ಬೆಂಗಳೂರು: ಹೊಂಗಸಂದ್ರ ವಾರ್ಡ್ನಲ್ಲಿ ಮತ್ತೆ ಕೊರೊನಾ ಕೇಕೆ ಹಾಕುತ್ತಿದೆ. ಬೊಮ್ಮನಹಳ್ಳಿ ವಲಯದ ಹೊಂಗಸಂದ್ರಕ್ಕೆ ಮೊದಲು ಬಿಹಾರಿ ವಲಸೆ ಕಾರ್ಮಿಕನಿಂದ ಕೊರೊನಾ ಪತ್ತೆಯಾಗಿತ್ತು. ಬಳಿಕ 35 ಜನರಿಗೆ ಪಸರಿಸಿ, ಪಕ್ಕದ ಮಂಗಮ್ಮನಪಾಳ್ಯದ ನಿವಾಸಿ P-654 ಸಂಖ್ಯೆಯಲ್ಲಿ ಕೊರೊನಾ ಕಾಣಿಸಿಕೊಂಡಿತ್ತು. ಇದೀಗ ಮಂಗಮ್ಮನಪಾಳ್ಯದ ಮತ್ತೊಬ್ಬ ನಿವಾಸಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
35 ವರ್ಷದ P-911 ಸಂಖ್ಯೆಯ ವ್ಯಕ್ತಿಯಲ್ಲಿ ಪಾಸಿಟಿವ್ ಕಾಣಿಸಿಕೊಂಡಿದ್ದು ಈತ ಗೂಡ್ಸ್ ಆಟೋ ಚಾಲಕರಾಗಿದ್ದರು. ಲಾಕ್ಡೌನ್ ವೇಳೆ ಮನೆಯಲ್ಲೇ ಇದ್ದರೂ ಕೊರೊನಾ ಹರಡಿದೆ ಎನ್ನಲಾಗುತ್ತಿದೆ. ಅಲ್ಲದೆ, ಈ ವ್ಯಕ್ತಿಗೆ 654 ರೋಗಿಯ ಪರಿಚಯವೂ ಇಲ್ಲ, ಸಂಪರ್ಕವೂ ಇರಲಿಲ್ಲ ಎಂದು ಬಿಬಿಎಂಪಿ ಬೊಮ್ಮನಹಳ್ಳಿ ಆರೋಗ್ಯಾಧಿಕಾರಿ ಡಾ.ಸುರೇಶ್ ತಿಳಿಸಿದ್ದಾರೆ. ಆದರೆ, ಯಾರ ಸಂಪರ್ಕವಿಲ್ಲದ ವ್ಯಕ್ತಿಯಲ್ಲಿ ಕೊರೊನಾ ಪತ್ತೆಯಾಗಿದ್ದಕ್ಕೆ ಅಧಿಕಾರಿಗಳು ಈ ಬಗ್ಗೆ ತಲೆಬಿಸಿ ಮಾಡಿಕೊಂಡಿದ್ದಾರೆ. ಹಾಗಾಗಿ ಪತ್ತೆ ಕಾರ್ಯ ಶುರುವಿಟ್ಟಿದ್ದಾರೆ.
ಇನ್ನು ಅಧಿಕಾರಿಗಳು ಆತನ ಮನೆಯವರನ್ನೂ ಕ್ವಾರಂಟೈನ್ ಮಾಡಿದ್ದಾರೆ. ಆದರೂ ಕೊರೊನಾ ಸೋಂಕಿತ ಮಂಗಮ್ಮನಪಾಳ್ಯದ ನಿವಾಸಿ P-654 ವ್ಯಕ್ತಿಯ ಸಂಪರ್ಕದ ಬಗ್ಗೆ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಇಂದು ಒಂದೇ ದಿನ ಬೆಂಗಳೂರು ನಗರದಲ್ಲಿ ನಾಲ್ಕು ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಮೂರು ಪಾದರಾಯನಪುರ ಹಾಗೂ ಒಂದು ಹೊಂಗಸಂದ್ರದಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.