ಬೆಂಗಳೂರು: ಗೋಹತ್ಯೆ ನಿಷೇಧ ವಿಧೇಯಕ ಅಂಗೀಕರಿಸಿದ ರೀತಿಗೆ ಕಾಂಗ್ರೆಸ್ನ ಪರಿಷತ್ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ವಿಧಾನಸೌಧದಲ್ಲಿ ಜಂಟಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಸದಸ್ಯ ಸಿ.ಎಂ.ಇಬ್ರಾಹಿಂ, ಕರ್ನಾಟಕ ಇತಿಹಾಸದಲ್ಲಿ ಇಂತಹ ಸರ್ಕಾರ ಇರಲಿಲ್ಲ. ಸದನದಲ್ಲಿ ನಿಯಮ, ನಡವಳಿಕೆ ಇಲ್ಲ. ಉಪಸಭಾಪತಿ ಏಕಾಏಕಿ ಬಿಲ್ ಪಾಸ್ ಮಾಡುತ್ತಾರೆ. ವಿಧೇಯಕ ಮತಕ್ಕೆ ಹಾಕಿದ್ದರೆ ಸೋಲಾಗುತ್ತಿತ್ತು. ಈಗಲೂ ಮತಕ್ಕೆ ಹಾಕಿ ಎಂದು ಇಬ್ರಾಹಿಂ ಆಗ್ರಹಿಸಿದರು. ವಿಧೇಯಕ ಮಂಡನೆ ಸಂದರ್ಭದಲ್ಲಿ ಮಾತನಾಡಲು ಅವಕಾಶ ನೀಡಲಿಲ್ಲ. ಬಿಜೆಪಿಯವರು ಸದನದೊಳಗೆ ರೌಡಿಸಂ ನಡೆಸಿದರು ಎಂದು ಕಿಡಿಕಾರಿದರು.
ಸಿಎಂ ರಿಮೋಟ್ ಕಂಟ್ರೋಲ್ನಲ್ಲಿ ಇದನ್ನು ನಡೆಸಿದ್ದಾರೆ. ನಮ್ಮನ್ನು ಹೊಡೆಯುವುದೊಂದು ಬಾಕಿ ಇತ್ತು. ನಾಲ್ಕು ಜನ ಹೆಚ್ಚಾದರೆ ನಮ್ಮನ್ನು ಹೊಡೆದು ಹೊರಗೆ ಹಾಕುತ್ತಾರೆ. ಬಿಜೆಪಿಯವರಿಗೆ ಮಾನ, ಮರ್ಯಾದೆ ಏನೂ ಇಲ್ಲ. ಇದರ ವಿರುದ್ಧ ಕಾನೂನು ಹೋರಾಟ ಮಾಡುತ್ತೇವೆ. ಅಗತ್ಯ ಬಿದ್ದರೆ ಬೀದಿಗಿಳಿದು ಹೋರಾಡುತ್ತೇವೆ. ಹೀಗೆ ಮಾಡುತ್ತಾ ಹೋದರೆ ಪ್ರಜಾಪ್ರಭುತ್ವ ಉಳಿಯಲ್ಲ. ಸದನ ಜಾರಿಯಲ್ಲಿ ಇಲ್ಲದೆ ಇದ್ದಾಗ ಬಿಲ್ ಅಂಗೀಕಾರ ಮಾಡಿದ್ದಾರೆ ