ಬೆಂಗಳೂರು: ಸಂಕಷ್ಟ ಬಂದಾಗ ವೆಂಕಟರಮಣ ಅನ್ನುವ ಮಾತಿದೆ. ಜನರು ತಮಗೆ ಸಂಕಷ್ಟ ಬಂದಾಗ ಪರಿಹರಿಸುವಂತೆ ದೇವರ ಬಳಿ ಹೋಗುತ್ತಾರೆ. ಆದರೆ ಕೊರೊನಾ ಕಾಟ ದೇವರಿಗೂ ತಪ್ಪಿಲ್ಲ. ಕೊರೊನಾ ಶಾಕ್‌ನಿಂದ ದೇವಸ್ಥಾನಗಳು ಭಾರೀ ನಷ್ಟ ಅನುಭವಿಸಿದ್ದು, ದೇಗುಲಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ವೇತನ ನೀಡುವುದಕ್ಕೂ ಪರದಾಡುತ್ತಿವೆ.
ಮುಜರಾಯಿ ಇಲಾಖೆ ಬಿಡುಗಡೆ ಮಾಡಿರುವ ಲೆಕ್ಕ ಪತ್ರದ ಪ್ರಕಾರ, ರಾಜ್ಯದ 21 ಪ್ರಮುಖ ದೇವಸ್ಥಾನಗಳ ಆದಾಯದಲ್ಲಿ ಶೇ.72 ಇಳಿಕೆಯಾಗಿದೆ. ಸಾಮಾನ್ಯವಾಗಿ ದೇವಸ್ಥಾನಗಳ ಪ್ರತಿ ತ್ರೈಮಾಸಿಕ ಆದಾಯವು, 7936 ಲಕ್ಷ ರೂ. ಇರುತ್ತಿದ್ದು, ವಾರ್ಷಿಕ ಆದಾಯ 31,000 ಲಕ್ಷ ರೂ. ದಾಟುತ್ತಿತ್ತು. ಆದರೆ ಕೊರೊನಾ ಲಾಕ್ಡೌನ್ನಿಂದ ಪ್ರಸಕ್ತ ಆರ್ಥಿಕ ವರ್ಷದ ದೇವಸ್ಥಾನಗಳ ಆದಾಯ, ಕಳೆದ ವರ್ಷದ ಆದಾಯದಲ್ಲಿ ಕೇವಲ 28% ಪಾಲು ಹೊಂದಿದೆ.
ಉತ್ತರ ಕನ್ನಡದ ಗೋಕರ್ಣದ ಪುರಾಣ ಪ್ರಸಿದ್ಧ ಮಹಾಬಲೇಶ್ವರ ದೇವಾಲಯ, ಇಡಗುಂಜಿಯ ಮಹಾಗಣಪತಿ ದೇವಾಲಯ, ಶಿರಸಿಯ ಮಾರಿಕಾಂಬಾ ದೇವಾಲಯ, ಮುರುಡೇಶ್ವರ ದೇವಾಲಯ ಸೇರಿದಂತೆ ಇನ್ನಿತರ ಪ್ರಮುಖ ದೇವಾಲಯಗಳಿಗೆ ಭಕ್ತ ಸಾಗರವೇ ಹರಿದು ಬರುತಿತ್ತು. ಇದರಿಂದ ದೇವಾಲಯಗಳಿಗೆ ದೊಡ್ಡ ಮಟ್ಟದ ಆದಾಯ ಹರಿದುಬರುತಿತ್ತು. ಅಲ್ಲದೆ ಇದು ದೇವಾಲಯದ ನಿರ್ವಹಣೆ ಹಾಗೂ ಅಭಿವೃದ್ಧಿ ಕಾರ್ಯಗಳಿಗೂ ಸಾಕಾರವಾಗುತಿತ್ತು. ಆದರೆ ಈಗ ಭಕ್ತರ ಸಂಖ್ಯೆ ತೀರಾ ಕಡಿಮೆಯಾಗಿದ್ದು, ಎಲ್ಲಾ ಆದಾಯಕ್ಕೆ ಕೊಕ್ಕೆ ಬಿದ್ದಿದೆ.
