ಬೆಂಗಳೂರು: 14 ಇಂದಿರಾ ಕ್ಯಾಂಟೀನ್ ಮತ್ತು 16 ಮೊಬೈಲ್ ಇಂದಿರಾ ಕ್ಯಾಂಟೀನ್ಗಳನ್ನು ಮುಚ್ಚಿ ಬಿಜೆಪಿ ಸರ್ಕಾರ ಬಡವರ ತುತ್ತು ಅನ್ನಕ್ಕೂ ಕುತ್ತು ತಂದಿದೆ ಎಂದು ಆರೋಪಿಸಿ ಕಾಂಗ್ರೆಸ್ ಇಂದು ಪ್ರತಿಭಟನೆ ನಡೆಸಿತು. ಬೆಂಗಳೂರು ಕೇಂದ್ರ, ದಕ್ಷಿಣ ಮತ್ತು ಉತ್ತರ ಜಿಲ್ಲಾ ಕಾಂಗ್ರೆಸ್ ಸಮಿತಿಗಳಿಂದ ಹಮ್ಮಿಕೊಂಡಿದ್ದ ಪ್ರತಿಭಟನೆ ನೇತೃತ್ವವನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ವಹಿಸಿದ್ದರು.
ಬಡವರ, ಕೂಲಿ ಕಾರ್ಮಿಕರ, ವಿದ್ಯಾರ್ಥಿಗಳ, ಶ್ರಮಿಕ ವರ್ಗದ ಹಸಿವು ನೀಗಿಸಲುಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಆರಂಭಿಸಿದ್ದ ಮಹತ್ವಾಕಾಂಕ್ಷೆಯ ಇಂದಿರಾ ಕ್ಯಾಂಟೀನ್ ಯೋಜನೆಯನ್ನು ಜನವಿರೋಧಿ ಬಿಜೆಪಿ ಸರ್ಕಾರ ಮುಚ್ಚಿ ಹಾಕಲು ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿ, ಬೆಂಗಳೂರಿನ ಹನುಮಂತನಗರದ ಧೋಬಿಘಾಟ್ ಕ್ವಾರ್ಟರ್ ಸಮೀಪದ ರಾಜೀವ್ ಗಾಂಧಿ ಸ್ಟೇಡಿಯಂ ಸಮೀಪ ಇರುವ ಬೃಂದಾವನ ನಗರ ಇಂದಿರಾ ಕ್ಯಾಂಟೀನ್ನಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಊಟ ನೀಡುವ ಮೂಲಕ ಪ್ರತಿಭಟಿಸಲಾಯಿತು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗರೆಡ್ಡಿ, ಇಂದಿರಾ ಕ್ಯಾಂಟೀನ್ ಮುಚ್ಚುವ ಕ್ರಮ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸಿದ್ದೇವೆ. ಬಸವನಗುಡಿ ವಿಧಾನಸಭಾ ಕ್ಷೇತ್ರದ ಹನುಮಂತನಗರದ ಇಂದಿರಾ ಕ್ಯಾಂಟೀನ್ ಬಳಿ ಪ್ರತಿಭಟನೆ ಮಾಡಿದ್ದು, ಉಚಿತವಾಗಿ ತಿಂಡಿ ಹಂಚಿ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ಮಾಡಿದ್ದೇವೆ. ಕಾಂಗ್ರೆಸ್ ಸರ್ಕಾರ ಇದ್ದಾಗ ಇಂದಿರಾ ಕ್ಯಾಂಟೀನ್ ಮಾಡಲಾಗಿತ್ತು.
