ಬೆಂಗಳೂರು: ರಾಜಸ್ಥಾನದ ಉದಯಪುರದಲ್ಲಿ ನಡೆದ ಕಾಂಗ್ರೆಸ್ ಚಿಂತನ ಶಿಬಿರದ ನಿರ್ಣಯಗಳ ಜಾರಿ ಹಾಗೂ ಬೆಂಗಳೂರಿನಲ್ಲಿ ಜೂ. 2 ಹಾಗೂ 3 ರಂದು ನಡೆಯುವ ಪಕ್ಷದ "ರಾಜ್ಯ ಚಿಂತನ ಶಿಬಿರ"ದ ಹಿನ್ನೆಲೆಯಲ್ಲಿ ರಚಿಸಲಾಗಿರುವ ಸಮಿತಿಗಳ ಪದಾಧಿಕಾರಿಗಳ ಜತೆ ರಾಜ್ಯ ನಾಯಕರು ಕೆಪಿಸಿಸಿ ಕಚೇರಿಯಲ್ಲಿ ಚರ್ಚಿಸಿದರು.
ಸಭೆಯ ಬಳಿಕ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿ. ಕೆ ಹರಿಪ್ರಸಾದ್ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡ್ತಿದ್ದಾರೆ. ಹಲವು ವಿಚಾರಗಳನ್ನ ಅನುಷ್ಠಾನಕ್ಕೆ ತರುತ್ತಿದ್ದಾರೆ. ದಾರ್ಶನಿಕರು, ಹೋರಾಟಗಾರರ ಪಠ್ಯ ಕೈ ಬಿಟ್ಟಿದ್ದಾರೆ. ಸಾಹಿತಿ, ಚಿಂತಕರು ವಿರೋಧ ವ್ಯಕ್ತಪಡಿಸಿದ್ದಾರೆ. ಸಾಣೆಹಳ್ಳಿಶ್ರೀಗಳು ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ. ಚುಂಚನಗುರಿ ಶ್ರೀಗಳು ವಿರೋಧ ವ್ಯಕ್ತಪಡಿಸಿದ್ದಾರೆ.
ಕುವೆಂಪು, ಬಸವಣ್ಣನವರ ಪಾಠ ಕೈಬಿಟ್ಟಿದ್ದು ಸರಿಯಲ್ಲ. ಕೂಡಲೇ ಪಾಠಗಳನ್ನ ಸೇರಿಸುವಂತೆ ಒತ್ತಾಯಿಸುತ್ತೇನೆ. ಆರ್ಎಸ್ಎಸ್ ಅಣತಿಯಂತೆ ಸರ್ಕಾರ ನಡೆದುಕೊಳ್ತಿದೆ. ನಾಗಪುರ, ಹಾವಿನಪುರದ ಒತ್ತಡಕ್ಕೆ ಸರ್ಕಾರ ಮಣಿದಿದೆ. ಸರ್ಕಾರ ಹಿಡನ್ ಅಜೆಂಡಾ ಜಾರಿಗೆ ತರ್ತಿದೆ. ಇದಕ್ಕೆ ನಮ್ಮದು ತೀರ್ವ ವಿರೋಧವಿದೆ ಎಂದು ಹೇಳಿದರು.
ಕಾಂಗ್ರೆಸ್ ಅಭ್ಯರ್ಥಿ ಹಾಕಿದ್ದಕ್ಕೆ ಜೆಡಿಎಸ್ ಬೇಸರ ವಿಚಾರ ಮಾತನಾಡಿ, ಜಾತ್ಯತೀತ ತತ್ವದ ಮೇಲೆ ಅಭ್ಯರ್ಥಿ ಹಾಕಿರಲಿಲ್ಲ. ದೇವೇಗೌಡರ ವಿರುದ್ಧ ನಾವು ಅಭ್ಯರ್ಥಿಯನ್ನು ಕಣಕ್ಕಿಳಿಸಿರಲಿಲ್ಲ. ರಾಜ್ಯಸಭೆಯಲ್ಲಿ ನಮಗೆ ಶಕ್ತಿಬೇಕಿದೆ. ಅದಕ್ಕೆ ನಮ್ಮ ಅಭ್ಯರ್ಥಿಯನ್ನ ಬೆಂಬಲಿಸಲಿ. ಜಾತ್ಯತೀತ ತತ್ವದಲ್ಲಿ ನಂಬಿಕೆ ಇದ್ದರೆ ಮತ ಹಾಕಲಿ ಎಂದು ಜೆಡಿಎಸ್ಗೆ ಪರೋಕ್ಷ ಸವಾಲೆಸೆದರು.
