ಬೆಂಗಳೂರು: ಸರ್ಕಾರಿ ನೌಕರರ ವೇತನ ಕಡಿತ ಮಾಡದಿರಲು ನಿರ್ಧರಿಸಿರುವ ರಾಜ್ಯ ಸರ್ಕಾರ, ಪ್ರತಿಪಕ್ಷ ನಾಯಕರ ಸಮ್ಮತಿಯೊಂದಿಗೆ ಶಾಸಕರ ವೇತನದಲ್ಲಿ ಶೇ. 30ರಷ್ಟು ಕಡಿತ ಮಾಡುವ ನಿರ್ಧಾರ ಕೈಗೊಂಡಿದೆ.
ಪ್ರತಿಪಕ್ಷ ನಾಯಕರ ಜೊತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಜೊತೆ ದೂರವಾಣಿ ಮೂಲಕ ಮಾತನಾಡಿದ ಸಿಎಂ, ಎಲ್ಲಾ ಶಾಸಕರ, ಪ್ರತಿಪಕ್ಷದ ನಾಯಕರ, ಪರಿಷತ್ ಸದಸ್ಯರ ವೇತನ ಕಡಿತ ಮಾಡೋ ಬಗ್ಗೆ ಮಾತುಕತೆ ನಡೆಸಿದರು.
ಶೇ. 30ರಷ್ಟು ವೇತನ ಕಡಿತ ಮಾಡೋ ಬಗ್ಗೆ ಮಾತುಕತೆ ನಡೆಸಲಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಆರ್ಥಿಕ ತೊಂದರೆಯಾಗುತ್ತಿದೆ. ಸರ್ಕಾರಕ್ಕೆ ಬರಬೇಕಾದ ತೆರಿಗೆ ಸಂಪೂರ್ಣ ನಿಂತಿದೆ. ಹೀಗಾಗಿ ಜನಪ್ರತಿನಿಧಿಗಳ ವೇತನ ಕಡಿತದ ಬಗ್ಗೆ ಸಿಎಂ ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಪಕ್ಷದ ನಾಯಕರು ಸಹ ಸಮ್ಮತಿ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಸಕರ ವೇತನ ಕಡಿತದ ಬಗ್ಗೆ ಸರ್ಕಾರ ನಿರ್ಧಾರ ಕೈಗೊಂಡಿದೆ.
ಇದೇ ವೇಳೆ ಯಾವುದೇ ಕಾರಣಕ್ಕೂ ಸದ್ಯದ ಪರಿಸ್ಥಿತಿಯಲ್ಲಿ ಸರ್ಕಾರಿ ನೌಕರರ ವೇತನ ಕಡಿತ ಮಾಡದಿರಲು ಸರ್ಕಾರ ನಿರ್ಧರಿಸಿದೆ ಎಂದು ಸಿಎಂ ಕಚೇರಿ ಮೂಲಗಳು ತಿಳಿಸಿವೆ.