ಬೆಂಗಳೂರು : ಕೊರೊನಾದಿಂದ ಕೇವಲ ಬಡವರ್ಗದವರು, ಕೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಸ್ಲಂ ನಿವಾಸಿಗಳು ಅಷ್ಟೇ ತೊಂದರೆಗೆ ಸಿಲುಕಿಲ್ಲ. ಇವರೊಂದಿಗೆ ಮಧ್ಯಮ ವರ್ಗದ ಕುಟುಂಬಗಳು ಕೂಡ ಕಷ್ಟಕ್ಕೆ ಸಿಲುಕಿವೆ. ಅನೇಕರು ಬಡ ವರ್ಗದವರಿಗೆ ಲಾಕ್ಡೌನ್ ಸಂದರ್ಭದ ಕಷ್ಟದಲ್ಲಿ, ಅಗತ್ಯ ವಸ್ತುಗಳನ್ನು ನೀಡಿ ಸಹಾಯ ಹಸ್ತ ಚಾಚುತ್ತಿದ್ದಾರೆ. ಆದರೆ, ಮಧ್ಯಮ ವರ್ಗದವರ ಬದುಕಿನ ಬವಣೆ ಹೇಳ ತೀರದಾಗಿದೆ.
ದಿನಗೂಲಿ ಕಾರ್ಮಿಕರು, ಹೋಟೆಲ್ ವ್ಯಾಪಾರಿಗಳು, ಉದ್ಯಮಿಗಳು, ಖಾಸಗಿ ಕಂಪನಿಗಳ ನೌಕರರು ಸೇರಿದಂತೆ, ಮಧ್ಯಮ ವರ್ಗದವರ ಆದಾಯದಲ್ಲಿ ಗಣನೀಯ ಇಳಿಕೆ ಆಗುತ್ತಿದೆ. ಅದರಲ್ಲಿಯೂ ವರ್ತಕರು ವ್ಯಾಪಾರ, ವಹಿವಾಟು ಇಲ್ಲದೇ ಕಂಗೆಟ್ಟಿದ್ದಾರೆ. ತರಕಾರಿ, ಬೇಳೆಕಾಳು, ಪೌಷ್ಠಿಕ ಆಹಾರ ಸೇರಿದಂತೆ ಎಲ್ಲಾ ಸಾಮಗ್ರಿಗಳ ದರ ಹೆಚ್ಚಾಗಿದೆ. ಹಾಗಾಗಿ, ಕುಟುಂಬದ ಖರ್ಚು ಜಾಸ್ತಿಯಾಗುತ್ತಿದೆ.
ಒಂದೆಡೆ ಕಡಿಮೆ ಆದಾಯ, ಮತ್ತೊಂದೆಡೆ ನಿತ್ಯದ ಮನೆಯ ಖರ್ಚು ವೆಚ್ಚ ಜಾಸ್ತಿಯಾಗುತ್ತಿದೆ. ಮಾಸ್ಕ್, ಸ್ಯಾನಿಟೈಸರ್ ಸೇರಿದಂತೆ ಬೇರೆ ಖರ್ಚುಗಳು ಇವೆ. ಗೃಹಿಣಿಯರು ಮನೆಯ ಖರ್ಚು ನಿರ್ವಹಿಸುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಮನೆಯಲ್ಲಿ ಯಾರಿಗಾದರೂ ತಕ್ಷಣವೇ ಅನಾರೋಗ್ಯ ಕಾಡಿದರೆ ಹಣ ಎಲ್ಲಿಂದ ತರಬೇಕು ಎಂಬ ಚಿಂತೆಯಲ್ಲಿ ಗೃಹಿಣಿಯರಿದ್ದಾರೆ. ಆದಾಯ ಹೆಚ್ಚಿದ್ದರೆ ಎಲ್ಲವೂ ಸರಾಗವಾಗಿ ನಡೆದುಕೊಂಡು ಹೋಗುತ್ತದೆ. ಇಲ್ಲದಿದ್ದರೆ ಎಲ್ಲವೂ ಏರುಪೇರಾಗುವುದು ಸಹಜ.
ಇನ್ನು, ಪೌಷ್ಠಿಕ ಆಹಾರ ಸೇವನೆ ಈಗ ಅತಿಮುಖ್ಯ. ಕೊರೊನಾ ನಿಗ್ರಹಕ್ಕೆ ಇಂಥ ಆಹಾರ ಸೇವಿಸಬೇಕೆಂಬ ಸಲಹೆ ವೈದ್ಯರು ನೀಡಿದ್ದಾರೆ. ಆದ್ರೆ, ಖರೀದಿ ಮಾಡಲು ಹೋದರೆ ಜೇಬಿಗೆ ಕತ್ತರಿ ಬೀಳುತ್ತದೆ. ಇಂಥ ಸಂಕಷ್ಟದ ವೇಳೆಯಲ್ಲಿ ಬಾದಾಮಿ, ದ್ರಾಕ್ಷಿ, ಗೋಡಂಬಿ, ಕರ್ಜೂರ, ಕರದಂಟು, ಚಿಕ್ಕಿ, ಏಲಕ್ಕಿ, ಸಾಂಬಾರು ಪದಾರ್ಥಗಳು ಸೇರಿದಂತೆ ಪೌಷ್ಠಿಕಾಂಶಯುಕ್ತ ಆಹಾರಕ್ಕೆ ಬೇಡಿಕೆ ಕಡಿಮೆ ಆಗಿಲ್ಲ.
ಆದ್ರೆ, ದರ ಜಾಸ್ತಿ ಆಗಿದ್ದು, ಇದರಿಂದ ಖರೀದಿ ಮಾಡಲು ಜನರು ಹಿಂದೇಟು ಹಾಕುತ್ತಿದ್ದಾರೆ. ಕಳೆದ ಏಳು ತಿಂಗಳ ಹಿಂದಕ್ಕೆ ಹೋಲಿಸಿದರೆ ಈಗ ವ್ಯಾಪಾರ ಆಗೋದು ಕಡಿಮೆಯಾಗಿದೆ.
ಮನೆಯಿಂದ ಹೊರ ಬಂದರೆ ಕೊರೊನಾ ಸೋಂಕು ತಗುಲುತ್ತೆ ಎಂಬ ಭಯ ಇನ್ನೂ ಜನರ ಮನಸ್ಸಿನಿಂದ ದೂರ ಆಗಿಲ್ಲ. ಈ ಹಿನ್ನೆಲೆ
ಗ್ರಾಹಕರು ಬರುತ್ತಿರುವುದು ಕಡಿಮೆ ಆಗಿದ್ದು, ಲಾಕ್ಡೌನ್ ತೆರವುಗೊಳಿಸಿದ ಬಳಿಕ ಡ್ರೈಫ್ರೂಟ್ಸ್ ಪೂರೈಕೆ ವ್ಯತ್ಯಯ ಆಗಿಲ್ಲ. ಆದರೆ ಕೊರೊನಾದಿಂದ ಸಭೆ, ಸಮಾರಂಭಗಳಲ್ಲಿ ಹೆಚ್ಚಿನ ಜನರು ಸೇರಲು ಅನುಮತಿ ಇಲ್ಲದಿರುವುದು. ಶುಭ ಕಾರ್ಯಕ್ರಮಗಳ ಕುಂಠಿತ ಸೇರಿದಂತೆ ಹಲವು ಕಾರಣಗಳಿಂದ ಜಾಸ್ತಿ ಪ್ರಮಾಣದಲ್ಲಿ ಮಾರಾಟ ಆಗುತ್ತಿಲ್ಲ.
ಮಧ್ಯಮ ವರ್ಗದ ಕುಟುಂಬಗಳಲ್ಲಿ ಬಹತೇಕವಾಗಿ, ಮಹಿಳೆಯರೇ ಕುಟುಂಬದ ಜವಬ್ದಾರಿಯನ್ನು ಹೊತ್ತಿರುತ್ತಾರೆ. ಕೊರೊನಾ ಅವರ ಆರ್ಥಿಕ ಲೆಕ್ಕಾಚಾರವನ್ನು ತಪ್ಪುವಂತೆ ಮಾಡಿದ್ದು, ಅದರಲ್ಲೂ ಸಾಕಷ್ಟು ಜನರು ಉದ್ಯೋಗಗಳನ್ನು ಕಳೆದುಕೊಂಡಿದ್ದರಿಂದ ಹಲವು ಕುಟುಂಬಗಳಂತೂ ತೀವ್ರ ಸಂಕಷ್ಟಕ್ಕೆ ಗುರಿಯಾಗಿವೆ.