ಸಾಣೆಹಳ್ಳಿ ಶ್ರೀಗಳ ಧ್ವನಿಗೆ ಬೆಂಬಲವಿದೆ .. ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ ಪಾಟೀಲ್ ಮಾತನಾಡಿ, ಸಾಣೆಹಳ್ಳಿಶ್ರೀಗಳು ಸಿಎಂಗೆ ಪತ್ರ ಬರೆಯುತ್ತಾರೆ. ಮಹಾಪುರುಷರು, ಶರಣರು, ಕೆಂಪೇಗೌಡರು, ಬುದ್ಧ, ಅಂಬೇಡ್ಕರ್ ಅವರ ಇತಿಹಾಸ ತಿರುಚಬಾರದು. ನಿಮ್ಮ ಅಜೆಂಡಾ ತಂದು ಪಠ್ಯ ಪುಸ್ತಕ ಬರೆಯಬಾರದು. ಬಸವಣ್ಣನವರಷ್ಟೇ ಅಲ್ಲ ಎಲ್ಲರನ್ನ ಒಳಗೊಂಡು ಮಹಾತ್ಮರಿದ್ದಾರೆ. ಇವರ ಪಾಠಗಳು ಪಠ್ಯ ಪುಸ್ತಕದಲ್ಲಿರಬೇಕು. ಪಠ್ಯ ಪುಸ್ತಕ ಪರಿಷ್ಕರಣೆ ಅಧ್ಯಕ್ಷರನ್ನ ತೆಗೆದುಹಾಕಬೇಕು. ಪರಿಣಿತರನ್ನ ಕೂರಿಸಿ ಪಾಠಗಳನ್ನ ಪರಿಷ್ಕರಿಸಿ. ಕುವೆಂಪು ನಾಡಗೀತೆಯ ಬಗ್ಗೆಯೂ ಅಪಮಾನವಾಗಿದೆ. ಚುಂಚನಗಿರಿ ಶ್ರೀಗಳು ಧ್ವನಿ ಎತ್ತಿದ್ದಾರೆ. ಹಾಗಾಗಿ ನಾವು ಕೂಡ ಖಂಡನೆ ವ್ಯಕ್ತಪಡಿಸುತ್ತೇವೆ. ಸಾಣೆಹಳ್ಳಿ ಶ್ರೀಗಳ ಧ್ವನಿಗೆ ಬೆಂಬಲವಿದೆ ಎಂದರು.
ವೀರಶೈವ ನಿರ್ಧಾರದಿಂದ ಲಿಂಗಾಯತ ಪ್ರತ್ಯೇಕ ಧರ್ಮ ಆಗಲಿಲ್ಲ ಎಂಬ ತೋಂಟದಾರ್ಯ ಶ್ರೀಗಳ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಎಂ.ಬಿ. ಪಾಟೀಲ್, ನಾನು ಆ ವಿಚಾರದಲ್ಲಿ ಮಾತನಾಡುವುದಿಲ್ಲ. ಮಾತನಾಡಬಾರದು ಎಂದು ನಿಲುವು ತೆಗೆದುಕೊಂಡಿದ್ದೇನೆ. ಈ ಕಡೆ ಸ್ವಾಮೀಜಿ, ಆ ಕಡೆ ಸ್ವಾಮೀಜಿಗಳಿದ್ದಾರೆ. ಅವರು ಕುಳಿತು ನಿರ್ಧಾರ ಮಾಡ್ತಾರೆ ಎಂದರು.
ಕಾದು ನೋಡಿ ಅಭ್ಯರ್ಥಿ ಗೆಲ್ತಾರೆ.. ನನ್ನ ಉದ್ದೇಶವಿಷ್ಟೇ ಸಮಾಜಕ್ಕೆ ಒಳ್ಳೆಯದಾಗಬೇಕು, ಧರ್ಮ ಬೆಳೆಯಬೇಕು. ನಮ್ಮ ಮಕ್ಕಳಿಗೆ ಸೌಲಭ್ಯಗಳನ್ನು ಸಿಗಬೇಕು ಎಂದು ಹೇಳುವ ಮೂಲಕ ಪರೋಕ್ಷವಾಗಿ ಶ್ರೀಗಳ ಹೇಳಿಕೆಗೆ ಬೆಂಬಲಿಸಿದರು. ರಾಜ್ಯಸಭೆಗೆ ಎರಡನೇ ಅಭ್ಯರ್ಥಿ ಹಾಕಿರುವ ವಿಚಾರ ಮಾತನಾಡಿ, ನಮ್ಮ ಅಭ್ಯರ್ಥಿಯನ್ನು ನಿಲ್ಲಿಸಿದ್ದೇವೆ. ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ. ಕಾದು ನೋಡಿ ಅಭ್ಯರ್ಥಿ ಗೆಲ್ತಾರೆ ಎಂದು ಹೇಳಿದರು.
