ಬೆಂಗಳೂರು: ಬಿಬಿಎಂಪಿ ಹೊಸದಾಗಿ ನಿರ್ಮಿಸುತ್ತಿರುವ ವೈಟ್ ಟಾಪಿಂಗ್, ಟೆಂಡರ್ ಶ್ಯೂರ್ ರಸ್ತೆಗಳ ಚರಂಡಿಗಳಲ್ಲಿ, ಹಾಗೂ ದೊಮ್ಮಲೂರು ವಾರ್ಡ್ನ ಕೆಲ ಚರಂಡಿಗಳಲ್ಲಿ ಇಂಗು ಗುಂಡಿ ನಿರ್ಮಿಸಿ ಮಳೆ ನೀರು ಇಂಗುವಂತೆ ಮಾಡಲು ತೆಗೆದುಕೊಂಡಿರುವ ಕ್ರಮ ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದೆ.
ಬೆಂಗಳೂರು ಬರಬರುತ್ತಾ ಕಾಂಕ್ರೀಟ್ ಕಾಡಾಗುತ್ತಿದೆ, ಮಳೆ ನೀರು ಭೂಮಿಗೆ ಇಂಗದಂತೆ ಎಲ್ಲೆಡೆ ಕಾಂಕ್ರೀಟ್ ಸುರಿಯಲಾಗುತ್ತಿದೆ ಎಂಬ ಅಪವಾದ ಬಿಬಿಎಂಪಿಗೆ ಕೇಳಿಬಂದಿತ್ತು. ಆದರೆ ಇತ್ತೀಚೆಗೆ ನೂತನ ಹೆಜ್ಜೆ ಇಟ್ಟಿರುವ ಬಿಬಿಎಂಪಿ, ಹೊಸದಾಗಿ ನಿರ್ಮಿಸುತ್ತಿರುವ ವೈಟ್ ಟಾಪಿಂಗ್, ಟೆಂಡರ್ ಶ್ಯೂರ್ ರಸ್ತೆಗಳ ಕೆಲ ಚರಂಡಿಗಳಲ್ಲಿ ಇಂಗು ಗುಂಡಿ ನಿರ್ಮಿಸಿ ಮಳೆನೀರು ಇಂಗುವಂತೆ ಮಾಡಿದೆ.
ವೈಟ್ ಟಾಪಿಂಗ್ ರಸ್ತೆಯ ಎರಡೂ ಬದಿಗಳಲ್ಲಿ ಇಂಗುಗುಂಡಿ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಒಂದು ಕಿ.ಮೀ ಉದ್ದದ ರಸ್ತೆಯ ಇಕ್ಕೆಲಗಳಲ್ಲಿ ನೂರು ಇಂಗುಗುಂಡಿಗಳನ್ನು, ಇಪ್ಪತ್ತರಿಂದ ಇಪ್ಪತ್ತೈದು ಮೀಟರ್ಗೆ ಒಂದು ಇಂಗುಗುಂಡಿ ನಿರ್ಮಾಣಕ್ಕೆ ಕ್ರಮ ವಹಿಸಲಾಗಿದೆ. ಸಾರ್ವಜನಿಕರ ದೂರುಗಳನ್ನು ಗಮನಿಸಿ, ಹಾಗೆಯೇ ಬೆಂಗಳೂರಿನ ನೀರಿನ ಸಮಸ್ಯೆ ಹತೋಟಿಗೆ ತರಲು ಇಂಗುಗುಂಡಿ ನಿರ್ಮಾಣಕ್ಕೆ ಪಾಲಿಕೆ ಮುಂದಾಗಿದೆ ಎಂದು ಮೇಯರ್ ಗಂಗಾಂಬಿಕೆ ತಿಳಿಸಿದರು.