ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಕೃಷಿ ಕಾಯ್ದೆ ವಿರೋಧಿಸಿ ಕಾಂಗ್ರೆಸ್ ಇಂದು ರಾಜಭವನ ಚಲೋ ಹಮ್ಮಿಕೊಂಡಿದ್ದು, ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ರೈತ ಸಂಘಟನೆ ಇದರಲ್ಲಿ ಭಾಗಿಯಾಗಲಿವೆ.
ಇಂದು ಬೆಳಗ್ಗೆ 11ಗಂಟೆಗೆ ನಗರದ ಮೆಜೆಸ್ಟಿಕ್ ಸಂಗೊಳ್ಳಿ ರಾಯಣ್ಣ ಪ್ರತಿಮೆ ಬಳಿಯಿಂದ ರಾಜಭವನ ಚಲೋ ಆರಂಭಗೊಳ್ಳಲಿದ್ದು, ಫ್ರೀಂಡ ಪಾರ್ಕ್ದಿಂದ ರಾಜಭವನವರೆಗೆ ನಡೆಯಲಿದೆ. ಇದರಲ್ಲಿ ಕೆಪಿಸಿಸ ಅಧ್ಯಕ್ಷ ಡಿ.ಕೆ ಶಿವಕುಮಾರ್, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಎಸ್ಆರ್ ಪಾಟೀಲ್, ರಾಮಲಿಂಗಾ ರೆಡ್ಡಿ, ಡಾ.ಜಿ ಪರಮೇಶ್ವರ ಹಾಗೂ ಇತರ ಪ್ರಮುಖ ನಾಯಕರು ಭಾಗಿಯಾಗಲಿದ್ದಾರೆ.
ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ, ಎಪಿಎಂಸಿ ಕಾಯ್ದೆ ಸೇರಿದಂತೆ ಅನೇಕ ವಿಚಾರಗಳನ್ನಿಟ್ಟುಕೊಂಡು ಈ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದ್ದು, ಮಧ್ಯಾಹ್ನ ರಾಜ್ಯಪಾಲರನ್ನ ಭೇಟಿ ಮಾಡಿ ಕಾಂಗ್ರೆಸ್ ನಾಯಕರು ಮನವಿ ಸಲ್ಲಿಕೆ ಮಾಡುವ ಸಾಧ್ಯತೆ ಇದೆ.
ಈ ಸಂದರ್ಭದಲ್ಲಿ ಕೆಂಪೇಗೌಡ ಬಸ್ ನಿಲ್ದಾಣ ಸುತ್ತ ಮುತ್ತ, ಶೇಷಾದ್ರಿಪುರಂ, ಗೂಡ್ಶೆಡ್ ರಸ್ತೆ, ಕಾಟನ್ಪೇಟೆ ಮುಖ್ಯರಸ್ತೆ, ಕೆಜಿ ರಸ್ತೆ, ಆನಂದರಾವ್ ವೃತ್ತ, ಬಳ್ಳಾರಿ ರಸ್ತೆ, ಅರಮನೆ ರಸ್ತೆ, ಶೇಷಾದ್ರಿ ರಸ್ತೆ, ಚಾಳುಕ್ಯ ವೃತ್ತ, ಮೈಸೂರು ಬ್ಯಾಂಕ್ ವೃತ್ತ, ವಿಧಾನಸೌಧ ಸುತ್ತಮುತ್ತ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ.