ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಮಂತ್ರಿ ಮಂಡಲದ ವಿರುದ್ಧ ಕಾಂಗ್ರೆಸ್ ಮಂಡಿಸಿದ್ದ ಅವಿಶ್ವಾಸ ನಿರ್ಣಯದ ಪ್ರಸ್ತಾವನೆಗೆ ಧ್ವನಿಮತದ ಮೂಲಕ ಸೋಲುಂಟಾಯಿತು.
ಶುಕ್ರವಾರದ ವಿಧಾನಸಭೆಯಲ್ಲಿ ಪ್ರತಿ ಪಕ್ಷ ಕಾಂಗ್ರೆಸ್ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಮಂಡಿಸಿತ್ತು. ಸುಮಾರು ಐದು ಗಂಟೆಗಳ ಕಾಲ ನಡೆದ ಚರ್ಚೆಯ ನಂತರ ನಿರ್ಣಯವನ್ನು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಧ್ವನಿಮತಕ್ಕೆ ಹಾಕಿ ನಿರ್ಣಯ ತಿರಸ್ಕರಿಸಲ್ಪಟ್ಟಿತ್ತು ಎಂದು ಘೋಷಿಸಿದರು.
ಬಹಮತ ಇದ್ದರೂ ಸಿಎಂ ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರವು ಸದನದ ವಿಶ್ವಾಸ ಕಳೆದುಕೊಂಡಿದೆ ಎಂದು ಸಿದ್ದರಾಮಯ್ಯ ಅವಿಶ್ವಾಸ ನಿರ್ಣಯವನ್ನು ಮಂಡಿಸಿದ್ದರು. ಜೊತೆಗೆ ವಿಧಾನಸಭೆಯ ನಿಯಮ 167ರ ಅಡಿಯಲ್ಲಿ ತಮಗೆ ನೋಟಿಸ್ ನೀಡಿದ್ದೇನೆ. ಚರ್ಚೆಗೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದರು.
ರಾಜ್ಯದಲ್ಲಿ ವ್ಯಾಪಕವಾಗಿ ಕೊರೊನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್ ಪಾಸಿಟಿವ್ ಬಂದಿರುವ ಶಾಸಕರನ್ನು ಸದನಕ್ಕೆ ಕರೆಸಲು ಸಾಧ್ಯವಿಲ್ಲದ ಕಾರಣ ಮತದಾನಕ್ಕೆ ಅವಕಾಶವಿಲ್ಲ ಎಂದು ಕಾಗೇರಿ ಸ್ಪಷ್ಟಪಡಿಸಿದ್ದರು.