ಬೆಂಗಳೂರು: ಜ. 26ರಂದು ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ನಡೆಯುವ ಪ್ರತಿಭಟನೆಗೆ ಕಾಂಗ್ರೆಸ್ ತನ್ನ ಬೆಂಬಲ ವ್ಯಕ್ತಪಡಿಸಿದೆ.
ರೈತ ವಿರೋಧಿ ಮಸೂದೆಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ರೈತರು ನಡೆಸುವ ಪರೇಡ್ ಬೆಂಬಲಿಸಿ ಬೆಂಗಳೂರಿನಲ್ಲಿಯೂ ರೈತರ ಪರೇಡ್ ನಡೆಸುವುದಾಗಿ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.
ಗಣರಾಜ್ಯೋತ್ಸವದಂದು ಮುಖ್ಯಮಂತ್ರಿಗಳ ಕಾರ್ಯಕ್ರಮ ಮುಗಿದ ನಂತರ ಬೆಂಗಳೂರು ಮತ್ತು ನೆಲಮಂಗಲದ ನಡುವೆ ಇರುವ ನೈಸ್ ಜಂಕ್ಷನ್ನಿಂದ ಪರೇಡ್ ಪ್ರಾರಂಭವಾಗಲಿದೆ. ಟ್ರ್ಯಾಕ್ಟರ್, ಟ್ರಕ್, ಕಾರು ಮತ್ತು ಬಸ್ಸು ಸೇರಿದಂತೆ 8 ರಿಂದ 10 ಸಾವಿರ ವಾಹನಗಳು ಪರೇಡ್ನಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ದೊಡ್ಡ ಪ್ರಮಾಣದಲ್ಲಿ ರೈತರು ಈ ಪರೇಡ್ನಲ್ಲಿ ಭಾಗವಹಿಸಲಿದ್ದಾರೆ ಎಂದು ಕೋಡಿಹಳ್ಳಿ ತಿಳಿಸಿದ್ದಾರೆ.
ಕಾಂಗ್ರೆಸ್ ಬೆಂಬಲ:
ಈಗಾಗಲೇ ದಿಲ್ಲಿಯ ರೈತರ ಹೋರಾಟವನ್ನು ಬೆಂಬಲಿಸಿ ಜ.20ರಂದು ರಾಜಭವನ ಮುತ್ತಿಗೆಗೆ ಮುಂದಾಗಿದ್ದ ಕಾಂಗ್ರೆಸ್ ನಾಯಕರು ಬಂಧನಕ್ಕೆ ಒಳಗಾಗಿದ್ದರು. ಬೃಹತ್ ಪ್ರತಿಭಟನೆ ಮೂಲಕ ಕಾಂಗ್ರೆಸ್ ಈ ಕಾರ್ಯದಲ್ಲಿ ಅತ್ಯಂತ ಯಶಸ್ಸು ಸಾಧಿಸಿತ್ತು. ರಾಜ್ಯ ಕಾಂಗ್ರೆಸ್ ನಾಯಕರ ಹೋರಾಟ ರಾಷ್ಟ್ರಮಟ್ಟದಲ್ಲಿ ದೊಡ್ಡ ಸುದ್ದಿ ಮಾಡಿತ್ತು. ಇದೀಗ ಹೋರಾಟದ ಮುಂದುವರಿದ ಭಾಗವಾಗಿ ಲಭಿಸಿರುವ ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಲು ಕಾಂಗ್ರೆಸ್ ನಾಯಕರು ತೀರ್ಮಾನಿಸಿದ್ದಾರೆ.
ಕೆಪಿಸಿಸಿ ಕಿಸಾನ್ ಘಟಕ ಸಂಪೂರ್ಣ ಸಹಕಾರ ನೀಡುವಂತೆ ಕೆಪಿಸಿಸಿಯಿಂದ ಸೂಚನೆ ಬಂದಿರುವ ಹಿನ್ನೆಲೆ, ಜಿಲ್ಲೆಗಳಿಂದ ಟ್ರ್ಯಾಕ್ಟರ್ಗಳಲ್ಲಿ ಕಿಸಾನ್ ಘಟಕದ ಸದಸ್ಯರು ಬರುವಂತೆ ಸೂಚನೆ ನೀಡಲಾಗಿದೆ. ಕೆಪಿಸಿಸಿ ಕಿಸಾನ್ ಘಟಕದ ಅಧ್ಯಕ್ಷ ಸಚಿನ್ ಮೀಗಾ ಈ ಸಂಬಂಧ ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಅಂದಿನ ರೈತ ಸಂಘದ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಈ ಹೋರಾಟದಲ್ಲಿ ಪಕ್ಷದ ಕಾರ್ಯಕರ್ತರು ಸಹಭಾಗಿಯಾಗಿ ಯಶಸ್ಸಿಗೆ ಕೈ ಜೋಡಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಈ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ರೈತರು ಹಾಗೂ ತಾವು ನಡೆಸುತ್ತಿರುವ ಹೋರಾಟವನ್ನು ಒಂದೇ ಕಡೆ ಸೇರಿಸಿ ಯಶಸ್ವಿಗೊಳಿಸಲು ಕಾಂಗ್ರೆಸ್ ನಾಯಕರು ಯೋಜನೆ ರೂಪಿಸಿದ್ದಾರೆ. ರೈತರ ಹೋರಾಟಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸುವ ಮೂಲಕ ಕಾಂಗ್ರೆಸ್ ಪಕ್ಷ ಹೋರಾಟದ ಪ್ರಾಬಲ್ಯ ಹೆಚ್ಚಿಸಲು ಮುಂದಾಗಿದೆ.