ಬೆಂಗಳೂರು: ಕೊರೊನಾ ಸೋಂಕು ಹೆಚ್ಚು ಹರಡಬಾರದು ಅಂದರೆ ಸಾಮಾಜಿಕ ಅಂತರ, ಮಾಸ್ಕ್ ಹಾಕೋದು ಅನಿರ್ವಾಯ. ಹಾಗೆಯೇ ಸೋಂಕು ಇದ್ದವರಿಗೆ ಹೆಚ್ಚು ಉಲ್ಬಣವಾಗದಂತೆ ಬೇಗ ಚಿಕಿತ್ಸೆಗೆ ಒಳಪಡಬೇಕು ಅಂದರೆ ಟೆಸ್ಟಿಂಗ್ ಮಾಡಲೇಬೇಕು. ಹೆಚ್ಚು ಹೆಚ್ಚು ಜನರಿಗೆ ಕೋವಿಡ್ ಟೆಸ್ಟ್ ಮಾಡಿದಾಗಲೇ ಸೋಂಕು ಹರಡುವಿಕೆಗೆ ಹಾಗೂ ಸಾವಿನ ಪ್ರಮಾಣ ಕಡಿಮೆ ಮಾಡಲು ಸಾಧ್ಯವಾಗುತ್ತೆ. ಆದರೆ, ಮೊದಲ ಅಲೆಯಲ್ಲಿ ಇದ್ದ ಟೆಸ್ಟಿಂಗ್ ಜೋಶ್ ಇದೀಗ ಕಡಿಮೆ ಆಗಿದೆ.
ಒಂದು ಕಾಲದಲ್ಲಿ ನಿತ್ಯ 2 ಲಕ್ಷ ಮಂದಿಗೆ ಕೋವಿಡ್ ಟೆಸ್ಟ್ ಮಾಡಲಾಗುತ್ತಿತ್ತು. ಇದೀಗ ಅದರ ಅರ್ಧಕ್ಕೆ ಬಂದು ನಿಂತಿರೋದೇ 2ನೇ ಅಲೆಯಲ್ಲಿ ಗಂಭೀರ ಸ್ವರೂಪ ಉಂಟಾಗುತ್ತಿದೆ. ಸದ್ಯಕ್ಕೆ ಸೋಂಕಿತರ ಸಂಖ್ಯೆ ಇಳಿಕೆ ಆಗ್ತಿದ್ದರೂ ಸಾವಿನ ಸಂಖ್ಯೆ ಮಾತ್ರ ಕಂಟ್ರೋಲ್ ಆಗ್ತಿಲ್ಲ. ಕಾರಣ ಜನರು ಮನೆಯಲ್ಲೇ ಸ್ವಯಂ ವೈದ್ಯರಾಗಿ ಚಿಕಿತ್ಸೆ ಪಡೆಯುತ್ತಿರುವುದೇ ಆಗಿದೆ.
ಕೊರೊನಾ ಪರೀಕ್ಷೆಗೆ ಒಳಪಡದೇ ತಾವೇ ಸಿಕ್ಕ ಮಾತ್ರೆಗಳನ್ನ ತೆಗೆದುಕೊಳ್ಳುತ್ತಿದ್ದು, ಕಡೆ ಕ್ಷಣದಲ್ಲಿ ಆಸ್ಪತ್ರೆಗೆ ದಾಖಲಾಗುತ್ತಿರುವುದನ್ನ ಕಾಣಬಹುದು. ಮೇ ತಿಂಗಳ ಸಾವಿನ ಅಂಕಿ-ಅಂಶಗಳನ್ನ ನೋಡುವುದಾದರೆ ಅತೀ ಹೆಚ್ಚು ಸೋಂಕಿತರು ಮೃತರಾಗಿದ್ದಾರೆ.
