ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಮುಕ್ತಾಯವಾಗಿದ್ದು, ಸಚಿವ ಸಂಪುಟ ಪುನರ್ ರಚನೆ ಸಂಬಂಧ ಶಾಸಕರ ಜೊತೆ ಮುಖಂಡರ ಸಮಾಲೋಚನೆ ಆರಂಭವಾಗಿದೆ.
ನಗರದ ಖಾಸಗಿ ಹೋಟೆಲ್ನಲ್ಲಿ ಶಾಸಕಾಂಗ ಪಕ್ಷದ ಸಭೆ ಮುಗಿದಿದ್ದು, ಮುಂದಿನ ಎರಡು ಗಂಟೆ ಶಾಸಕರ ಮನದಾಳದ ಮಾತನ್ನು ಆಲಿಸುವ ಕಾರ್ಯವನ್ನು ರಾಜ್ಯ ಉಸ್ತುವಾರಿ ಸಚಿವ ಕೆ.ಸಿ. ವೇಣುಗೋಪಾಲ್,ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾಡಲಿದ್ದಾರೆ.
ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷರಾಗಿ ಮುಂದುವರಿಯಬೇಕೆಂದು ನಿರ್ಣಯ ತೆಗದುಕೊಂಡಿದ್ದೇವೆ. ರಾಹುಲ್ ಗಾಂಧಿ ಅವರ ಸೇವೆ ಕಾಂಗ್ರೆಸ್ ಪಕ್ಷ ಹಾಗೂ ದೇಶಕ್ಕೆ ಅಗತ್ಯ. ಅವರ ನಾಯಕತ್ವದಲ್ಲಿ ಪಕ್ಷ ಮುನ್ನಡೆಯಬೇಕೆಂದು ನಿರ್ಣಯ ತೆಗದುಕೊಳ್ಳಲಾಗಿದೆ ಎಂದರು. ಲೋಕಸಭೆ ಚುನಾವಣೆ ಫಲಿತಾಂಶದ ಹಿನ್ನಡೆ ಬಗ್ಗೆ ಚರ್ಚೆ ಮಾಡಲಾಗಿದೆ. ಸರ್ಕಾರವನ್ನ ಅಸ್ಥಿರ ಮಾಡಲು ಬಿಜೆಪಿ ಪ್ರಯತ್ನ ನಡೆಸುತ್ತಿದೆ. ಇದನ್ನ ನಾವೆಲ್ಲರೂ ಎದುರಿಸಬೇಕು. ಮೈತ್ರಿ ಸರ್ಕಾರದಿಂದ ಇನ್ನು ಹೆಚ್ಚಿನ ಕಾರ್ಯಕ್ರಮ ಜಾರಿಯಲ್ಲಿರಲಿದೆ. ಜನರ ಮನಸ್ಸು ಮತ್ತೆ ಗೆಲ್ಲುವ ಎಲ್ಲ ಪ್ರಯತ್ನ ನಡೆಸುತ್ತೇವೆ ಎಂದರು.
ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ನಮಗೆ ರಾಹುಲ್ ಅವರ ನಾಯಕತ್ವ ಅಗತ್ಯ ಹಾಗೂ ಅನಿವಾರ್ಯತೆ ಇದೆ. ಇದರಿಂದ ಮಹತ್ವದ ನಿರ್ಣಯ ಕೈಗೊಂಡಿದ್ದೇವೆ. ಇದನ್ನು ರಾಷ್ಟ್ರೀಯ ಅಧ್ಯಕ್ಷರ ಗಮನಕ್ಕೆ ತರುತ್ತೇವೆ. ಎಲ್ಲಾ ಎಂಎಲ್ಎಗಳು ಸಭೆಗೆ ಅಟೆಂಡ್ ಆಗಿದ್ದಾರೆ. ಯಾರೂ ಸಭೆಗೆ ಮಿಸ್ ಆಗಿಲ್ಲ. ರಾಹುಲ್ ಗಾಂಧಿ ಒಬ್ಬರೇ ಸೋಲಿಗೆ ಹೊಣೆಯಲ್ಲ. ನಾವೆಲ್ಲರೂ ಹೊಣೆಯನ್ನ ಹೊರುತ್ತೇವೆ. ಇವತ್ತು ಕಾಂಗ್ರೆಸ್ ಪಕ್ಷದ ಅವಶ್ಯಕತೆಯಿದೆ. ಶೇ.20ರಷ್ಟು ಮತದಾರರು ಕಾಂಗ್ರೆಸ್ ಬೆಂಬಲಿಸಿದ್ದಾರೆ. ಇಡೀ ದೇಶದಲ್ಲಿ ಕಾಂಗ್ರೆಸ್ ಪಾರ್ಟಿಯಿದೆ. ಸೋಲುತ್ತಿದ್ದಂತೆ ಕಾಂಗ್ರೆಸ್ ಪಕ್ಷ ಇಲ್ಲದಂತಾಗಲ್ಲ. ಹಿಂದೆಯೂ ಕಾಂಗ್ರೆಸ್ ಪಕ್ಷ ಸೋತಿತ್ತು. ಮತ್ತೆ ಮೇಲೆದ್ದು ಬಂದಿತ್ತು. ಹೀಗಾಗಿ ನಾವೆಲ್ಲರೂ ರಾಹುಲ್ ಬೆನ್ನಿಗಿದ್ದೇವೆ ಎಂದು ಧೈರ್ಯ ತುಂಬಿದರು.
ಇಂದು ಸಚಿವ ಸಂಪುಟ ಪುನಾರಚನೆ ಬಗ್ಗೆ ಚರ್ಚೆಯಾಗಿಲ್ಲ. ಕೆಲವರು ಬರದೇ ಇರುವುದಕ್ಕೆ ಬೇರೆ ಕಾರಣವಿದೆ. ಅವರು ನಮ್ಮ ಒಪ್ಪಿಗೆ ತೆಗೆದುಕೊಂಡಿದ್ದಾರೆ. ರಾಮಲಿಂಗಾರೆಡ್ಡಿ ವಿದೇಶದಲ್ಲಿದ್ದಾರೆ. ಸುಬ್ಬಾರೆಡ್ಡಿ, ರಾಜಶೇಖರ್ ಪಾಟೀಲ್ ಚುನಾವಣೆ ಹಿನ್ನೆಲೆಯಲ್ಲಿ ಬರಲು ಸಾಧ್ಯವಾಗಿಲ್ಲ. ರೋಷನ್ ಬೇಗ್, ರಮೇಶ್ ಜಾರಕಿಹೊಳಿ ಬಂದಿಲ್ಲ. ಅವರು ಯಾಕೆ ಬಂದಿಲ್ಲ ಅನ್ನೋದು ಗೊತ್ತಿಲ್ಲ. ಅವರು ಗೈರಿನ ಬಗ್ಗೆ ಅನುಮತಿ ಕೇಳಿಲ್ಲ. ಆದರೂ ಅವರು ಎಲ್ಲೂ ಹೋಗಿಲ್ಲ. ಕಾಂಗ್ರೆಸ್ನಲ್ಲಿ ಯಾವುದೇ ಅಸಮಾಧಾನವಿಲ್ಲ. ನಾವೆಲ್ಲ ಶಾಸಕರು ಒಗ್ಗಟ್ಟಿನಿಂದ ಇದ್ದೇವೆ. ಸರ್ಕಾರ ಕಲ್ಲು ಬಂಡೆಯಂತೆ ನಿಂತಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.