ಬೆಂಗಳೂರು: ರಾಜ್ಯಾದ್ಯಂತ ಕೋವಿಡ್ ಹಿನ್ನೆಲೆಯಲ್ಲಿ 67 ನೇ ಅಖಿಲ ಭಾರತ ಸಹಕಾರ ಸಪ್ತಾಹ ನವೆಂಬರ್ 14 ರಿಂದ ನವೆಂಬರ್ 20 ರ ವರೆಗೆ ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ಸಂಜೆ ನಡೆದ 67 ನೇ ಅಖಿಲ ಭಾರತ ಸಹಕಾರ ಸಪ್ತಾಹ ಪೂರ್ವಭಾವಿ ಸಭೆ ನಡೆಸಲಾಯಿತು. ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನವೆಂಬರ್ 14 ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಉದ್ಘಾಟಿಸಲಿದ್ದಾರೆ ಎಂದರು.
ವಿವಿಧ ಸಹಕಾರ ಮಹಾಮಂಡಳಗಳು, ರಾಜ್ಯದ ಎಲ್ಲಾ ಸಹಕಾರಿ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಆಯಾ ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರ ಮಾರ್ಗದರ್ಶನದಲ್ಲಿ ಕ್ರಮವಾಗಿ ಮಂಗಳೂರು, ದಾವಣಗೆರೆ, ಚಿಕ್ಕಬಳ್ಳಾಪುರ, ಬೆಳಗಾವಿ, ಹೊಸಪೇಟೆ ಮತ್ತು ಸಮಾರೋಪ ಸಮಾರಂಭವನ್ನು ವಿಜಯಪುರದಲ್ಲಿ ಏರ್ಪಡಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಸಪ್ತಾಹ ಕಾರ್ಯಕ್ರಮದಲ್ಲಿ ಸಹಕಾರ ವಲಯದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಾ ಬಂದಿರುವ ಐದು ಜನ ಸಹಕಾರಿಗಳನ್ನು ಹಾಗೂ ಸಹಕಾರ ಇಲಾಖೆಯ ಒಬ್ಬ ನಿವೃತ್ತ ಅಧಿಕಾರಿಯನ್ನು ಸಮಿತಿ ಮೂಲಕ ಆಯ್ಕೆ ಮಾಡಿ 'ಸಹಕಾರ ರತ್ನ' ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು. ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಬೇಕೇಂದು ಸಲಹೆ ನೀಡಿದರು.
ಸಹಕಾರ ಸಂಘಗಳಿಗೆ ಸಂಬಂಧಿಸಿದ ಕಾಯ್ದೆ ತಿದ್ದುಪಡಿ ಮಾಡಲು ಕ್ರಮ ವಹಿಸಲಾಗುವುದು. ಇದರಿಂದ ಎಲ್ಲರಿಗೂ ಅನುಕೂಲವಾಗುವಂತಾಗಬೇಕು. ಇಲಾಖೆಯ ಬಲವರ್ಧನೆಗೆ ಅಧಿಕಾರಿಗಳು ಉತ್ತಮ ಗುಣಮಟ್ಟದ ಕೆಲಸ ಮಾಡಬೇಕು. ಆತ್ಮನಿರ್ಭರ ಯೋಜನೆ ಅಡಿಯಲ್ಲಿ ಆರ್ಥಿಕವಾಗಿ ದುರ್ಬಲರಾದ ಜನರಿಗೆ ನೆರವು ನೀಡುವ ಆರ್ಥಿಕ ಸ್ಪಂದನ ಕಾರ್ಯಕ್ರಮದ ಮೂಲಕ 39,300 ಕೋಟಿ ರೂ. ನೆರವು ನೀಡಲಾಗುತ್ತಿದೆ. ಧಾರವಾಡದಲ್ಲಿ ಸದ್ಯದಲ್ಲೇ ಕಾರ್ಯಕ್ರಮ ಮಾಡಲಾಗುವುದು. ಬೀದರ್ನಲ್ಲಿ ನವೆಂಬರ್ 11 ರಂದು ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.
ಕೆಎಂಎಫ್ ಅನ್ನು ಸಹಕಾರ ಇಲಾಖೆಗೆ ತೆಗೆದುಕೊಳ್ಳುವ ಚಿಂತನೆ ಇಲ್ಲ: ಕೆಎಂಎಫ್ ಬಲವರ್ಧನೆಗೆ ಎಲ್ಲಾ ರೀತಿಯ ನೆರವನ್ನು ಸರ್ಕಾರ ನೀಡುತ್ತಲೇ ಬಂದಿದೆ. ಹಾಗಾಗಿ, ಕೆಎಂಎಫ್ ಸೇರಿದಂತೆ ಯಾವುದೇ ಡೈರಿಗಳನ್ನು ನಮ್ಮ ಇಲಾಖೆಗೆ ತೆಗೆದುಕೊಳ್ಳುವ ಚಿಂತನೆ ಇಲ್ಲ ಎಂದು ಸಚಿವ ಸೋಮಶೇಖರ್ ಸ್ಪಷ್ಟಪಡಿಸಿದರು.
ಈಗಾಗಲೇ ಡೈರಿಗಳು ಬೃಹದಾಕಾರವಾಗಿ ಬೆಳೆದಿವೆ. ಇವುಗಳಿಗೆ ಅಗತ್ಯ ಶಕ್ತಿ ತುಂಬುವ ಕೆಲಸ ಸಹಕಾರ ಇಲಾಖೆ ಮಾಡಲಿದೆ. ಹೈನುಗಾರಿಕೆ ನಂಬಿ ಲಕ್ಷಾಂತರ ಮಂದಿ ಜೀವನ ಮಾಡುತ್ತಿದ್ದಾರೆ. ಈ ವ್ಯವಸ್ಥೆಗೆ ಯಾವುದೇ ಧಕ್ಕೆ ಬರದಂತೆ ನೋಡಿಕೊಳ್ಳುತ್ತೇವೆ. ಸಂಕಷ್ಟಕ್ಕೆ ಸಿಲುಕಿದ ಸಹಕಾರಿಗಳಿಗೆ ಆರ್ಥಿಕ ಸ್ಪಂದನಾ ಯೋಜನೆ ತಂದಿದ್ದೇವೆ ಎಂದು ಹೇಳಿದರು.