ಬೆಂಗಳೂರು: ಕೊರೊನಾ ಬಂದ ಬಳಿಕ ಖಾಸಗಿ ವಲಯದ ಉದ್ಯಮಗಳು ನಷ್ಟಕ್ಕೆ ಸಿಲುಕಿಕೊಂಡಿದ್ದು, ಕಟ್ಟಡ ನಿರ್ಮಾಣಕ್ಕೂ ಇದರ ಬಿಸಿ ತಟ್ಟಿದೆ. ಕಟ್ಟಡ ನಿರ್ಮಾಣದ ಅಗತ್ಯ ಕಚ್ಚಾ ವಸ್ತುಗಳ ಬೆಲೆ ಏರಿಕೆ ಬಿಸಿ ಒಂದು ಕಡೆಯಾದ್ರೆ, ಇತ್ತ ಕಾರ್ಮಿಕರು ಸಿಗದಿರೋದು ಮಾಲೀಕರು ಹಾಗೂ ಗುತ್ತಿಗೆದಾರರು ಪರದಾಡುವಂತಾಗಿದೆ.
ಹೌದು ಬೆಲೆ ಏರಿಕೆಯಿಂದ ಕಟ್ಟಡ ನಿರ್ಮಾಣದ ಕಾಮಗಾರಿಗಳು ಅರ್ಧಕ್ಕೆ ನಿಲ್ಲುವ ಸ್ಥಿತಿ ನಿರ್ಮಾಣವಾಗಿದೆ. ಸಿಮೆಂಟ್, ಇಟ್ಟಿಗೆ, ಮರಳು ಹಾಗೂ ಕಬ್ಬಿಣದ ಬೆಲೆ ಹೆಚ್ಚಾಗಿದ್ದು, ಕೂಲಿ ಕಾರ್ಮಿಕರ ಸಂಬಳ ಕೂಡ ಹೆಚ್ಚಳವಾಗಿದೆ. ಇದರಿಂದ ರಿಯಲ್ ಎಸ್ಟೆಟ್ ಉದ್ಯಮ ಹಾಗೂ ಸ್ವಂತ ಮನೆ ಕಟ್ಟಿಕೊಳ್ಳುವವರ ಮೇಲೆ ಪರಿಣಾಮ ಬಿದ್ದಿದ್ದು, ಮನೆಗಳನ್ನು ಬೇಗ ಮುಗಿಸಿಕೊಂಡು ನೆಮ್ಮದಿ ಕಾಣುವ ದಾವಂತದಲ್ಲಿರುವವರಿಗೆ ಬೆಲೆ ಬಿಸಿ ಎದುರಾಗಿದೆ.
ಲಾಕ್‌ಡೌನ್‌ಗೂ ಮುನ್ನ ಎ ಗ್ರೇಡ್ ಸಿಮೆಂಟಿನ ಬೆಲೆಯು ಒಂದು ಚೀಲಕ್ಕೆ 280 ರಿಂದ 300 ರೂ ಇತ್ತು. ಅನ್ಲಾಕ್ ನಂತರದಲ್ಲಿ 400 ರಿಂದ 420 ರೂ.ಗೆ ಏರಿಸಲಾಗಿದ್ದು, 250 ರೂ. ಇದ್ದ ಬಿ ಮತ್ತು ಸಿ ಗ್ರೇಡ್ ಸಿಮೆಂಟಿನ ಬೆಲೆ ಈಗ 360 ರಿಂದ 380 ರೂ. ಆಗಿದೆ. ಇತ್ತ ಕಬ್ಬಿಣದ ಬೆಲೆಯೂ ಕೂಡ ಏರಿಕೆಯಾಗಿದ್ದು, ಪ್ರತಿ ಟನ್‌ಗೆ 2,500 ರಿಂದ 3,000 ರೂ. ಏರಿಕೆಯಾಗಿದೆ.
