ಬೆಂಗಳೂರು: ಮೂರನೇ ಅಲೆ ಹೆಚ್ಚಾಗಿ ಮಕ್ಕಳಿಗೆ ಬಾಧಿಸಲಿದೆ ಎಂದು ಹೇಳಲಾಗ್ತಿತ್ತು. ಈ ಹಿನ್ನೆಲೆ ಈಗಾಗಲೇ 1 ರಿಂದ 9ನೇ ತರಗತಿಯ ಮಕ್ಕಳಿಗೆ ಆಫ್ಲೈನ್ ತರಗತಿಗಳನ್ನು ಜನವರಿ 31 ರವರೆಗೂ ಬಂದ್ ಮಾಡಲಾಗಿದ್ದು, ಇದರಿಂದ ಕೋವಿಡ್ ಹರಡುವಿಕೆಗೆ ಕೊಂಚ ತಡೆಯಾದಂತಾಗಿದೆ.
ಈವರೆಗೆ ಬೆಂಗಳೂರು ನಗರದಲ್ಲಿ 1 ರಿಂದ 19 ವರ್ಷದ ಒಟ್ಟು 6,974 ಮಕ್ಕಳಲ್ಲಿ ಕೋವಿಡ್ ದೃಢಪಟ್ಟಿದೆ. ನಗರದ ಒಟ್ಟು ಸೋಂಕಿತರ ಪ್ರಮಾಣದಲ್ಲಿ ಶೇ.12ರಷ್ಟು ಪ್ರಮಾಣದಲ್ಲಿ ಮಕ್ಕಳಿಗೆ ಕೋವಿಡ್ ಹರಡುತ್ತಿದೆ. ಆದರೆ ಖಾಸಗಿ ಆಸ್ಪತ್ರೆ ಹೊರತುಪಡಿಸಿ, ಸರ್ಕಾರಿ ಮಕ್ಕಳ ಕೋವಿಡ್ ಆಸ್ಪತ್ರೆಯಾದ ಇಂದಿರಾಗಾಂಧಿ ಆಸ್ಪತ್ರೆಗೆ 10 ಮಕ್ಕಳು ದಾಖಲಾಗಿದ್ದು, ಹೆಚ್ಡಿಯು ಬೆಡ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಹುತೇಕ ಎಲ್ಲ ಮಕ್ಕಳಲ್ಲಿಯೂ ಸೌಮ್ಯ ಗುಣಲಕ್ಷಣಗಳಿವೆ. ಆದರೆ ಶೇ.1ರಷ್ಟು ಮಕ್ಕಳಲ್ಲಿ ಮಿಸ್-ಸಿ ಗುಣಲಕ್ಷಣ ಇರಬಹುದು ಎನ್ನಲಾಗ್ತಿದೆ. ಅಂದರೆ ಹೃದಯ, ಶ್ವಾಸಕೋಶ, ಕಿಡ್ನಿ, ಮೆದುಳು, ಚರ್ಮ ಅಥವಾ ಕಣ್ಣಿನಲ್ಲಿ ಊತದ ಪರಿಸ್ಥಿತಿ ಕಂಡುಬರುತ್ತದೆ. ಇದಕ್ಕೆ ಮಕ್ಕಳಿಗೆ ಪ್ರತ್ಯೇಕವಾದ ಚಿಕಿತ್ಸಾ ವಿಧಾನದಲ್ಲಿ ಚಿಕಿತ್ಸೆ ನೀಡಲಾಗುತ್ತದೆ ಎಂದು ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯ ನಿರ್ದೇಶಕರು ತಿಳಿಸಿದ್ದಾರೆ.
ಶಿಕ್ಷಣ ಇಲಾಖೆ ವತಿಯಿಂದ ವಿದ್ಯಾರ್ಥಿಗಳಿಗೆ ಕೋವಿಡ್ ಹರಡಿರುವ ಬಗ್ಗೆ ಮಾಹಿತಿ ಕಲೆಹಾಕಿದ್ದು, ಶಿಕ್ಷಣ ಇಲಾಖೆ ಜಿಲ್ಲಾವಾರು ಮಾಹಿತಿ ಸಂಗ್ರಹಿಸಿದೆ. ಇದರ ಪ್ರಕಾರ 1 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಬೆಂಗಳೂರು ಉತ್ತರದಲ್ಲಿ - 1, ಬೆಂಗಳೂರು ದಕ್ಷಿಣದಲ್ಲಿ- 29 ಹಾಗೂ 7 ಮಂದಿ ಶಿಕ್ಷಕರಿಗೂ ಕೋವಿಡ್ ತಗುಲಿದೆ.
