ಬೆಂಗಳೂರು: ನಿನ್ನೆಯ ಅಧಿವೇಶನದ ಬಳಿಕ ಯಶವಂತಪುರದ ತಾಜ್ ವಿವಾಂತದಲ್ಲಿ ವಾಸ್ತವ್ಯ ಹೂಡಿದ್ದ ಕಾಂಗ್ರೆಸ್ ಶಾಸಕರು ಬಸ್ ಮೂಲಕ ವಿಧಾನಸೌಧದತ್ತ ಹೊರಟಿದ್ದಾರೆ. ಮೊನ್ನೆ ರಾತ್ರೋರಾತ್ರಿ ಶ್ರೀಮಂತ ಪಟೇಲ್ ರೆಸಾರ್ಟ್ ನಿಂದ ತೆರಳಿದ್ದ ಹಿನ್ನಲೆ, ನಿನ್ನೆ ತಾಜ್ ಹೊಟೇಲ್ ನಲ್ಲಿದ್ದ ಶಾಸಕರನ್ನು ಕಾವಲು ಕಾಯಲಾಗಿತ್ತು. ಸೂಕ್ತ ಭದ್ರತೆ ನೀಡಲಾಗಿತ್ತು.
ಕಾಂಗ್ರೆಸ್ ಕಾರ್ಯಕರ್ತರೂ ಸಹ ತಾಜ್ ಹೋಟೇಲ್ ನ ಎರಡೂ ಗೇಟ್ ನಲ್ಲಿ ಕಾವಲು ಕಾದು, ಶಾಸಕರು ಒಳ ಹೊರಗೆ ಹೋಗದಂತೆ ತಡೆದಿದ್ದರು. ಬೆಳಗ್ಗೆ ಹತ್ತು ಗಂಟೆಯ ವೇಳೆಗೆ ಕಾಂಗ್ರೆಸ್ ಮುಖಂಡರಾದ ಈಶ್ವರ ಖಂಡ್ರೆ, ಡಿ.ಸಿ.ಎಂ.ಪರಮೇಶ್ವರ್ ಹೋಟೆಲ್ ಗೆ ಆಗಮಿಸಿ ಶಾಸಕರ ಜೊತೆ ಮಾತುಕತೆ ನಡೆಸಿದರು.
ಸರಕಾರ ಉಳಿವಿನ ಬಗ್ಗೆ ಕಾಂಗ್ರೆಸ್ ನಾಯಕರ ಜೊತೆ ಶಾಸಕರು ಮಹತ್ವದ ಚರ್ಚೆ ನಡೆಸಿದರು. ನ್ಯಾಯ ನಮ್ಮ ಪರವಾಗಿದೆ ,ಸ್ಪೀಕರ್ ನ್ಯಾಯ ಸಮ್ಮತವಾಗಿರುತ್ತಾರೆ ಎಂದು ಶಾಸಕರಿಗೆ ಹಿರಿಯ ನಾಯಕರು ಧೈರ್ಯ ತುಂಬಿದರು ಎನ್ನಲಾಗಿದೆ.
ಅಲ್ಲದೆ ವಿಶ್ವಾಸ ಮತಯಾಚನೆ ನಡೆದರೂ ಎಲ್ಲರೂ ಒಗ್ಗಟ್ಟಾಗಿರಬೇಕು, ಸರಕಾರ ಉಳಿಸಿಕೊಳ್ಳುವಲ್ಲಿ ಎಲ್ಲರೂ ಸಹಕರಿಸಬೇಕೆಂದು ಸೂಚನೆ ನೀಡಿದರು. ಬಳಿಕ ಮಾತನಾಡಿದ, ಡಿಸಿಎಂ ಪರಮೇಶ್ವರ್ ರಾಜ್ಯಪಾಲರ ಆದೇಶದ ಬಗ್ಗೆ ಕಾನೂನು ಸಲಹೆ ಪಡೆದಿದ್ದೇವೆ. ಇದಕ್ಕೆ ತಕ್ಕಂತೆ ಸದನದಲ್ಲಿ ನಮ್ಮ ನಡೆ ಇರುತ್ತದೆ ಎಂದರು.