ಬೆಂಗಳೂರು: ಕೊರೊನಾ ವೈರಸ್ ಹರಡದಂತೆ ತಡೆಗಟ್ಟಲು ಮುಂದಾಗಿರುವ ಹೈಕೋರ್ಟ್ ತನ್ನ ವಕೀಲರು ಹಾಗೂ ಕಕ್ಷಿದಾರರು ನೇರವಾಗಿ ನ್ಯಾಯಾಲಯಕ್ಕೆ ಹಾಜರಾಗುವ ಬದಲು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಯಲ್ಲಿ ಭಾಗಿಯಾಗಲು ಅನುಕೂಲವಾಗುವಂತೆ ಸೌಲಭ್ಯ ನೀಡಲು ಮುಂದಾಗಿದೆ.
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಸೂಚನೆ ಮೇರೆಗೆ ಕಂಪ್ಯೂಟರ್ ವಿಭಾಗದ ರಿಜಿಸ್ಟ್ರಾರ್ ಶಿವಶಂಕರೇಗೌಡ ಅವರು ನಿನ್ನೆ ಸಂಜೆ ಅಧಿಸೂಚನೆ ಹೊರಡಿಸಿದ್ದಾರೆ. ಈ ಅಧಿಸೂಚನೆಯಲ್ಲಿ ವಕೀಲರು, ಪಾರ್ಟಿ ಇನ್ಪರ್ಸನ್ ತಮ್ಮ ಪ್ರಕರಣಗಳ ವಿಚಾರಣೆಯಲ್ಲಿ ಭಾಗಿಯಾಗಲು ವಿಡಿಯೋ ಕಾನ್ಫರೆನ್ಸ್ ಸೌಲಭ್ಯ ಬಳಸಿಕೊಳ್ಳಬಹುದು.
ವಿಚಾರಣೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪಾಲ್ಗೊಳ್ಳಲು ಇಚ್ಛಿಸುವ ವಕೀಲರು ಕಂಪ್ಯೂಟರ್ ವಿಭಾಗದ ರಿಜಿಸ್ಟ್ರಾರ್ ಅವರಿಗೆ ಮುಂಚಿತವಾಗಿ ತಮ್ಮ ಪ್ರಕರಣಗಳ ಮಾಹಿತಿ ಜೊತೆ ಇಮೇಲ್, ಸ್ಕೈಪ್ ಐಡಿಗಳ ಮಾಃಇತಿ ನೀಡಬೇಕು. ಈ ಮಾಹಿತಿಗಳನ್ನು regcomp@hck.gov.in ಗೆ ಕಳುಹಿಸಿಕೊಡಬೇಕು ಎಂದು ತಿಳಿಸಲಾಗಿದೆ.
ನ್ಯಾಯದಾನ ಕೂಡ ಕೆಲವೊಮ್ಮೆ ತುರ್ತು ಸೇವೆ ಆಗಿರುವುದರಿಂದ ಮತ್ತು ಈಗಾಗಲೇ ನ್ಯಾಯಾಲಯಗಳಲ್ಲಿ ಲಕ್ಷಾಂತರ ಪ್ರಕರಣಗಳು ಬಾಕಿ ಉಳಿದಿರುವುದರಿಂದ ಸುಪ್ರೀಂ ಕೋರ್ಟ್ ಸಿಜೆ ನ್ಯಾಯಾಲಯಗಳಿಗೆ ರಜೆ ನೀಡುವ ಸಂಬಂಧ ಈವರೆಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಬದಲಿಗೆ ಕೋರ್ಟ್ ಕಲಾಪದ ಸಮಯದಲ್ಲಿ ಬದಲಾವಣೆ ಮಾಡಿಕೊಳ್ಳಲು ಹೈಕೋರ್ಟ್ ನ್ಯಾಯಾಧೀಶರಿಗೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ನಲ್ಲಿ ಇದೀಗ ವಿಡಿಯೋ ಕಾನ್ಫರೆನ್ಸ್ ಸೌಲಭ್ಯ ಒದಗಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.