ಬೆಂಗಳೂರು: ''ಆರ್ಥಿಕ ಸಂಕಷ್ಟ ಎದುರಾಗಿರುವುದರಿಂದ ಪ್ರಸ್ತುತ ಹೈಟೆಕ್ ಬಸ್ ನಿಲ್ದಾಣಗಳನ್ನು ನಿರ್ಮಿಸಲು ಸಾಧ್ಯವಿಲ್ಲ'' ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ತಿಳಿಸಿದರು.
ವಿಧಾನಸಭೆಯಲ್ಲಿ ಬುಧವಾರ ಪ್ರಶ್ನೋತ್ತರ ವೇಳೆ, ಜೆಡಿಎಸ್ ಶಾಸಕ ಡಾ.ಕೆ.ಅನ್ನದಾನಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ''ಕೋವಿಡ್ ಕಾರಣದಿಂದಾಗಿ ಅನೇಕ ಕಡೆ ಬಸ್ ಸಂಚಾರವೇ ಆಗಿಲ್ಲ. ನೌಕರರು ಮತ್ತು ಸಿಬ್ಬಂದಿಗಳ ಕುಟುಂಬಕ್ಕೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಸರ್ಕಾರ ನಮ್ಮ ಇಲಾಖೆ 5ರಿಂದ 6 ಸಾವಿರ ಕೋಟಿ ರೂ. ಸಾಲ ನೀಡಿದೆ'' ಎಂದು ಹೇಳಿದರು.
ಸಾರಿಗೆ ಇಲಾಖೆಯ ಬಹುತೇಕ ಎಲ್ಲ ನಿಗಮಗಳು ನಷ್ಟದಲ್ಲಿವೆ. ಇಂತಹ ಸಂದರ್ಭದಲ್ಲಿ ನಾವು ಹೈಟೆಕ್ ಬಸ್‍ನಿಲ್ದಾಣಗಳನ್ನು ನಿರ್ಮಿಸಲು ಹೇಗೆ ಸಾಧ್ಯ? ಹೊಸ ಬಸ್‍ಗಳ ಖರೀದಿಗೆ ತೀರ್ಮಾನಿಸಲಾಗಿದ್ದು, ಈಗಾಗಲೇ ಟೆಂಡರ್ ಪ್ರಕ್ರಿಯೆಯನ್ನು ಪೂರ್ಣವಾಗಿದೆ ಎಂದರು.
ಸದನದ ಗಮನ ಸೆಳೆದ ಡಿ.ಸಿ.ತಮ್ಮಣ್ಣ: ಈ ವೇಳೆ ಮಧ್ಯ ಪ್ರವೇಶಿಸಿದ ಜೆಡಿಎಸ್ ಶಾಸಕ ಡಿ.ಸಿ.ತಮ್ಮಣ್ಣ ಅವರು, ''ನಾನು ಸಾರಿಗೆ ಸಚಿವನಾಗಿದ್ದಾಗ ಮದ್ದೂರು, ಮಂಡ್ಯ, ಮಳವಳ್ಳಿ ವಿಧಾನಸಭಾ ಕ್ಷೇತ್ರಗಳಲ್ಲಿ ಹೈಟೆಕ್ ಬಸ್ ನಿಲ್ದಾಣ ನಿರ್ಮಿಸಲು ಅನುಮೋದನೆ ನೀಡಲಾಗಿತ್ತು. ಮೈತ್ರಿ ಸರ್ಕಾರ ಪತನವಾದ ಬಳಿಕ ಈ ಪ್ರಸ್ತಾವನೆ ಕಾಗಕ್ಕೆ ಮಾತ್ರ ಸೀಮಿತವಾಗಿದೆ. ನಾನು ಯಾರಿಗೂ ತಾರತಮ್ಯ ಮಾಡಿರಲಿಲ್ಲ. ಉತ್ತರ ಕರ್ನಾಟಕದ ಅನೇಕ ಕಡೆ ಬಸ್ ನಿಲ್ದಾಣ ನಿರ್ಮಾಣಕ್ಕೆ ಅನುಮೋದನೆ ನೀಡಿದ್ದೆ'' ಎಂದು ಸದನದ ಗಮನ ಸೆಳೆದರು.
ಹೊಸ ಬಸ್ ಖರೀದಿಗೆ ತೀರ್ಮಾನ: ಶಾಸಕ ಆರ್.ನರೇಂದ್ರ ಅವರ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಸಚಿವ ಶ್ರೀರಾಮುಲು, ''ಇಲಾಖೆಯಿಂದ ಹೊಸ ಬಸ್ ಖರೀದಿಗೆ ತೀರ್ಮಾನ ಕೈಗೊಳ್ಳಲಾಗಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಹೊಸ ಬಸ್ಗಳು ಬರುತ್ತಿದ್ದಂತೆ ಆದ್ಯತೆ ಮೇರೆಗೆ ಬಸ್ ಒದಗಿಸುವುದು ಎಂದು ಮಾಹಿತಿ ನೀಡಿದರು.