ಸಿಎಂಗೆ ಸಾಣೆಹಳ್ಳಿ ಶ್ರೀಗಳಿಂದ ಪತ್ರ ವಿಚಾರ ಮಾಜಿ ಸಚಿವ ಹೆಚ್. ಸಿ ಮಹದೇವಪ್ಪ ಮಾತನಾಡಿ, ಇದು ರಾಜ್ಯದ ದುರ್ದೈವ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಈ ರೀತಿ ಆಗ್ತಿದೆ. ನೈತಿಕತೆಯನ್ನ ಕೆದಕುವ ಪ್ರಯತ್ನ ನಡೆದಿದೆ. ದೊಡ್ಡ ಸಾಹಿತಿಗಳ ವಿಚಾರವನ್ನ ತೆಗೆದುಹಾಕ್ತಿದ್ದಾರೆ. ಚಾರಿತ್ರಿಕ ವಿಷಯಗಳನ್ನೇ ತಿರುಗಿಸುತ್ತಿದ್ದಾರೆ ಎಂದರು.
ಸರ್ಕಾರಕ್ಕೆ ಎಚ್ಚರಿಕೆ ಕೊಡ್ತೇನೆ.. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಾತನಾಡಿ, ಪಠ್ಯಕ್ರಮದ ಪರಿಷ್ಕರಣೆ ಕೇಸರಿಕರಣ ಮಾಡಲು ಹೊರಟು, ಇತಿಹಾಸವನ್ನು ತಿರುಚಲಾಗುತ್ತಿದೆ. ಮಕ್ಕಳನ್ನು ದಾರಿ ತಪ್ಪಿಸುವ ಕೆಲಸ ನಡೆಯುತ್ತಿದೆ. ಮಹಾಪುರುಷರ ಗಾಂಧೀಜಿ, ಕುವೆಂಪು ಅವರ ಬಗ್ಗೆ ಅವಹೇಳನ ಮಾಡಿದ್ದು ನಾವು ನೋಡಿದ್ದೇವೆ. ಬಸವಣ್ಣನವರು ಜಗತ್ತಿಗೆ ಸಾಮಾಜಿಕ ನ್ಯಾಯ ಕೊಟ್ಟವರು. ಅವರ ಇತಿಹಾಸ ತಿರುಚುವ ಬಿಜೆಪಿ ಸರ್ಕಾರದ ನಿರ್ಧಾರ ಖಂಡನೀಯ. ಇದನ್ನು ಸರಿಪಡಿಸದೇ ಇದ್ದರೆ ದೊಡ್ಡಮಟ್ಟದ ಬೆಲೆ ತೆರಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ಕೊಡ್ತೇನೆ ಎಂದು ಹೇಳಿದರು.
ಕುವೆಂಪು ಬಗ್ಗೆ ರೋಹಿತ್ ಚಕ್ರತೀರ್ಥ ಅವಹೇಳನ ವಿಚಾರ ಕುರಿತು ಮಾಜಿ ಸಚಿವ ಚೆಲುವರಾಯಸ್ವಾಮಿ ಮಾತನಾಡಿ, ಕುವೆಂಪು ರಾಷ್ಟ್ರಕವಿಗಳು. ವಿಶ್ವಮಾನವ ಎಂದು ಹೆಸರಾದವರು. ಬಿಜೆಪಿಯವರಿಗೆ ಏನಾಗಿದ್ಯೋ ಗೊತ್ತಿಲ್ಲ. ರೋಹಿತ್ ಚಕ್ರತೀರ್ಥರನ್ನ ಹೆಚ್ಚು ಬಿಂಬಿಸ್ತಿದ್ದಾರೆ. ಹಿಂದೆಯೇ ನಾಡಗೀತೆಗೆ ಅವಮಾನ ಮಾಡಿದವರು ಅವರು. ಅವರನ್ನ ಆಗಲೇ ಬಂಧಿಸಬೇಕಿತ್ತು. ಕೂಡಲೇ ಚಕ್ರತೀರ್ಥರನ್ನ ಕೆಳಗಿಳಿಸಬೇಕು. ಲೇಖನಗಳನ್ನ ಯಥಾವತ್ ಮುಂದುವರಿಸಬೇಕು. ಇವರಿಗೆ ಸಂವಿಧಾನದ ಮೇಲೂ ಗೌರವವಿಲ್ಲ ಎಂದರು.
ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್, ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ. ಕೆ ಹರಿಪ್ರಸಾದ್, ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ, ಕೇಂದ್ರದ ಮಾಜಿ ಸಚಿವ ವೀರಪ್ಪ ಮೊಯ್ಲಿ, ಕೆ. ರೆಹಮಾನ್ ಖಾನ್, ಮಾಜಿ ಸಚಿವ ಆರ್. ವಿ ದೇಶಪಾಂಡೆ ಮತ್ತಿತರರು ಭಾಗವಹಿಸಿದ್ದರು.
ಓದಿ: ಟಿಕಾಯತ್ಗೆ ಮಸಿ ಬಳಿದ ಪ್ರಕರಣ: ಈ ಹುಚ್ಚುತನ ಸಹಿಸಲಾಗದು ಎಂದ ಗೃಹ ಸಚಿವರು