ಬೆಂಗಳೂರು: ಬಿಜೆಪಿಗೆ ಭಯೋತ್ಪಾದಕರ ಜೊತೆ ನಂಟಿದೆ ಎಂದು ಕಾಂಗ್ರೆಸ್ ದೇಶದಲ್ಲಿ ಪ್ರೆಸ್ ಮೀಟ್ ಮಾಡೋಕೆ ಹೊರಟಿರುವುದಕ್ಕೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದ್ದಾರೆ. ಬಾಟ್ಲಾ ಹೌಸ್ ಎನ್ಕೌಂಟರ್ ಆದಾಗ ಅಂದಿನ ಸೂಪರ್ ಪ್ರೈಮ್ ಮಿನಿಸ್ಟರ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕಣ್ಣೀರು ಹಾಕಿದ್ದು ಯಾಕೆ ಎಂದು ಪ್ರಶ್ನಿಸಿ ನೇರವಾಗಿ ಸೋನಿಯಾ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸೋನಿಯಾ ಗಾಂಧಿ ವಿರುದ್ಧ ವಾಗ್ದಾಳಿ: ಬಿಜೆಪಿ ಕಚೇರಿಯಲ್ಲಿ ಇಂದು ಅಸಂಘಟಿತ ಕಾರ್ಮಿಕ ಪ್ರಕೋಷ್ಠದ ಕಾರ್ಯಕಾರಿಣಿ ಸಭೆಯಲ್ಲಿ ಪ್ರಹ್ಲಾದ್ ಜೋಶಿ ಭಾಷಣ ಮಾಡಿದರು. ರಾಜಸ್ಥಾನದಲ್ಲಿ ನಡೆದ ಕನ್ಹಯ್ಯಲಾಲ್ ಕೊಲೆ ಆರೋಪಿಯಲ್ಲಿ ಒಬ್ಬ ಬಿಜೆಪಿ ನಾಯಕರ ಜೊತೆ ನಿಂತಿದ್ದ ಫೋಟೋವನ್ನು ಹರಿಬಿಟ್ಟು, ಬಿಜೆಪಿಯವರು ಕೊಲೆಗಡುಕರು ಎಂಬ ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿದರು. ಬಾಟ್ಲಾ ಹೌಸ್ ಶೂಟ್ ಔಟ್ ಪ್ರಕರಣವನ್ನು ನೆನಪಿಸಿ ನೇರವಾಗಿ ಸೋನಿಯಾ ಗಾಂಧಿ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ಈ ಹಿಂದೆ ಸೋನಿಯಾ ಗಾಂಧಿ ಅಧಿಕಾರದಲ್ಲಿದ್ದಾಗ, ಮನಮೋಹನ್ ಸಿಂಗ್ ಸುಮ್ನೆ ಹೆಸರಿಗೆ ಪ್ರಧಾನಿ ಆಗಿದ್ರು. ಅಧಿಕಾರ ನಡೆಸುತ್ತಾ ಇದ್ದದ್ದು ಸೋನಿಯಾ ಗಾಂಧಿ. ಆ ಸಮಯದಲ್ಲಿ ಬಾಟ್ಲಾ ಹೌಸ್ನಲ್ಲಿ ಭಯೋತ್ಪಾದಕರ ಮೇಲೆ ಶೂಟ್ ಔಟ್ ಆದಾಗ ಒಬ್ಬ ಭಯೋತ್ಪಾದಕ ಸತ್ತು ಹೋಗಿದ್ದ. ಸೋನಿಯಾ ಗಾಂಧಿ ಭಯೋತ್ಪಾದಕ ಸತ್ತಿದ್ದಕ್ಕೆ ಕಣ್ಣೀರು ಹಾಕಿದ್ರಂತೆ. ಮಾತ್ರವಲ್ಲ, ರಾಹುಲ್ ಗಾಂಧಿ ಅಫ್ಜಲ್ ಗುರು ಜೊತೆ ಫೋಟೋ ತೆಗೆಸಿಕೊಂಡಿದ್ದರು. ಇಂತವರು ಇಂದು ಬಿಜೆಪಿ ಮೇಲೆ ಆರೋಪ ಮಾಡ್ತಾ ಇದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಮುರ್ಮು ಗೆಲ್ಲುವ ವಿಶ್ವಾಸವಿದೆ: ಎನ್ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಇಂದು ಬೆಂಗಳೂರಿಗೆ ಬಂದಿದ್ದಾರೆ. ಅವರು ಅತ್ಯಧಿಕ ಮತಗಳಿಂದ ಗೆಲ್ಲುವ ವಿಶ್ವಾಸ ನಮಗೆ ಇದೆ. ದೇವೇಗೌಡರು ಸಹ ಅವರಿಗೆ ಬೆಂಬಲ ನೀಡಿದ್ದಾರೆ ಎಂದು ಕೇಳಿದ್ದೇನೆ. ಇದನ್ನು ನಾನು ಸ್ವಾಗತ ಮಾಡುತ್ತೇನೆ. ದೇವೇಗೌಡರನ್ನು ಮುರ್ಮು ಭೇಟಿ ಮಾಡ್ತಾರೊ ಇಲ್ಲವೊ ಎಂಬ ಮಾಹಿತಿ ಇಲ್ಲ ಎಂದರು.