ನಮ್ಮ ಸರ್ಕಾರ ಬಂದಮೇಲೆ ಮತ್ತೆ ಓಪನ್ ಮಾಡ್ತೇವೆ: ಬೆಂಗಳೂರಿನಲ್ಲಿ ಒಂದೂವರೆ ಕೋಟಿ ಜನ ವಾಸವಿದ್ದಾರೆ. ಶ್ರಮಿಕ ವರ್ಗಕ್ಕೆ ಊಟ ಕೊಡಬೇಕು ಎಂದು ಇಂದಿರಾ ಕ್ಯಾಂಟೀನ್ ಮಾಡಲಾಗಿತ್ತು. ಆಸ್ಪತ್ರೆಗಳಲ್ಲಿ ಅನುಕೂಲ ಆಗಲಿ ಎಂದು ಇಂದಿರಾ ಕ್ಯಾಂಟೀನ್ ಮಾಡಲಾಗಿತ್ತು. ಬಿಜೆಪಿ ಸರ್ಕಾರ ಬಂದ ಮೇಲೆ ಇಂದಿರಾ ಕ್ಯಾಂಟೀನ್ ನಿರ್ಲಕ್ಷ್ಯ ಮಾಡಿದೆ. ಕರೆಂಟ್ ಬಿಲ್ ಕಟ್ಟಿಲ್ಲ, ಬಾಡಿಗೆ ಕಟ್ಟಿಲ್ಲ. 30ಕ್ಕೂ ಅಧಿಕ ಕ್ಯಾಂಟೀನ್ ಮುಚ್ಚಿವೆ. ಮೊಬೈಲ್ ಇಂದಿರಾ ಕ್ಯಾಂಟೀನ್ ಮುಚ್ಚಿವೆ. ಅನೇಕವು ಕೆಟ್ಟು ನಿಂತಿವೆ. ನಮ್ಮ ಸರ್ಕಾರ ಬರುತ್ತದೆ. ಈಗ ಮುಚ್ಚಿರುವ ಕ್ಯಾಂಟೀನ್ ಮತ್ತೆ ಓಪನ್ ಮಾಡ್ತೇವೆ ಎಂದರು.
ಸರ್ಕಾರ ಎರಡು ದಿನದಲ್ಲಿ ಮುಚ್ಚಿರುವ ಕ್ಯಾಂಟೀನ್ ಓಪನ್ ಮಾಡಿಲ್ಲ. ಅಂದರೆ ನಮ್ಮ ಕಾರ್ಯಕರ್ತರೆ ಆಹಾರ ಹಂಚಿಕೆ ಮಾಡುತ್ತಾರೆ. ಊಟ ರೆಡಿ ಮಾಡಿ ಹಂಚುತ್ತೇವೆ. ಕೋವಿಡ್ ಟೈಮ್ ನಲ್ಲಿ ಆಹಾರ ಹಂಚಿದ್ದೇವೆ, ಆಗ ಬಿಜೆಪಿಯವರ ಮನೆಯಲ್ಲಿ ಇದ್ದರು. ಈಗ ಬಂದವರೇ, ಮಗಧೀರ ರೀತಿಯಲ್ಲಿ ಕುದುರೆ ಹತ್ತಿಕೊಂಡು ಬರ್ತಾ ಇದ್ದಾರೆ ಎಂದು ಲೇವಡಿ ಮಾಡಿದರು.
ಮೋದಿಗೆ ಪೈಟರ್ ರವಿ ಕೈ ಮುಗಿದ ವಿಚಾರ ಮಾತನಾಡಿ, ಮೂರು ವರ್ಷದಲ್ಲಿ 20 ಸಾವಿರ ರೌಡಿ ಶೀಟರ್ಗಳನ್ನು ಬಿಜೆಪಿಗೆ ಸೇರಿಸಿಕೊಳ್ಳುತ್ತಿದ್ದಾರೆ. ಅವರಿಗೆ ಚುನಾವಣಾ ಟಿಕೆಟ್ ಕೊಡುತ್ತಿದ್ದಾರೆ. ಪಾಪ ಮೋದಿಗೆ ಎನು ಗೊತ್ತು. ಅವರ ಭದ್ರತಾ ಪಡೆಯುವರು ಅದನ್ನ ಪರಿಶೀಲನೆ ಮಾಡಬೇಕು. ರಾಜ್ಯ ನಾಯಕರೇ ಕರೆಕೊಂಡು ಹೋಗಿ ಮುಂದೆ ನಿಲ್ಲಿಸಿರುತ್ತಾರೆ ಎಂದರು.
ಇದನ್ನೂ ಓದಿ: ರಾಹುಲ್ ಗಾಂಧಿ ಬೈದಿದ್ದು ಬಿಜೆಪಿನ, ಬಿಜೆಪಿಯವರನ್ನ ಬೈದರೆ ದೇಶದ ಮಾನ ಹೇಗೆ ಹೋಗುತ್ತದೆ: ಸಿದ್ದರಾಮಯ್ಯ ಪ್ರಶ್ನೆ