ಬೆಂಗಳೂರು: ಕೊರೊನಾ ಮನುಷ್ಯನ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರಿದ್ದು, ನಿತ್ಯವೂ ಈ ಡೆಡ್ಲಿ ವೈರಸ್ಗೆ ಜನರು ಬಲಿಯಾಗುತ್ತಿದ್ದಾರೆ. ಇತ್ತೀಚೆಗೆ ರಕ್ತ ದಾನಕ್ಕೆ ಸಂಕಷ್ಟ ಎದುರಾಗಿತ್ತು. ಆದರೆ, ಇದೀಗ ಅಂಗಾಂಗ ದಾನಕ್ಕೂ ಕೋವಿಡ್ ಅಡ್ಡಗಾಲು ಹಾಕಿದೆ.
ಕಿಡ್ನಿ, ಲಿವರ್, ಹೃದಯ ಮತ್ತು ಕಣ್ಣು ಸೇರಿದಂತೆ ಅಂಗಾಂಗ ವೈಫಲ್ಯಗಳಿಂದ, ಲಕ್ಷಾಂತರ ಜನರು ಸಂಕಷ್ಟಕ್ಕೊಳಗಾಗಿದ್ದಾರೆ. ಇಂತವರ ಸಂಕಷ್ಟಕ್ಕೆ ಅಂಗಾಂಗ ದಾನಿಗಳು ಸ್ಪಂದಿಸಿದರೆ, ಅವರ ಬಾಳಿನಲ್ಲಿ ಬೆಳಕು ತಂದ ಪುಣ್ಯ ಸಿಗಲಿದೆ. ಆದರೆ, ಅಂಗಾಂಗ ವೈಫಲ್ಯಕ್ಕೊಳಗಾದವರು ನೋವಿನಲ್ಲಿಯೇ ದಿನಗಳನ್ನು ಲೆಕ್ಕ ಹಾಕುವಂತಾಗಿದ್ದು, ಕಸಿ ಮಾಡಿಸಿಕೊಳ್ಳಬೇಕೆಂಬ ಕನಸನ್ನು ಕೊರೊನಾ ಕಸಿದುಕೊಂಡಿದೆ. ಇನ್ನೊಂದೆಡೆ ಸೋಂಕು ಭೀತಿ ಹಿನ್ನೆಲೆಯಲ್ಲಿ ಜನರೂ ಅಂಗಾಂಗ ದಾನಕ್ಕೆ ಹಿಂದೇಟು ಹಾಕಲಾರಂಭಿಸಿದ್ದಾರೆ.
ಅಂಗಾಂಗ ಕಸಿಗಾಗಿ ಇರುವ ಕರ್ನಾಟಕ ವಲಯ ಸಮನ್ವಯ ಸಮಿತಿಯನ್ನು, ಈಗ ಜೀವಸಾರ್ಥಕತೆ ಸೊಸೈಟಿ ಹೆಸರಿನಿಂದ ಕರೆಯಲಾಗುತ್ತದೆ. ಅಂಗಾಂಗ ದಾನಿಗಳ ಬಗ್ಗೆ ಆಸ್ಪತ್ರೆಗಳು ಜೀವಸಾರ್ಥಕತೆಗೆ ಮಾಹಿತಿ ನೀಡುತ್ತವೆ. ಅದೇ ರೀತಿ ಅಂಗಗಳ ಅಗತ್ಯ ಇರುವ ರೋಗಿಗಳು ಇಲ್ಲಿ ಹೆಸರು ನೋಂದಾಯಿಸಿರುತ್ತಾರೆ.
ಇದುವರೆಗೂ 4,000ಕ್ಕೂ ಅಧಿಕ ಜನರು ನೋಂದಣಿ ಮಾಡಿಕೊಂಡಿದ್ದು, ಅದರಲ್ಲಿ ಹೆಚ್ಚು ಬೇಡಿಕೆ ಕಿಡ್ನಿಗೆ ಇದೆ. ಈ ವರ್ಷ 40 ರಿಂದ 50 ಜನರಿಗೆ ಕಿಡ್ನಿ ಸಿಕ್ಕಿದೆ. ಜೀವ ಸಾರ್ಥಕತೆ ಸಂಸ್ಥೆಯ ಅಂಕಿ ಅಂಶಗಳ ಪ್ರಕಾರ, ರಾಜ್ಯದಲ್ಲಿ ಸುಮಾರು 3 ಲಕ್ಷ ಜನರು ಕಿಡ್ನಿ ಕಸಿಗಾಗಿ ಕಾಯುತ್ತಿದ್ದು, ಪ್ರತಿ ವರ್ಷ 10 ಸಾವಿರ ಜನರಿಗೆ ಮಾತ್ರ ಕಸಿ ಮಾಡಲಾಗುತ್ತಿದೆ.