ಭಯೋತ್ಪಾದಕರ ಪರ ನಿಂತದ್ದ ಕಾಂಗ್ರೆಸ್: ಇಂದು ದೇಶದಲ್ಲಿ ಭಯೋತ್ಪಾದನೆ ನಿರ್ಣಾಮ ಆಗೋಕೆ ಆರ್ಟಿಕಲ್ 370 ತೆಗೆದು ಹಾಕಿದ್ದೂ ಒಂದು ಕಾರಣ. ಇಂದು ದೇಶದಲ್ಲಿ ಭಯೋತ್ಪಾದನೆ ನಿಂತಿದೆ, ಬಿಜೆಪಿಗೆ ಭಯೋತ್ಪಾದಕರ ಜೊತೆ ನಂಟಿದೆ ಎಂದು ಕಾಂಗ್ರೆಸ್ ಮಾತಾಡುತ್ತಿದೆ. ಬಾಟ್ಲಾ ಹೌಸ್ನಲ್ಲಿ ಭಯೋತ್ಪಾದಕನ ಹೊಡೆದು ಹಾಕಿದ್ದಾಗ ಸೋನಿಯಾ ಗಾಂಧಿ ಅಳ್ತಾ ಇದ್ದರಂತೆ. ಇಂತವರು ನಮಗೆ ಭಯೋತ್ಪಾದಕರ ಜೊತೆ ನಂಟಿದೆ ಅಂತಾರೆ. ಭ್ರಷ್ಟಾಚಾರದ ಬಗ್ಗೆ ಮಾತಾಡ್ತಾ ಇದ್ದಾರೆ. ಭಯೋತ್ಪಾದಕರ ಪರ ನಿಂತವರು, ಅಫ್ಜಲ್ ಗುರು ಪಕ್ಕ ನಿಂತವರು ರಾಹುಲ್ ಗಾಂಧಿ. ಭಯೋತ್ಪಾದಕರಿಗೆ ಚಿಕನ್ ಮಟನ್ ತಿನ್ನಿಸುತ್ತಿದ್ದವರು ಕಾಂಗ್ರೆಸ್ನವರು ಎಂದು ಕಿಡಿಕಾರಿದರು.
ಇದನ್ನೂ ಓದಿ: ರಾಜ್ಯದಲ್ಲಿ ಮುಂದುವರೆದ ಮಳೆ ಅಬ್ಬರ: ಕರಾವಳಿ ಜಿಲ್ಲೆಗಳಿಗೆ ಜುಲೈ 12ರವರೆಗೆ 'ರೆಡ್ ಅಲರ್ಟ್'
ಪಠ್ಯ ಪುಸ್ತಕ ಸರಿಪಡಿಸುವುದಕ್ಕೆ ಹೋದರೆ ಅದರ ಬಗ್ಗೆ ಅಪಪ್ರಚಾರ ಮಾಡ್ತಾ ಇದ್ದಾರೆ. ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಮೋದಿ ಮಾರ್ಗದರ್ಶನದಲ್ಲಿ ಬೊಮ್ಮಾಯಿ ಸರ್ಕಾರ ನಡೆಸುತ್ತಿರುವ ಯೋಜನೆ ಜನರಿಗೆ ತಲುಪದಂತೆ ಕಾಂಗ್ರೆಸ್ ಮಾಡುತ್ತಿದೆ. ಇವರು ಅಧಿಕಾರದಲ್ಲಿದ್ದಾಗ ಎಷ್ಟು ಹಗರಣ ಮಾಡಿದ್ದರು. ಕಲ್ಲಿದ್ದಲು, ಕಾಮನ್‌ವೆಲ್ತ್ ಹಗರಣ, 2ಜಿ ಸ್ಪೆಕ್ಟ್ರಂ ಹೀಗೆ ಸಾಲು ಸಾಲು ಹಗರಣ ಮಾಡಿದ್ದರು ಎಂದು ಟೀಕಿಸಿದರು.
