ಬೆಂಗಳೂರು: ಇಂದು ವಿಧಾನಸೌಧದಲ್ಲಿ ಮಾತನಾಡಿದ ಸಚಿವ ಸಿ.ಟಿ. ರವಿ, ಶಾಸಕ ತನ್ವೀರ್ ಸೇಠ್ ಕೊಲೆ ಯತ್ನದ ಹಿಂದೆ ಕಾಂಗ್ರೆಸ್ನ ಒಂದು ಗುಂಪಿನ ಒತ್ತಾಸೆ ಇದೆ ಎಂಬ ಮಾಹಿತಿ ಇದೆ ಎಂಬ ಆರೋಪ ಮಾಡಿದ್ದಾರೆ.
ತನ್ವೀರ್ ಸೇಠ್ ಕೊಲೆ ಯತ್ನ ಹಿಂದೆ ಎಸ್ಡಿಪಿಐ ಸಂಘಟನೆ ಇದೆ. ಕಾಂಗ್ರೆಸ್ನ ಒಂದು ಗುಂಪು ಎಸ್ಡಿಪಿಐ ಹಿಂದಿದೆ. ಆ ಗುಂಪೇ ಈ ಕೆಲಸವನ್ನು ಮಾಡುತ್ತಿದೆ. ಕೈವಾಡವಿದ್ದಿದ್ದೇ ಆದರೆ ಅದು ಬಹಳ ಅಪಾಯಕಾರಿ ಬೆಳವಣಿಗೆ ಎಂದು ಆರೋಪಿಸಿದರು.
ಪಿಎಫ್‌ಐ ಮತ್ತು ಎಸ್ಡಿಪಿಐ ಅವಳಿ ಜವಳಿ ಸಂಘಟನೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪಿಎಫ್‌ಐ ಬೇರೆ, ಎಸ್ಡಿಪಿಐ ಬೇರೆ ಅಂದಿದ್ದರು. ಕೇರಳದಲ್ಲಿ ಮತೀಯ ಆಧಾರದಲ್ಲಿ ಕೊಲೆಗಳು ನಡೆಯಲು ಪಿಎಫ್‌ಐ ಕಾರಣ. ಮತ ಬ್ಯಾಂಕ್ ಆಸೆಗೆ ಕಾಂಗ್ರೆಸ್ ಪಕ್ಷ ಎಸ್ಡಿಪಿಐ ಸಂಘಟನೆ ವಿರುದ್ಧ ಕ್ರಮ ಕೈಗೊಂಡಿಲ್ಲ. ಆದರೆ ಕಾಂಗ್ರೆಸ್ ಮತ ಬ್ಯಾಂಕಿನ ವ್ಯಾಮೋಹಕ್ಕೆ ಬಿದ್ದು, ಆ ಸಂಘಟನೆಗೆ ಬೆಂಬಲ ನೀಡುತ್ತಿದೆ. ಕಾಂಗ್ರೆಸ್ ತಾಲೀಬಾನ್ ಮಾದರಿ ಸಂಘಟನೆಗೆ ಬೆಂಬಲ ನೀಡುತ್ತಿದೆ ಎಂದು ಕಿಡಿಕಾರಿದರು.
ಮತ ಬ್ಯಾಂಕ್ ರಾಜಕಾರಣ ಮಾಡಬೇಡಿ. ಇಂಥ ಸಂಘಟನೆ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು. ಅವರಿಗೆ ರಕ್ಷಣೆ, ಆರ್ಥಿಕ ನೆರವು ಕೊಡುವವರು ಯಾರು? ಅದು ತಾಲಿಬಾನ್ ರೀತಿಯ ಸಂಘಟನೆಯಾಗಿದೆ. ನಮಗೆ ಮತ ರಾಜಕಾರಣ ಅಗತ್ಯ ಇಲ್ಲ. ಆ ಸಂಘಟನೆಯ ನಿಷೇಧ ಮಾತ್ರ ಅಲ್ಲ ಅದಕ್ಕೆ ಪೂರಕವಾದ ಇತರ ಕ್ರಮಗಳನ್ನೂ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.