ಇನ್ನು ಅಂಗಾಂಗ ಬೇರ್ಪಡಿಸುವಿಕೆ ಮತ್ತು ಕಸಿ ಮಾಡಲು ಮಂಗಳೂರಿನ ಆಸ್ಪತ್ರೆಗಳಲ್ಲಿ ವ್ಯವಸ್ಥೆಯಿದೆ. ಎಜೆ ಆಸ್ಪತ್ರೆಯಲ್ಲಿ ಅತೀ ಹೆಚ್ಚು ಅಂಗಾಂಗ ಕಸಿ ಮಾಡಲಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೇವಲ ಶೇ. 20 ರಷ್ಟು ಅಂಗಾಂಗ ದಾನದ ಪ್ರಕ್ರಿಯೆ ನಡೆದಿದ್ದು, ಜನರು ಅಂಗಾಂಗ ದಾನಕ್ಕೆ ಹಿಂದೇಟು ಹಾಕುತ್ತಿದ್ದಾರೆ.
ಇನ್ನು ಉತ್ತರ ಕರ್ನಾಟಕ ಭಾಗದ ಜನರಲ್ಲಿ ಅಂಗಾಂಗ ದಾನದ ಬಗ್ಗೆ ಮಾಹಿತಿ ಕೊರತೆ ಇದೆ. ಅದೆಷ್ಟೋ ಜನರು ಸರಿಯಾದ ಅಂಗಾಂಗ ಸಿಗದೇ ಸಾವನ್ನಪ್ಪುತ್ತಿದ್ದಾರೆ. ಒಂದು ಲಕ್ಷ ಜನರಲ್ಲಿ 150ಕ್ಕೂ ಹೆಚ್ಚು ಜನರು ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದಾರೆ. ಇಂತಹವರಿಗೆ ಮೆದುಳು ನಿಷ್ಕ್ರಿಯಗೊಂಡಿರುವ ಹಾಗೂ ಯಾವುದೇ ವ್ಯಕ್ತಿಗಳು ಅಂಗಾಂಗ ದಾನಕ್ಕೆ ಮುಂದಾದಲ್ಲಿ ಮತ್ತೊಂದು ಜೀವಕ್ಕೆ ಪುನರುಜ್ಜೀವನ ನೀಡಿದಂತಾಗುತ್ತದೆ.
ಮಣ್ಣಾಲ್ಲಿ ಮಣ್ಣಾಗುವ ದೇಹಕ್ಕೆ ಅಂತ್ಯವಿದೆಯೇ ಹೊರತು, ದೇಹದ ಅಂಗಾಂಗಳಿಗಲ್ಲ. ಸಾವಿನ ನಂತರವೂ ಮತ್ತೊಂದು ದೇಹ ಸೇರುವ ಅಂಗವೂ ಜೀವಂತವಾಗಿರುತ್ತೆ. ಅಂಗಾಂಗ ದಾನದ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸಿರುವ ಕಾರಣದಿಂದಾಗಿ ಈಗ ದಾನಿಗಳ ಪ್ರಮಾಣ ತಕ್ಕಮಟ್ಟಿಗೆ ಹೆಚ್ಚಳವಾಗಿದೆ. ಆದರೆ, ಇದೀಗ ಕೋವಿಡ್ ಕಾರಣದಿಂದಾಗಿ ನೋಂದಣಿ ಸಂಖ್ಯೆಯು ಕಡಿಮೆ ಆಗಿದೆ, ದಾನಿಗಳ ಸಂಖ್ಯೆಯು ಕಡಿಮೆಯಾಗಿದೆ.