ಬೆಂಗಳೂರು: ಶಾಸಕರಿಬ್ಬರ ರಾಜೀನಾಮೆಯಿಂದ ಕಾಂಗ್ರೆಸ್ ಪಕ್ಷದಲ್ಲಿ ಎದುರಾಗಿದ್ದ ಆತಂಕ ನಿವಾರಣೆ ಆದಂತೆ ತೋರುತ್ತಿದ್ದು, ತೃಪ್ತರಲ್ಲಿ ನಿರಾಳತೆ, ಅತೃಪ್ತರಲ್ಲಿ ಗೊಂದಲ ಮುಂದುವರೆದಿರುವುದು ಗೋಚರಿಸುತ್ತಿದೆ.
ಬೆಂಗಳೂರಿನ ಕಾಂಗ್ರೆಸ್ ನಾಯಕರ ನಿವಾಸಗಳು ಭಣಗುಡುತ್ತಿವೆ. ಎರಡು ದಿನದಿಂದ ಮುಖಂಡರ ಸಭೆ, ಅತೃಪ್ತರ ವಿಚಾರ ಚರ್ಚೆ ಸೇರಿದಂತೆ ಹಲವು ಚಟುವಟಿಕೆಗಳಿಂದ ತುಂಬಿ ತುಳುಕುತ್ತಿದ್ದ ಮನೆಗಳು ಖಾಲಿ ಖಾಲಿ ಆಗಿವೆ. ಇನ್ನೊಂದೆಡೆ ನಂಬಿದ್ದ ಶಾಸಕರು ಕೈ ಕೊಟ್ಟಿದ್ದರಿಂದ ಬೇಸರಗೊಂಡಿರುವ ರಮೇಶ್ ಜಾರಕಿಹೊಳಿ ತಮ್ಮ ಸೆವೆನ್ ಮಿನಿಸ್ಟರ್ ಕ್ವಾಟ್ರಸ್ನತ್ತ ಮುಖ ಮಾಡಿಲ್ಲ. ಇನ್ನು ಅವರ ಆಪ್ತರೂ ಕೂಡ ಇತ್ತ ಸುಳಿದಿಲ್ಲ. ಹೀಗಾಗಿ ರಮೇಶ್ ಜಾರಕಿಹೊಳಿ ನಿವಾಸ ಕೂಡ ಭಣಗುಡುತ್ತಿದೆ. ಒಟ್ಟಾರೆ ಅತೃಪ್ತರ ಪಾಳಯಲ್ಲಿ ಯಾವುದೇ ಚಟುವಟಿಕೆ ಕಾಣುತ್ತಿಲ್ಲ.
ಇನ್ನೊಂದೆಡೆ ಕಾಂಗ್ರೆಸ್ ಶಾಸಕರಲ್ಲಿ ಕೆಲವರು ರಾಜೀನಾಮೆ ನೀಡಲಿದ್ದಾರೆ ಎಂದು ಹೇಳಲಾಗಿದ್ದ ಶಾಸಕರ ಮನವೊಲಿಸುವಲ್ಲಿ ರಾಜ್ಯ ನಾಯಕರು ಬಹುತೇಕ ಸಫಲವಾದಂತೆ ಭಾಸವಾಗುತ್ತಿದೆ. ಬೇಸರಗೊಂಡವರ ಮನವೊಲಿಸುವ ಯತ್ನಕ್ಕೆ ಮುಂದಾಗಿದ್ದ ಸಿದ್ದರಾಮಯ್ಯ ಕೂಡ ನೆಮ್ಮದಿಯಾಗಿ ಮೈಸೂರಿಗೆ ತೆರಳಿದ್ದು, ನಾಳೆ ರಾತ್ರಿ ವಾಪಸಾಗಲಿದ್ದಾರೆ.
ಒಟ್ಟಾರೆ ರಾಜ್ಯ ಕಾಂಗ್ರೆಸ್ ನಾಯಕರು ತಾಳಿರುವ ನಿಲುವು, ಅತೃಪ್ತಿ ಶಮನವಾಗಿದೆ ಎನ್ನುವ ಸೂಚನೆ ನೀಡುವಂತಿದೆ.