ಬೆಂಗಳೂರು/ ನವದೆಹಲಿ : ರಾಜ್ಯ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ವತಿಯಿಂದ ನವದೆಹಲಿಯಲ್ಲಿ ಭಾರತ ಅಂತಾರಾಷ್ಟ್ರೀಯ ವ್ಯಾಪಾರ ಮೇಳ 2023 ನಡೆಯುತ್ತಿದೆ. ಇಲ್ಲಿನ ಪ್ರಗತಿ ಮೈದಾನದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಲಾಗಿರುವ ಕರ್ನಾಟಕ ಪೆವಿಲಿಯನ್ ಮಾದರಿಯಲ್ಲಿ 50 ಮಳಿಗೆಗಳನ್ನು ಒಳಗೊಂಡ ಒಂದು ಶಾಪಿಂಗ್ ಕಟ್ಟಡ ಸಂಕೀರ್ಣವನ್ನು ಆದಷ್ಟು ಬೇಗ ದೆಹಲಿಯಲ್ಲಿ ನಿರ್ಮಾಣ ಮಾಡುವುದಾಗಿ ದೆಹಲಿ ವಿಶೇಷ ಪ್ರತಿನಿಧಿ ಟಿ ಬಿ ಜಯಚಂದ್ರ ಅವರು ಪ್ರಕಟಿಸಿದ್ದಾರೆ.
ನವದೆಹಲಿಯ ಪ್ರಗತಿ ಮೈದಾನದಲ್ಲಿ ಇಂದು ಆಯೋಜಿಸಿದ್ದ ಭಾರತ ಅಂತಾರಾಷ್ಟ್ರೀಯ ವ್ಯಾಪಾರ ಮೇಳ 2023ರಲ್ಲಿ ಕರ್ನಾಟಕ ಪೆವಿಲಿಯನ್ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಕರ್ನಾಟಕ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟಕ್ಕಾಗಿ ದೆಹಲಿಯಲ್ಲಿ 50 ಮಳಿಗೆಗಳನ್ನು ಶಾಶ್ವತವಾಗಿ ನಿರ್ಮಾಣ ಮಾಡಲಾಗುವುದು. ಇದರಿಂದ ಕರ್ನಾಟಕದ ಗುಡಿ ಕೈಗಾರಿಕೆಗೆ ಉತ್ತೇಜನ ನೀಡಿದಂತಾಗುತ್ತದೆ ಎಂದು ತಿಳಿಸಿದರು.
ಬಳಿಕ ಕರ್ನಾಟಕ ಪೆವಿಲಿಯನ್ನಲ್ಲಿ ಇರುವ 40ಕ್ಕೂ ಹೆಚ್ಚು ಮಳಿಗೆಗಳನ್ನು ಜಯಚಂದ್ರ ಅವರು ವೀಕ್ಷಿಸಿದರು. ರಾಜ್ಯದ 31 ಜಿಲ್ಲೆಗಳಿಂದ ಆಗಮಿಸಿದ್ದ ಗ್ರಾಮೀಣ ಗುಡಿ ಕೈಗಾರಿಕೆ ವಸ್ತುಗಳು, ಚನ್ನಪಟ್ಟಣದ ಗೊಂಬೆಗಳು, ಕೆಎಸ್ಐಸಿ ಮೈಸೂರು ಸಿಲ್ಕ್ ಸೀರೆಗಳು, ಸಿರಿಧಾನ್ಯಗಳು, ಮರದಿಂದ ಮಾಡಿದ್ದ ಅಲಂಕಾರಿಕ ವಸ್ತುಗಳು, ತೆಂಗು ಮತ್ತು ನಾರು ಅಭಿವೃದ್ಧಿ ಮಂಡಳಿ ತಯಾರಿಸಿದ್ದ ಉತ್ಪನ್ನಗಳು ಚರ್ಮದ ಉತ್ಪನ್ನಗಳು ಆಯುರ್ವೇದ ಔಷಧಿಗಳು, ವಿವಿಧ ಬಗೆಯ ತಿಂಡಿತಿನಿಸುಗಳು ಸೇರಿದಂತೆ ಕರ್ನಾಟಕದಲ್ಲಿ ತಯಾರಿಸಿದ್ದ ವಿವಿಧ ಉತ್ಪನ್ನಗಳನ್ನು ವೀಕ್ಷಿಸಿ ಮಾರಾಟಗಾರರಿಗೆ ಪ್ರೋತ್ಸಾಹ ನೀಡಿದರು. ಈ ಸಂದರ್ಭದಲ್ಲಿ ಕರ್ನಾಟಕ ಭವನ ನಿವಾಸಿ ಆಯುಕ್ತರಾದ ಎಂ. ಇ. ಕೊಂಗ್ಲ ಜಮೀರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ : ರಾಜ್ಯ ಬಿಜೆಪಿ ನೊಗ ಹೊತ್ತ ವಿಜಯೇಂದ್ರ: ಯುವ ನಾಯಕನಿಗೆ ಹಿರಿಯರ ಬೆಂಬಲ