ದಿನಾಂಕ | 0 ರಿಂದ 9 ವರ್ಷದ ಮಕ್ಕಳು | 10-19 ವರ್ಷದ ಮಕ್ಕಳು | ಒಟ್ಟು |
ಜ. 2 | 34 | 100 | 134 |
ಜ.3 | 33 | 109 | 142 |
ಜ. 4 | 53 | 203 | 256 |
ಜ.5 | 99 | 373 | 472 |
ಜ.6 | 128 | 463 | 591 |
ಜ.7 | 208 | 726 | 934 |
ಜ.8 | 207 | 725 | 932 |
ಜ.9 | 261 | 921 | 1182 |
ಜ.10 | 274 | 878 | 1152 |
ಜ. 11 | 295 | 884 | 1179 |
ಒಟ್ಟು | 1592 | 5382 | 6974 |
ಈ ಕುರಿತು 'ಈಟಿವಿ ಭಾರತ'ದೊಂದಿಗೆ ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಡಾ.ಬಾಲಸುಂದರ್ ಮಾತನಾಡಿ, ನಗರದಲ್ಲಿ ಡಿಸೆಂಬರ್ ಅಂತ್ಯದಿಂದ ಕೋವಿಡ್ ಹೆಚ್ಚಾಗಿದೆ. ಕಳೆದ ನಾಲ್ಕೈದು ದಿನಗಳಲ್ಲಿ ಸಾವಿರಕ್ಕೂ ಹೆಚ್ಚು ಪ್ರಕರಣಗಳು ಮಕ್ಕಳಲ್ಲಿ ಕಂಡುಬರುತ್ತಿವೆ. ಈ ಬಾರಿ ನಗರದಲ್ಲಿ 15 ಸಾವಿರಕ್ಕೂ ಹೆಚ್ಚು ಮಕ್ಕಳ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಶೇ.10 ರಿಂದ 12ರಷ್ಟು ಮಕ್ಕಳಲ್ಲಿ ಪಾಸಿಟಿವ್ ಕಂಡುಬರುತ್ತಿದೆ. ಆದರೆ ಆಸ್ಪತ್ರೆಗೆ ದಾಖಲಾಗುವ ಮಕ್ಕಳ ಪ್ರಮಾಣ ಬಹಳ ಕಡಿಮೆ ಇದೆ. ಪ್ರತಿನಿತ್ಯ 2 ರಿಂದ 3 ಮಕ್ಕಳು ಮಾತ್ರ ದಾಖಲಾಗುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯ ನಿರ್ದೇಶಕರಾದ ಡಾ. ಸಂಜಯ್ ಈಟಿವಿ ಭಾರತ ಜೊತೆ ಮಾತನಾಡಿ, ಸಂಪೂರ್ಣ ಆಸ್ಪತ್ರೆ ಕೋವಿಡ್ ಆಸ್ಪತ್ರೆ ಆಗಿಲ್ಲ. ಇಲ್ಲಿನ ಒಂದು ಬ್ಲಾಕ್ ಮಾತ್ರ ಕೋವಿಡ್ಗೆ ಮೀಸಲಾಗಿದ್ದು, ಉಳಿದೆಡೆ ಬೇರೆ ಚಿಕಿತ್ಸೆ ಮುಂದುವರೆಸಲಾಗಿದೆ ಎಂದರು.
ಇದನ್ನೂ ಓದಿ: ರಾಜ್ಯದಲ್ಲಿಂದು 21 ಸಾವಿರಕ್ಕೂ ಹೆಚ್ಚು ಕೋವಿಡ್ ಕೇಸ್ ಪತ್ತೆ: ಪಾಸಿಟಿವಿಟಿ ದರ ಶೇ 10.96
ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಗೆ ಈವರೆಗೆ 10 ಮಂದಿ ದಾಖಲಾಗಿದ್ದಾರೆ. ಮಕ್ಕಳ ಕೋವಿಡ್ ಚಿಕಿತ್ಸಾ ವಿಧಾನ ಪ್ರತ್ಯೇಕವಿದೆ. ಟ್ರೀಟ್ಮೆಂಟ್ ಪ್ರೊಟೋಕಾಲ್ ಬೇರೆ ಇದ್ದು, ಆ ಪ್ರಕಾರ ಚಿಕಿತ್ಸೆ ಕೊಡಲಾಗುತ್ತಿದೆ. ದೊಡ್ಡವರಲ್ಲಿ ಎರಡನೇ ಅಲೆಯಲ್ಲಿ ಸೋಂಕಿನ ಗಂಭೀರತೆ ಹೆಚ್ಚು ಇತ್ತು. ಎರಡನೇ ಅಲೆಯಲ್ಲಿ ಮಕ್ಕಳಲ್ಲಿ ಕೋವಿಡ್ ಸೌಮ್ಯ ಲಕ್ಷಣಗಳಿದ್ದವು. ಮೂರನೇ ಅಲೆಯಲ್ಲಿಯು ಮೈಲ್ಡ್ ಸಿಮ್ಟಮ್ಸ್ಗಳಷ್ಟೇ ಇವೆ. ಮಲ್ಟಿ ಸಿಸ್ಟಂ ಇನ್ಫಾಲಾಮೇಟರಿ ಸಿಂಡ್ರೋಮ್ (ಮಿಸ್ಸಿ, MIS-C) ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತದೆ. ಆದರೆ ಮಕ್ಕಳಲ್ಲಿ ಶಾಸಕೋಶಕ್ಕೆ ಸಂಬಂಧಿಸಿದ, ಉಸಿರಾಟಕ್ಕೆ ಸಂಬಂಧಿಸಿದ ಕಾಯಿಲೆ ಕಂಡುಬರುವುದು ಕಡಿಮೆ. ಅನ್ಯ ಕಾಯಿಲೆಗಳಿದ್ದರೆ ಮಾತ್ರ ಉಸಿರಾಟಕ್ಕೆ ಸಮಸ್ಯೆ ಆಗಲಿದೆ. ಮರಣ ಪ್ರಮಾಣ ಕೇವಲ ಶೇ.1ರಷ್ಟು ಮಾತ್ರ. ಮಕ್ಕಳಲ್ಲಿ ಮಿಸ್ಸಿ ಖಾಯಿಲೆಗೆ ಬೇಕಾಗಿದ್ದು, ಐವಿಐಜಿ ಹಾಗೂ ಸ್ಟಿರಾಯ್ಡ್ ಚಿಕಿತ್ಸೆ ಬೇಕಾಗುತ್ತದೆ ಎಂದು ವಿವರಿಸಿದರು.
ಸದ್ಯಕ್ಕೆ ಮೂರನೇ ಅಲೆಯಲ್ಲಿ ಮಕ್ಕಳಲ್ಲಿ ಸೌಮ್ಯ ಗುಣಲಕ್ಷಣಗಳು ಮಾತ್ರ ಕಂಡುಬರುತ್ತಿವೆ. ಸೀಸನಲ್ ಫ್ಲೂ, ಕೆಮ್ಮು, ಶೀತ, ನೆಗಡಿ, ಕಫ ಕಂಡುಬರುತ್ತಿದೆ. ಮಕ್ಕಳಲ್ಲಿ ಚಿಕ್ಕ ವಯಸ್ಸಿನವರಿಗಿಂತ 10 ವರ್ಷ ಮೇಲ್ಪಟ್ಟವರಲ್ಲಿ ಮಾತ್ರ ಹೆಚ್ಚು ಕೋವಿಡ್ ಕಂಡುಬರುತ್ತದೆ. ನೂರರಲ್ಲಿ 1 ಮಗುವಿನಲ್ಲಷ್ಟೇ ಕೋವಿಡ್ ಗಂಭೀರ ಸ್ವರೂಪಕ್ಕೆ ಹೋಗಬಹುದು. ಅದೂ ಕೂಡ 10ರಿಂದ19 ವರ್ಷದವರಲ್ಲಿ. 10 ಕ್ಕಿಂತ ಚಿಕ್ಕ ವಯಸ್ಸಿನವರಲ್ಲಿ ಗಂಭೀರ ಸ್ವರೂಪಕ್ಕೆ ಹೋಗೋದು ಬಹಳ ಕಡಿಮೆ ಎಂದು ಅವರು ಮಾಹಿತಿ ಹಂಚಿಕೊಂಡರು.
ಮಕ್ಕಳ ಲಸಿಕೆ ಶೇ.50ರಷ್ಟು ಸಂಪೂರ್ಣ:
ಮೂರನೇ ಅಲೆ ಆರಂಭವಾದ ಬಳಿಕ 15 ರಿಂದ 17 ವರ್ಷದವರಿಗೆ ಲಸಿಕೆ ಆರಂಭಿಸಿದ್ದು, ನಗರದಲ್ಲಿ ಒಟ್ಟು 4,42,786 ಮಕ್ಕಳು ಲಸಿಕೆ ವ್ಯಾಪ್ತಿಗೆ ಒಳಪಟ್ಟಿದ್ದಾರೆ. ಈ ಪೈಕಿ 2 ಲಕ್ಷ ಮಕ್ಕಳಿಗೆ ಈಗಾಗಲೇ ಲಸಿಕೆ ಕೊಡಲಾಗಿದೆ ಎಂದು ಬಾಲಸುಂದರ್ ವಿವರಣೆ ನೀಡಿದರು.