ಬೆಂಗಳೂರು: ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆ ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಇಂದು ಆರಂಭವಾಗಿದ್ದು, ಭೋಜನ ವಿರಾಮದ ನಂತರ ಪಾದಯಾತ್ರೆಗೆ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಗೈರಾಗಿದ್ದಾರೆ.
ಮಧ್ಯಾಹ್ನದ ಭೋಜನಕ್ಕೆ ಶಿವಾನಂದ ವೃತ್ತ ಸಮೀಪ ಇರುವ ಸರ್ಕಾರಿ ನಿವಾಸಕ್ಕೆ ತೆರಳಿರುವ ಸಿದ್ದರಾಮಯ್ಯ ತಡವಾಗಿ ಆಗಮಿಸಿ ಪಾದಯಾತ್ರೆಯಲ್ಲಿ ಸೇರಿಕೊಳ್ಳಲಿದ್ದಾರೆ ಎಂಬ ಮಾಹಿತಿ ಇದೆ.
ಮಂಗಳವಾರ ಬೆಳಗ್ಗೆ ಕೆಂಗೇರಿಯಿಂದ ಆರಂಭವಾಗಿರುವ ಪಾದಯಾತ್ರೆ ಮಧ್ಯಾಹ್ನ ಭೋಜನ ವಿರಾಮಕ್ಕಾಗಿ ಹಾಗೂ ವಿಶ್ರಾಂತಿಗಾಗಿ ಕತ್ರಿಗುಪ್ಪೆ ಸಮೀಪ ನಿಂತಿತ್ತು. ಇದೀಗ ಕೆಪಿಸಿಸಿ ಅಧ್ಯಕ್ಷರ ನೇತೃತ್ವದಲ್ಲಿ ಪಾದಯಾತ್ರೆ ಮುಂದುವರಿದಿದ್ದು, ಸಂಜೆ ಬಿಟಿಎಂ ಲೇಔಟ್ನಲ್ಲಿ ದಿನದ ಪಾದಯಾತ್ರೆ ಮುಕ್ತಾಯವಾಗಲಿದೆ.
ಬೆಂಗಳೂರು ನಗರದಲ್ಲಿ ಐದು ದಿನ ಪಾದಯಾತ್ರೆ ನಡೆಸಲು ತೀರ್ಮಾನಿಸಿದ ಕಾಂಗ್ರೆಸ್ ಬಜೆಟ್ ಮಂಡನೆ ಹಿನ್ನೆಲೆ ಮೂರು ದಿನಕ್ಕೆ ಇಳಿಸಿದೆ. ಮೊದಲ ದಿನದ ಪಾದಯಾತ್ರೆ ಬಿಟಿಎಂ ಲೇಔಟ್ ತಲುಪಿ ಮುಕ್ತಾಯಗೊಂಡ ಎರಡನೇ ದಿನ ಅಲ್ಲಿಂದ ಅರಮನೆ ಮೈದಾನಕ್ಕೆ ಆಗಮಿಸಲಿದೆ. ಮಾರ್ಚ್ ಮೂರರಂದು ಪಾದಯಾತ್ರೆಯ ಕೊನೆಯ ದಿನ ಅರಮನೆ ಮೈದಾನದಿಂದ ನ್ಯಾಷನಲ್ ಕಾಲೇಜಿಗೆ ತಲುಪುವ ಪಾದಯಾತ್ರೆ ಬೃಹತ್ ಸಮಾವೇಶದ ಮೂಲಕ ಮುಕ್ತಾಯಗೊಳ್ಳಲಿದೆ.
ಇದನ್ನೂ ಓದಿ: ರಾಜ್ಯ ಬಜೆಟ್ನಲ್ಲಿ ರೈತ ಸಮುದಾಯದ ನಿರೀಕ್ಷೆಗಳ ಬಗ್ಗೆ ಕುರುಬೂರು ಶಾಂತಕುಮಾರ್ ಮಾತು..