ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತ ಪರ ಸಂಘಟನೆಗಳು ನಾಳೆ ಕರೆ ಕೊಟ್ಟಿರುವ ಭಾರತ್ ಬಂದ್ಗೆ ರಾಜ್ಯ ಕಾಂಗ್ರೆಸ್ ಬೆಂಬಲ ವ್ಯಕ್ತಪಡಿಸಿದೆ. ರೈತರ ಹಕ್ಕೊತ್ತಾಯದ ಶಾಂತಿಯುತ ಬಂದ್ ಕರೆಗೆ ಪಕ್ಷದ ಬೆಂಬಲವಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳ ರೈತ ವಿರೋಧಿ ಧೋರಣೆಯಿಂದಾಗಿ ದೇಶದ ಬಹುಸಂಖ್ಯಾತ ಅನ್ನದಾತ ಸಮುದಾಯ ತೀವ್ರ ವಿಷಮ ಪರಿಸ್ಥಿತಿ ಎದುರಿಸುತ್ತಿದೆ. ಕೆಲವೇ ಮಂದಿ ಉದ್ಯಮಿಗಳ ಬೆಂಬಲಕ್ಕೆ ನಿಂತಿರುವ ಬಿಜೆಪಿ ಇಡೀ ಶ್ರಮಿಕ ಜನಸಮುದಾಯವನ್ನು ವಂಚಿಸುತ್ತಿದೆ. ಪ್ರಧಾನಿ ಮೋದಿ ಸರ್ಕಾರದ ಕರಾಳ ಶಾಸನ, ನೀತಿ ಹಾಗೂ ಧೋರಣೆ ವಿರುದ್ಧ ರೈತರು ದಿಲ್ಲಿಯ ರಸ್ತೆಗಳಲ್ಲಿ ವರ್ಷಗಳಿಂದ ಹೋರಾಟ ನಡೆಸಿದ್ದಾರೆ. ರೈತರ ಹೋರಾಟವನ್ನು ಹತ್ತಿಕ್ಕುವ ನಿರಂತರ ಪ್ರಯತ್ನ ನಡೆಸಿದ ಬಿಜೆಪಿ ಸರ್ಕಾರಕ್ಕೆ, ಅವರ ನ್ಯಾಯಯುತ ಬೇಡಿಕೆಗಳನ್ನು ಕೇಳುವ ಕನಿಷ್ಟ ಸೌಜನ್ಯ ತೋರಿಲ್ಲ. ಇದು ಬಿಜೆಪಿಯ ಅಮಾನವೀಯ ಮನಃಸ್ಥಿತಿಗೆ ನಿದರ್ಶನ ಎಂದು ಡಿ.ಕೆ. ಶಿವಕುಮಾರ್ ಕಿಡಿಕಾರಿದ್ದಾರೆ.
ರೈತರ ಹಿತರಕ್ಷಣೆಗಾಗಿ ದಶಕದ ಹಿಂದೆಯೇ ಭೂಸ್ವಾಧೀನ ಕಾಯ್ದೆಯನ್ನು ಕಾಂಗ್ರೆಸ್ ನೇತ್ರತ್ವದ ಯುಪಿಎ ಸರ್ಕಾರ ಜಾರಿ ಮಾಡಿತ್ತು. ಆದರೆ, ಅದಕ್ಕೆ ವಿರುದ್ದವಾದ ದಿಕ್ಕಿನಲ್ಲಿ ಸಾಗಿದ ಮೋದಿ ಸರ್ಕಾರವು, ಕಳೆದ 7 ವರ್ಷಗಳಲ್ಲಿ ದೇಶದ ರೈತರ ಬದುಕನ್ನು ಅಸಹನೀಯಗೊಳಿಸಿದೆ. ಇದರ ವಿರುದ್ದ ರೈತರು ನಡೆಸುತ್ತಿರುವ ಹೋರಾಟವನ್ನು ಒಬ್ಬ ರೈತನ ಮಗನಾಗಿ ಬೆಂಬಲಿಸುತ್ತೇನೆ. ನಮ್ಮ ಕಾಂಗ್ರೆಸ್ ಪಕ್ಷದ ನೈತಿಕ ಬೆಂಬಲವೂ ಇದೆ. ಹೋರಾಟ ಶಾಂತಿಯುತವಾಗಿರಲಿ ಎಂದು ಡಿಕೆಶಿ ಹೇಳಿದ್ದಾರೆ.
ಇದನ್ನೂ ಓದಿ: ರೈತರಿಂದ ಭಾರತ್ ಬಂದ್: ನಾಳೆ ಏನಿರುತ್ತೆ, ಏನಿರಲ್ಲ?