೋಂಕಿತನ ಸಂಪರ್ಕದಲ್ಲಿದ್ದ ಕುಟುಂಬಸ್ಥರನ್ನು ಕ್ವಾರಂಟೈನ್ ಮಾಡಲಾಗಿತ್ತು. ಬಳಿಕ ನಡೆಸಿದ ಪರೀಕ್ಷಾ ವರದಿಯಲ್ಲಿ ಕುಟುಂಬದ ಮೂವರು ಸದಸ್ಯರಿಗೂ ಪಾಸಿಟಿವ್ ಬಂದಿದೆ.