ಬೆಂಗಳೂರು: ಕೊರೊನಾ ಪ್ರೇರಿತ ಲಾಕ್ಡೌನ್ನಿಂದ ಸ್ಥಗಿತಗೊಂಡಿದ್ದ ಎಲ್ಲಾ ಕ್ಷೇತ್ರಗಳು, ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅದರಲ್ಲಿ ಯುವ ಸಮೂಹದ ಪ್ರಮುಖ ಆಸಕ್ತಿದಾಯಕ ಕ್ಷೇತ್ರವಾಗಿರುವ ಕ್ರೀಡಾ ಕ್ಷೇತ್ರದಲ್ಲಿ ಯಾವುದೇ ಕ್ರೀಡಾ ಚಟುವಟಿಕೆಗಳು ಆರಂಭವಾಗಿಲ್ಲ. ಸಾಮಾನ್ಯವಾಗಿ ಕ್ರೀಡಾ ಕ್ಷೇತ್ರದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ವಿವಿಧ ಅಕಾಡೆಮಿಗಳು, ಯಾವುದೇ ರೀತಿಯ ತರಬೇತಿಯನ್ನು ಆಯೋಜನೆ ಮಾಡದೆ ತಟಸ್ಥವಾಗಿದೆ.
ಪ್ರತಿವರ್ಷ ವಿವಿಧ ಕ್ರೀಡಾಕೂಟಗಳು ರಾಜ್ಯದಲ್ಲಿ ನಡೆಯುತ್ತಿದ್ದವು. ಸಾವಿರಾರು ಕ್ರೀಡಾಪಟುಗಳು ಭಾಗಿಯಾಗುತ್ತಿದ್ದರು. ಆದರೆ ಈ ಬಾರಿ ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸಲು ಯಾರಿಗೂ ಅವಕಾಶವೇ ಇಲ್ಲದಂತಾಗಿದೆ. ಆಗಸ್ಟ್ ತಿಂಗಳ ನಂತರ ಕ್ರೀಡಾ ಇಲಾಖೆಯ ವಿವಿಧ ಕ್ರೀಡಾ ಚಟುವಟಿಕೆಯ ಕಾರ್ಯಕ್ರಮಗಳು ಆರಂಭವಾಗುತ್ತವೆ. ಆದರೆ ಈ ಬಾರಿ ಕೊರೊನಾ ಭೀತಿ ಹಿನ್ನೆಲೆ ಎಲ್ಲವೂ ಬಂದ್ ಆಗಿವೆ. ಅನ್ಲಾಕ್ ನಂತರ ಕ್ರೀಡಾ ಚಟುವಟಿಕೆಗಳು ಸಹಜ ಸ್ಥಿತಿಗೆ ಬಂದಿಲ್ಲ, ಕೋವಿಡ್ ಭೀತಿಯಿಂದ ಮಕ್ಕಳನ್ನು ಪೋಷಕರು ಕೋಚಿಂಗ್ಗೆ ಬಿಡುತ್ತಿಲ್ಲ.
ಇನ್ನು ತುಮಕೂರು ಜಿಲ್ಲೆಯಲ್ಲಿ ಪ್ರತಿವರ್ಷ ಕನಿಷ್ಠ 10 ಸಾವಿರ ಕ್ರೀಡಾಪಟುಗಳು ವಿವಿಧ ಕ್ರೀಡೆಗಳಲ್ಲಿ ಭಾಗವಹಿಸುತ್ತಿದ್ದರು. ಆದರೆ ಈ ಬಾರಿ ಜಿಲ್ಲಾ ಪಂಚಾಯತಿ ವತಿಯಿಂದ ಕ್ರೀಡಾ ಚಟುವಟಿಕೆಗಳಿಗೆ ಅನುದಾನ ನಿಗದಿ ಪಡಿಸುವ ಯಾವುದೇ ರೀತಿಯ ಕ್ರಿಯಾಯೋಜನೆಗೆ ಅನುಮೋದನೆ ಆಗಿಲ್ಲ. 2020 ಪೂರ್ಣಗೊಳ್ಳಲು ಇನ್ನು ಕೇವಲ ಎರಡು ತಿಂಗಳು ಬಾಕಿ ಇದ್ದು, ಆದರೆ ಈ ವರ್ಷ ಅನುದಾನವೇ ನಿಗದಿಯಾಗಿಲ್ಲ.
ಆಗಸ್ಟ್ ತಿಂಗಳಲ್ಲಿ ದಸರಾ ಕ್ರೀಡಾಕೂಟ, ಯುವಜನಮೇಳ, ಯುವಜನೋತ್ಸವ ಸೇರಿದಂತೆ ತಾಲೂಕು ಮಟ್ಟದಲ್ಲಿಯೂ ದಸರಾ ಕ್ರೀಡಾಕೂಟ ಆಯೋಜನೆಗೊಳ್ಳುತ್ತದೆ. ಪ್ರತಿ ತಾಲೂಕಿನಲ್ಲಿಯೂ 800 ಕ್ರೀಡಾಪಟುಗಳು ಪಾಲ್ಗೊಳ್ಳುತ್ತಾರೆ. ತಾಲೂಕು ಮಟ್ಟ ಜಿಲ್ಲಾ ಮಟ್ಟ ಹಾಗೂ ರಾಜ್ಯ ಮಟ್ಟಕ್ಕೆ ಹೋಗುವಂತಹ ಕ್ರೀಡಾಪಟುಗಳಿಗೆ, ಈ ಬಾರಿ ಯಾವುದೇ ರೀತಿಯ ಅವಕಾಶ ಸಿಗದಂತಾಗಿದೆ.
ಇನ್ನು ಅನ್ಲಾಕ್ ನಂತರ ಕ್ರೀಡಾ ಶಿಕ್ಷಣ ನೀಡುವ ಸರ್ಕಾರದ ಕ್ರೀಡಾ ಸಂಘದ 73 ಕೋಚ್ಗಳನ್ನ ಕೆಲಸದಿಂದ ವಜಾಗೊಳಿಸಲಾಗಿದೆ. ಇದರಿಂದ ಮುಂದಿನ ಭವಿಷ್ಯದ ಬಗ್ಗೆ ಕೋಚ್ಗಳು ತಲೆ ಕೆಡಿಸಿಕೊಂಡು ಕೂತಿದ್ದಾರೆ. ವಾರ್ಷಿಕವಾಗಿ ಗುತ್ತಿಗೆ ಮೇರೆಗೆ ಕೆಲಸ ಮಾಡುತ್ತಿದ್ದ ಇವರು, ಇದೀಗ ಅತಂತ್ರ ಸ್ಥಿತಿಗೆ ಬಂದಿದ್ದಾರೆ. ಹಾಗೂ ಜೂನ್ ತಿಂಗಳಲ್ಲಿ ಕ್ರೀಡಾ ಶಾಲೆಗಳಿಗೆ ಕ್ರೀಡಾಪಟುಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಆದರೆ ಈ ಬಾರಿ ಯಾವುದೇ ರೀತಿಯ ಪ್ರಕ್ರಿಯೆಗಳು ಆರಂಭವೇ ಆಗಿಲ್ಲ. ಸರ್ಕಾರದ ಆದೇಶಕ್ಕಾಗಿ ಇಲಾಖೆಯ ಅಧಿಕಾರಿಗಳು ಕಾಯುವಂತಾಗಿದೆ. ಇದು ಕೂಡ ಕ್ರೀಡಾಪಟುಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.