ಕೋವಿಡ್ ಟೆಸ್ಟಿಂಗ್ ಸಂಖ್ಯೆ ಇಳಿಕೆ - ಕೋವಿಡ್ ಸಾವು ಏರಿಕೆ
ದಿನಾಂಕ | ಸೋಂಕಿತರ ಸಾವು | ಟೆಸ್ಟಿಂಗ್ ಸಂಖ್ಯೆ |
ಮೇ- 16 | 403 ಮಂದಿ | 1,13,219 |
ಮೇ -17 | 476 ಮಂದಿ | 97,236 |
ಮೇ -18 | 525 ಮಂದಿ | 93,247 |
ಮೇ- 19 | 468 ಮಂದಿ | 1,29,538 |
ಮೇ- 20 | 548 ಮಂದಿ | 1,20,711 |
ಮೇ- 21 | 353 ಮಂದಿ | 1,33,013 |
ಮೇ- 22 | 451 ಮಂದಿ | 1,28,761 |
ಮೇ- 23 | 626 ಮಂದಿ | 1,25,117 |
ಕಳೆದ ವರ್ಷ ಡಿಸೆಂಬರ್ನಲ್ಲಿ ಸೋಂಕು ಹೆಚ್ಚಳವಾದ ಸಂದರ್ಭದಲ್ಲಿ ಅತೀ ಹೆಚ್ಚು ಕೋವಿಡ್ ಟೆಸ್ಟಿಂಗ್ ಮಾಡಲಾಗಿತ್ತು. ನಿತ್ಯ ಒಂದೂವರೆ ಲಕ್ಷ ದಾಟುತ್ತಿದ್ದ ಟೆಸ್ಟಿಂಗ್ ಸಂಖ್ಯೆ ಈ ವರ್ಷದ ಜನವರಿ ಹಾಗೂ ಫೆಬ್ರವರಿಯ ಅಂತ್ಯದಲ್ಲಿ 50,000 ಕ್ಕೆ ಇಳಿಕೆ ಮಾಡಲಾಗಿತ್ತು. ಈ ಸಮಯದಲ್ಲಿ 400 - 500 ರಷ್ಟು ಹೊಸ ಸೋಂಕಿತರ ಸಂಖ್ಯೆ ಪತ್ತೆಯಾಗಿತ್ತು.
ಖಚಿತ ಪ್ರಕರಣಗಳ ಶೇಕಡವಾರು ಪ್ರಮಾಣ 0.74 ರಷ್ಟು ಇತ್ತು. ಆದರೆ, ಇದೀಗ ಅದೇ ಪ್ರಮಾಣ ಶೇ 25ಕ್ಕೆ ಏರಿಕೆ ಆಗಿದೆ. ಇತ್ತ ಮಾರ್ಚ್ ಅಂತ್ಯದಲ್ಲಿ ಯಾವಾಗ ಸೋಂಕಿತರ ಸಂಖ್ಯೆ ಮತ್ತೆ ಏರಿಕೆ ಆಯ್ತೋ ಆ ಸಂದರ್ಭದಲ್ಲೂ ದಿನವೊಂದಕ್ಕೆ ಒಂದು ಲಕ್ಷ ಟೆಸ್ಟಿಂಗ್ ಮಾಡುತ್ತಿದ್ದ ಇಲಾಖೆ, ಇದೀಗ ಪಾಸಿಟಿವಿಟಿ ರೇಟು ಹೆಚ್ಚಿದ್ರು ಹೆಚ್ಚು ಹೆಚ್ಚು ಟೆಸ್ಟಿಂಗ್ ಮಾಡುವುದು ಕಡಿಮೆ ಮಾಡಿದೆ.
ಮರಣ ಪ್ರಮಾಣ ಕಡಿಮೆಗೆ ಟೆಲಿ ಐಸಿಯು
ಮರಣ ಪ್ರಮಾಣದ ಅಂಕಿ - ಅಂಶವನ್ನ ಪಾರದರ್ಶಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇನ್ನು ಸೋಂಕಿತರ ಸಾವಿನ ಪ್ರಮಾಣ ಕಡಿಮೆ ಮಾಡುವ ದೃಷ್ಟಿಯಿಂದ ಪ್ರತಿ ಜಿಲ್ಲೆಯಲ್ಲಿ ಟೆಲಿ ಐಸಿಯು ವ್ಯವಸ್ಥೆ ಮಾಡಲಾಗಿದೆ. ಅದನ್ನ ಇನ್ನು ಹೆಚ್ಚಿನ ಪರಿಣಾಮಕಾರಿ ಚಿಕಿತ್ಸೆ ನೀಡಲು, ಮುನ್ನೆಚ್ಚರಿಕೆ ಕ್ರಮದೊಂದಿಗೆ ಮರಣ ಪ್ರಮಾಣ ಇಳಿಸಲು ಅಧಿಕಾರಿಗಳೊಂದಿಗೆ ದೀರ್ಘ ಸಮಯ ಚರ್ಚೆ ನಡೆದಿದೆ ಅಂತ ಸಚಿವ ಸುಧಾಕರ್ ಮಾಹಿತಿ ನೀಡಿದ್ದಾರೆ.
ಓದಿ: ಸದ್ಯದಲ್ಲೇ ಮತ್ತೊಂದು ಪ್ಯಾಕೇಜ್.. ಶ್ರಮಿಕ ವಲಯಕ್ಕೆ ಗುಡ್ ನ್ಯೂಸ್ ನೀಡಿದ ಸಿಎಂ