ಡಿ.ಕೆ ಶಿವಕುಮಾರ್ ಟಾರ್ಗೆಟ್: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಈಗ ಸಿದ್ದರಾಮೋತ್ಸವ ಮಾಡ್ತಾ ಇದ್ದಾರೆ. ಅವರ ಪಕ್ಷದ ಇನ್ನೊಬ್ಬರು ಅವರ ಅಂತ್ಯೋತ್ಸವ ಮಾಡ್ತೇವೆ ಎಂದು ಹೇಳುತ್ತಿದ್ದಾರೆಂದು ಸಿದ್ದರಾಮೋತ್ಸವದ ಬಗ್ಗೆ ವ್ಯಂಗ್ಯವಾಡಿದರು. ಕಾಂಗ್ರೆಸ್ನಲ್ಲಿ ಎರಡು ಅಂಗಿ ಹೊಲಿಸಿಟ್ಟಿದ್ದಾರೆ, ಅದೇ ಅವರಲ್ಲಿ ಸಮಸ್ಯೆಗೆ ಕಾರಣವಾಗಿದೆ. ಸಿದ್ದರಾಮೋತ್ಸವ ಮಾಡ್ತಿರೋದಕ್ಕೆ ನಮಗೆ ಹೊಟ್ಟೆಕಿಚ್ಚಿಲ್ಲ, ಅವರ ಪಾರ್ಟಿಯವರಿಗೇ ಹೊಟ್ಟೆಕಿಚ್ಚಿದೆ. ಸಿದ್ದರಾಮಯ್ಯ ಕಾಂಗ್ರೆಸ್ಗೆ ಬಂದು ಮೊದಲು ಖರ್ಗೆಯವರನ್ನು ಮುಳುಗಿಸಿದರು. ನಂತರ ಪರಮೇಶ್ವರ್ ರನ್ನ ಮುಳುಗಿಸಿದರು, ಸಿದ್ದರಾಮಯ್ಯ ಅವರ ಮುಂದಿನ ಟಾರ್ಗೆಟ್ ಡಿ.ಕೆ ಶಿವಕುಮಾರ್ ಎಂದರು.
ಮೊದಲು ಬಿಜೆಪಿ ಎಂದರೆ ನಗರ ಜನರ ಬೆಂಬಲ ಮಾತ್ರ ಇರುವ ಪಕ್ಷ, ಮುಂದುವರಿದವರ ಪಕ್ಷ ಎಂಬ ಆರೋಪ ಇತ್ತು. ಆದರೆ ಈಗ ನಾವು ಗ್ರಾಮೀಣ ಮಟ್ಟದ ಪಕ್ಷವಾಗಿದ್ದೇವೆ. ನಾವು ಪೇಜ್ ಪ್ರಮುಖರಿಂದ ಪೇಜ್ ಸಮಿತಿ ತನಕ ಹೋಗಿದ್ದೇವೆ. ಅತೀ ಹೆಚ್ಚು ಎಸ್ ಸಿ, ಎಸ್ ಟಿ ಸಂಸದರು ಶಾಸಕರು ಇರುವ ಪಕ್ಷ ಬಿಜೆಪಿ, ಬೇರೆ ಬೇರೆ ವರ್ಗದ ಜನರಿಗೆ ನಮ್ಮ ವಿಚಾರಧಾರೆ ತಿಳಿಸಿ ನಮ್ಮೊಂದಿಗೆ ಸೇರಿಸಿಕೊಂಡು ಮುಂದಕ್ಕೆ ಹೋಗುತ್ತಿದ್ದೇವೆ ಎಂದು ಹೇಳಿದರು.