ಕಳೆದ ಜನವರಿಗೆ ಅವಧಿಗೆ ಆರಂಭಗೊಂಡ ಕಟ್ಟಡ ಕಾಮಗಾರಿಗಳು, ನವೆಂಬರ್ ಕೊನೆಯ ಹಂತಕ್ಕೆ ತಲುಪಿದರೂ ಮುಗಿಯುವ ಹಂತಕ್ಕೆ ಬಂದಿಲ್ಲ. ಆರೇಳು ತಿಂಗಳಲ್ಲಿ ಮುಗಿಯಬೇಕಿದ್ದ ಕಟ್ಟಡ ಕಾಮಗಾರಿಗಳು ವರ್ಷ ಸಮೀಪಿಸುತ್ತಿದ್ದರೂ ಹಾಗೆ ಸ್ಥಗಿತಗೊಂಡಿವೆ. ಇನ್ನು ಉತ್ತರ ಕರ್ನಾಟಕ ಭಾಗದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಬಿಹಾರ, ಯುಪಿ, ಆಂಧ್ರಪ್ರದೇಶ ಸೇರಿದಂತೆ ಹಲವು ರಾಜ್ಯದ ಕಾರ್ಮಿಕರು ಕೆಲಸಕ್ಕೆ ಬರ್ತಿದ್ದರು. ಇದೀಗ ಅವರೆಲ್ಲ ಅವರ ರಾಜ್ಯಗಳಿಗೆ ಹಿಂದಿರುಗಿದ್ದು, ಕಾರ್ಮಿಕರ ಸಮಸ್ಯೆಯಂತೂ ಹೇಳತೀರದಾಗಿದೆ.
ಇನ್ನು ಗುತ್ತಿಗೆದಾರರು ಹೇಳುವ ಪ್ರಕಾರ 10 ಲಕ್ಷ ರೂ. ವೆಚ್ಚದಲ್ಲಿ ಮುಗಿಯಬೇಕಾದ ಮನೆಗಳು, ಲಾಕ್‌ಡೌನ್ ಸಡಿಲಿಕೆಯ ಬಳಿಕೆ 15 ಲಕ್ಷದವರಿಗೂ ಖರ್ಚಾದರೂ ಮುಗಿಯುತ್ತಿಲ್ಲ. ಕಟ್ಟಡ ಗುತ್ತಿಗೆದಾರರು ನಷ್ಟದಲ್ಲಿದ್ದು, ಮನೆ ಮಾಲೀಕರು ಕೂಡ ಮನೆ ಕಟ್ಟಿಸಲು ಇಷ್ಟು ಹಣ ಎಲ್ಲಿಂದ ತರಲಿ ಎನ್ನುವ ಚಿಂತೆಯಲ್ಲಿ ತೊಡಗುವಂತಾಗಿದೆ.
ಇನ್ನು ಒಟ್ಟಾರೆಯಾಗಿ ಹೇಳುವುದಾದರೆ ಇದು ಗುತ್ತಿಗೆದಾರರಿಗೆ ಹೆಚ್ಚಿನ ಹೊರೆಯಲ್ಲದಿದ್ದರೂ, ಬ್ಯಾಂಕ್‌ಗಳಲ್ಲಿ ಸಾಲ ಮಾಡಿ ನೆತ್ತಿ ಮೇಲೊಂದು ಸೂರು ಕಟ್ಟಿಕೊಳ್ಳಲು ಹೊರಟ ಜನರಿಗೆ ತುಂಬಾ ಪರಿಣಾಮ ಬೀರಿದೆ. ಲಾಕ್‌ಡೌನ್‌ನಿಂದ ಕೆಲಸವಿಲ್ಲದೇ ಎಷ್ಟೋ ಮಂದಿ ತತ್ತರಿಸುತ್ತಿದ್ದು, ಇಂತಹ ಹೊತ್ತಲ್ಲಿ ಅರ್ಧಕ್ಕೆ ನಿಂತಿದ್ದ ತಮ್ಮ ಮನೆಗಳನ್ನು ಬೇಗ ಮುಗಿಸಿಕೊಂಡು ಹೊಸ ಮನೆ ಸೇರುವ ದಾವಂತದಲ್ಲಿರುವವರು ಪರದಾಡುವಂತಾಗಿರುವುದು ತಪ್ಪಿಲ್ಲ.