ಪುನರ್ ಪರಿಶೀಲಿಸಲು ಮನವಿ: ಬೆಳಗಾವಿ ಜಿಲ್ಲೆ ಮಚ್ಚೆ ಗ್ರಾಮದಲ್ಲಿ ಕಾರ್ಮಿಕ ವಿಮಾ ಆಸ್ಪತ್ರೆಯನ್ನು ಹಿಂದೆ ನಿಗದಿಪಡಿಸಿದ ಸ್ಥಳದಲ್ಲೇ ನಿರ್ಮಿಸಲು ಕೇಂದ್ರದ ಅಧಿಕಾರಿಗಳಿಗೆ ಪುನರ್ ಪರಿಶೀಲಿಸಲು ಮನವಿ ಮಾಡುವುದಾಗಿ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಅವರು, ಬಿಜೆಪಿ ಶಾಸಕ ಅಭಯ್ ಪಾಟೀಲ್ ಕೇಳಿದ ಪ್ರಶ್ನೆಗೆ ಉತ್ತರ ಕೊಟ್ಟರು.
ಕಾರ್ಮಿಕರ ರಾಜ್ಯ ವಿಮಾ ಆಸ್ಪತ್ರೆ: ಈಗಾಗಲೇ ಮಚ್ಚೆ ಗ್ರಾಮದಲ್ಲಿ ಕಾರ್ಮಿಕರ ರಾಜ್ಯ ವಿಮಾ ಆಸ್ಪತ್ರೆ ಪಾರಂಭಿಸಲು ಕರ್ನಾಟಕ ರಾಜ್ಯ ವಿಮಾ ನಿಗಮದ ಪ್ರಾದೇಶಿಕ ನಿರ್ದೇಶಕರೊಂದಿಗೆ ಸಮಾಲೋಚನೆ ನಡೆಸಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಮಚ್ಚೆ ಗ್ರಾಮದಲ್ಲಿ ಆಸ್ಪತ್ರೆ ನಿರ್ಮಾಣ ಮಾಡಲು 5 ಎಕರೆ ಸ್ಥಳ ಗುರುತಿಸಲಾಗಿತ್ತು. ಕೇಂದ್ರದಿಂದ ಆಗಮಿಸಿದ್ದ ಅಧಿಕಾರಿಗಳ ತಂಡ ಎರಡು ಕಡೆ ರಸ್ತೆ ಇಲ್ಲ ಎಂಬ ಕಾರಣಕ್ಕೆ ಪ್ರಸ್ತಾವನೆಯನ್ನು ತಡೆಹಿಡಿದಿದೆ. ಇದು 40 ಸಾವಿರ ಕಾರ್ಮಿಕರ ಭವಿಷ್ಯದ ಪ್ರಶ್ನೆಯಾಗಿದೆ. ಹೀಗಾಗಿ ಈ ಹಿಂದೆ ನಿಗದಿಪಡಿಸಿದ ಸ್ಥಳದಲ್ಲೇ ಆಸ್ಪತ್ರೆ ನಿರ್ಮಿಸುವಂತೆ ಮನವಿ ಮಾಡಲಾಗುವುದು'' ಎಂದರು.
ಇದಕ್ಕೂ ಮುನ್ನ ಶಾಸಕ ಅಭಯ ಪಾಟೀಲ್ ಮಾತನಾಡಿ, ''ಇಲ್ಲಿ ಶಾಶ್ವತ ಕಟ್ಟಡಗಳು ಇಲ್ಲದಿರುವುದರಿಂದ ಕಾರ್ಮಿಕರು ಚಿಕಿತ್ಸೆ ಪಡೆಯಲು ಪರದಾಡುತ್ತಿದ್ದಾರೆ. ಯಾವುದಾದರೂ ಖಾಲಿ ಇರುವ ಹಾಸ್ಟೆಲ್ ಬಾಡಿಗೆ ಪಡೆದು ತಾತ್ಕಾಲಿಕವಾಗಿ ಆಸ್ಪತ್ರೆಯನ್ನು ಮುಂದುವರೆಸಬೇಕು'' ಎಂದು ಆಗ್ರಹಿಸಿದರು.
ಇದನ್ನೂ ಓದಿ: ಹಣಕಾಸು ಇಲಾಖೆ ಅನುಮೋದನೆ ಪಡೆದು ವಾಲ್ಮೀಕಿ ಭವನಗಳ ನಿರ್ಮಾಣ: ಸಚಿವ ಶ್ರೀರಾಮುಲು