ಬೆಂಗಳೂರು: ಇಂದಿನಿಂದ ಬಿಬಿಎಂಪಿಯ ಎಲ್ಲಾ ವಾರ್ಡ್‌ಗಳಲ್ಲಿ ರಸ್ತೆ, ಚರಂಡಿ ಕಾಮಗಾರಿ ಸೇರಿದಂತೆ ಪಾಲಿಕೆಯ ನಿರ್ಮಾಣ ಕಾರ್ಯಗಳನ್ನು ಪುನರಾರಂಭಿಸಲಾಗುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಕಾರ್ಮಿಕರ ವಲಸೆ ಸ್ಥಿತಿಗತಿ ಹಾಗು ನಿರ್ಮಾಣ ಕಾರ್ಯ ಪುನರಾರಂಭಿಸುವ ಕುರಿತು ಅವರು ಮಾತುಕತೆ ನಡೆಸಿದರು.
ಸಿಎಂ ಭೇಟಿ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಆರ್.ಅಶೋಕ್, ಬಿಬಿಎಂಪಿ ವ್ಯಾಪ್ತಿಯಲ್ಲಿ ಪಾಲಿಕೆಯ ಕೆಲಸ ಕಾರ್ಯ ಆರಂಭಿಸಲಾಗುತ್ತದೆ. ಇಂದು ಈ ಸಂಬಂಧ ಸಿಎಂ ಸಭೆ ನಡೆಸಲಿದ್ದು ಮೆಟ್ರೋ, ಕ್ರೆಡೆಲ್ ಕೆಲಸ ಪ್ರಾರಂಭ ಮಾಡಲು ಆದೇಶ ಕೊಡಲಾಗುತ್ತದೆ ಎಂದರು.
ಸಾಕಷ್ಟು ಸಂಖ್ಯೆಯಲ್ಲಿ ಹೊರರಾಜ್ಯಗಳ ಕಾರ್ಮಿಕರು ತಮ್ಮೂರಿಗೆ ಹೋಗಲು ಮುಂದಾಗಿದ್ದಾರೆ. ಆದರೆ ಆಯಾ ರಾಜ್ಯಗಳು ಇನ್ನೂ ಒಪ್ಪಿಗೆ ನೀಡಿಲ್ಲ. ಹಾಗಾಗಿ ಒಪ್ಪಿಗೆ ಬಂದ ತಕ್ಷಣ ಅವರನ್ನೆಲ್ಲಾ ಅವರವರ ರಾಜ್ಯಗಳಿಗೆ ಕಳುಹಿಸಿಕೊಡುವ ಕೆಲಸ ಮಾಡಲಾಗುತ್ತದೆ ಎಂದು ತಿಳಿಸಿದರು.
ರೈಲು ಟಿಕೆಟ್ ಬುಕ್ ಮಾಡಿದವರು ಹೋಗಲಿದ್ದಾರೆ. ಆದರೆ ಟಿಕೆಟ್ ಬುಕ್ ಮಾಡದವರ ಮನವೊಲಿಸಿ ಬಿಎಂಟಿಸಿ ಬಸ್ ವ್ಯವಸ್ಥೆ ಮಾಡಿ ಕ್ಯಾಂಪ್‌ಗಳಿಗೆ ವಾಪಸ್ ಕಳಿಸಿ ಕೊಡಲಾಗುತ್ತದೆ. ಅಲ್ಲಿ ಅವರಿಗೆ ಬೇಕಾದ ವ್ಯವಸ್ಥೆ ಮಾಡಿಕೊಡಲಿದ್ದೇವೆ. ಅವರ ರಾಜ್ಯದವರು ಒಪ್ಪಿಗೆ ಕೊಟ್ಟಿಲ್ಲದ ಕಾರಣಕ್ಕೆ ಕ್ಯಾಂಪ್‌ಗೆ ಕರೆತರಲಿದ್ದೇವೆ. ಒಪ್ಪಿಗೆ ಕೊಟ್ಟ ಕೂಡಲೇ ಅವರನ್ನೆಲ್ಲಾ ವಾಪಸ್ ಕಳಿಸಲಿದ್ದೇವೆ. ಅಲ್ಲಿಯವರೆಗೂ ಅವರೆಲ್ಲಾ ಕ್ಯಾಂಪ್‌ನಲ್ಲಿನಿರಬೇಕು. ಅವರಿಗೆಲ್ಲಾ ಉಚಿತ ಊಟ ಹಾಗು ಕೆಲಸ ಕೊಡುವ ವ್ಯವಸ್ಥೆ ಸರ್ಕಾರ ಮಾಡಲಿದೆ ಎಂದು ವಿವರಿಸಿದರು.
ಈಗಾಗಲೇ ಹೊರ ರಾಜ್ಯದ ಕಾರ್ಮಿಕರ ವಿಷಯ ಸಂಬಂಧ ಆ ರಾಜ್ಯಗಳ ಅಧಿಕಾರಿಗಳು ಹಾಗು ಮುಖ್ಯಮಂತ್ರಿಗಳ ಜೊತೆ ಸಂಪರ್ಕದಲ್ಲಿದ್ದೇವೆ. ಅಲ್ಲಿನ ರಾಜ್ಯದ ಅನುಮತಿ ಬಂದ ತಕ್ಷಣ ಅವರನ್ನು ಕಳುಹಿಸಿ ಕೊಡುವ ಕೆಲಸ ಮಾಡಲಾಗುತ್ತದೆ.
ಈಗಾಗಲೇ ಕಾರ್ಮಿಕ ಇಲಾಖೆ ಊಟ ವಿತರಿಸುವ ಕೆಲಸ ಪುನರಾರಂಭ ಮಾಡಿದೆ. ಕಾರ್ಮಿಕರು ಎಲ್ಲಿದ್ದಾರೋ ಅಲ್ಲಿನ ಕ್ಯಾಂಪ್‌ಗಳಿಗೆ ಹೋಗಿ ಉಚಿತ ಊಟ ಕೊಡಲಾಗುತ್ತದೆ. ಈವರೆಗೂ ಅವರು ಕೆಲಸ ಮಾಡಿದ್ದ ಕಂಪನಿಗಳು ವೇತನ ಬಾಕಿ ಉಳಿಸಿಕೊಂಡಿದ್ದರೆ ಕೂಡಲೇ ವೇತನ ಕೊಡಲು ನಾಳೆ ಸಿಎಂ ತಾಕೀತು ಮಾಡಲಿದ್ದಾರೆ ಎಂದರು.