ಉತ್ತರಕನ್ನಡ ಜಿಲ್ಲೆಯಲ್ಲಿ 9 ಎ ದರ್ಜೆ, 8 ಬಿ ದರ್ಜೆ ಹಾಗೂ 665 ಸಿ ದರ್ಜೆ ಸೇರಿ ಒಟ್ಟು 682 ದೇವಾಲಯಗಳು ಮುಜರಾಯಿ ಇಲಾಖೆ ವ್ಯಾಪ್ತಿಗೊಳಪಟ್ಟಿದೆ. ಇದಲ್ಲದೆ ಗೋಕರ್ಣದ ಮಹಾಬಲೇಶ್ವರ ದೇವಾಲಯ ಸೇರಿದಂತೆ ಇತರೆ ದೇವಾಲಯಗಳಿಗೆ ಪ್ರತ್ಯೇಕ ಆಡಳಿತ ಮಂಡಳಿಗಳಿದ್ದು, ಎಲ್ಲ ದೇವಾಲಯಗಳಿಗೂ ಲಾಕ್ ಡೌನ್ ಪರಿಣಾಮ ಬೀರಿದೆ. 8 ರಿಂದ 10 ಲಕ್ಷ ಆದಾಯ ಪಡೆಯುತ್ತಿದ್ದ ಜಿಲ್ಲೆಯ ಎ ದರ್ಜೆಗಳ ದೇವಾಲಯಗಳಲ್ಲಿ ಕಾಲು ಭಾಗದಷ್ಟು ಆದಾಯ ಇಲ್ಲದಂತಾಗಿದೆ.
ಇನ್ನು ರಾಜ್ಯದ ಅತಿ ಶ್ರೀಮಂತ ದೇವಸ್ಥಾನ ಎಂದು ಕರೆಸಿಕೊಳ್ಳುವ ದಕ್ಷಿಣ ಕನ್ನಡದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ, ಆರ್ಥಿಕ ವರ್ಷ 2019-2020 ರಲ್ಲಿ ₹ 9892.24 ಲಕ್ಷ ರೂ. ಆದಾಯ ಕಂಡಿತ್ತು. ಆದರೆ 2020-21 ಆರ್ಥಿಕ ವರ್ಷದಲ್ಲಿ ಈ ವರೆಗೂ ಕೇವಲ 428.69 ರೂ. ಲಕ್ಷ ಆದಾಯ ಮಾತ್ರ ಕಂಡಿದೆ.
ಭಕ್ತರ ಕಾಣಿಕೆ ಹಾಗೂ ವ್ಯಾಪಾರ ಮಳಿಗೆಗಳೇ, ದೇವಾಲಯದ ಆದಾಯದ ಮೂಲವಾಗಿತ್ತು. ಆದರೆ ಕೊರೊನಾದಿಂದ ಸುಮಾರು 7 ತಿಂಗಳು ಬಹುತೇಕ ದೇವಾಲಯ ಹಾಗೂ ಮಳಿಗೆಗಳು ಬಂದಾಗಿದ್ದು, ಇದೀಗ ಕಾಣಿಕೆಯೂ ಇಲ್ಲದೆ ಇತ್ತ ಮಳಿಗೆಗಳಲ್ಲಿ ವ್ಯಾಪಾರವೂ ಇಲ್ಲದೆ ದೇವಾಲಯದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗುವ ಆತಂಕ ಎದುರಾಗಿದೆ.
ಕೊರೊನಾದಿಂದ ಎಲ್ಲರೂ ತತ್ತರಿಸಿ ಹೋಗಿದ್ದು, ಸರಿಯಾದ ನಿರ್ವಹಣೆ ಹಾಗೂ ದೇವಾಲಯಗಳಿಗೆ ಆದಾಯವಿಲ್ಲದೇ ಸಮಸ್ಯೆ ಉಂಟಾಗಿದೆ. ಸರಕಾರ ದೇವಾಲಯಗಳ ಮೇಲೆ ಸರಿಯಾದ ಗಮನ ಹರಿಸಬೇಕು. ಇದರಿಂದ ಎಲ್ಲರಿಗೂ ಅನುಕೂಲವಾಗಲಿದೆ.