ಬೆಂಗಳೂರು: ಕೊರೊನಾ ವೈರಸ್ಗೆ ವ್ಯಕ್ತಿ ಬಲಿಯಾದ ಹಿನ್ನೆಲೆಯಲ್ಲಿ ವೈರಸ್ ಹರಡದ ರೀತಿ ಕಟ್ಟು ನಿಟ್ಟಿನ ಕ್ರಮಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಂದಾಗಿದ್ದು, ಆರೋಗ್ಯ ಇಲಾಖೆ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಗೂ ಹಿರಿಯ ಸಚಿವರ ಜೊತೆ ಸಿಎಂ ಸಭೆ ನಡೆಸುತ್ತಿದ್ದಾರೆ.
ವಿಧಾನಸೌಧದ ಮೂರನೇ ಮಹಡಿಯಲ್ಲಿಯಲ್ಲಿರುವ ಸಮಿತಿ ಕೊಠಡಿಯಲ್ಲಿ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಡಿಸಿಎಂ ಗೋವಿಂದ ಕಾರಜೋಳ, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಶಿಕ್ಷಣ ಸಚಿವ ಸುರೇಶ್ ಕುಮಾರ್, ಆರೋಗ್ಯ ಸಚಿವ ಶ್ರೀರಾಮುಲು, ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್, ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್, ಆರೋಗ್ಯ ಇಲಾಖೆ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ದಾರೆ.
ರಾಜ್ಯದಲ್ಲಿ ವೈರಸ್ ನಿರ್ಮೂಲನೆ ಮಾಡುವ ಬಗ್ಗೆ ಗಂಭೀರ ಸಮಾಲೋಚನೆ ನಡೆಯುತ್ತಿದ್ದು, ಈಗಾಗಲೇ ವೈರಸ್ಗೆ ಕಲಬುರಗಿ ವ್ಯಕ್ತಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ವೈರಸ್ ತಡೆಗೆ ಭಾರಿ ಮುಂಜಾಗ್ರತಾ ಕ್ರಮ ವಹಿಸುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಸಿನಿಮಾ ಥಿಯೇಟರ್, ಮಾಲ್ಗಳನ್ನು ಮುಚ್ಚುವ ಬಗ್ಗೆ ಗಂಭೀರ ಚರ್ಚೆ ನಡೆದಿದ್ದು, ಈಗಾಗಲೇ ಮಾಲ್, ಥಿಯೇಟರ್ ಮುಚ್ಚುವುದಕ್ಕೆ ಸುಧಾಮೂರ್ತಿ ನೀಡಿರುವ ಸಲಹೆ ಕುರಿತು ಸಮಾಲೋಚನೆ ನಡೆಸಲಾಗುತ್ತಿದೆ.
ಸಭೆಗೂ ಮುನ್ನ ಮಾತನಾಡಿದ ಸಿಎಂ ಯಡಿಯೂರಪ್ಪ, ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಲ್ಯಾಬ್ ತೆರೆಯಲು ಕ್ರಮ ವಹಿಸಿದ್ದೇವೆ. ಕೇಂದ್ರ ಆರೋಗ್ಯ ಸಚಿವರ ಜೊತೆ ನಿರಂತರ ಸಂಪರ್ಕದ ಮೂಲಕ ವೈರಸ್ ಹರಡದಂತೆ ಕ್ರಮ ವಹಿಸಿದ್ದೇವೆ. ಇವತ್ತು ಅಧಿಕಾರಿಗಳಿಂದ ಸಲಹೆ ಪಡೆದು, ಮತ್ತಷ್ಟು ಮುಂಜಾಗ್ರತಾ ಕ್ರಮವಹಿಸೋ ಬಗ್ಗೆ ತೀರ್ಮಾನ ಮಾಡ್ತೇವೆ ಎಂದರು.
ವೈರಸ್ ಹರಡದ ಈ ರೀತಿ ಕ್ರಮ ವಹಿಸುವಂತೆ ಸುಧಾಮೂರ್ತಿಯವರು ಸಲಹೆ ಕೊಟ್ಟಿದ್ದಾರೆ ಅವರ ಸಲಹೆ ಬಗ್ಗೆ ಇಂದು ಚರ್ಚಿಸಿ ತೀರ್ಮಾನ ಮಾಡುತ್ತೇವೆ ಅವರ ಸಲಹೆಯಂತೆ ಏನು ಮಾಡಬಹುದು ಎಂಬುದರ ಬಗ್ಗೆ ಚರ್ಚೆ ಮಾಡ್ತೇವೆ ಗುಲ್ಬರ್ಗದಲ್ಲಿ ಒಂದು ಲ್ಯಾಬ್ನ್ನು ತೆರೆದಿದ್ದೇವೆ. ಕಲ್ಬುರ್ಗಿಯಲ್ಲಿ ಶರಣ ಬಸವೇಶ್ವರ ಜಾತ್ರೆ ರದ್ದು ಮಾಡಿದ್ದೇವೆ, ಯಾವುದೇ ಜಾತ್ರೆ ಹಾಗೂ ಬೇರೆ ಕಡೆಯೂ ಜನ ಸೇರಲು ಅವಕಾಶ ಕೊಡುವುದಿಲ್ಲ, ಮೈಸೂರು, ಹಾಸನ, ಬಳ್ಳಾರಿ, ಕಲ್ಬುರ್ಗಿಯಲ್ಲಿ ಈಗಾಗಲೇ ಲ್ಯಾಬ್ ತೆರೆದಿದ್ದೇವೆ, ಬರುವಂತಹ ದಿನಗಳಲ್ಲಿ ಉಳಿದ ಜಿಲ್ಲೆಗಳಲ್ಲಿ ಲ್ಯಾಬ್ ತೆರೆಯಲು ಕ್ರಮ ವಹಿಸುತ್ತೇವೆ ಎಂದರು.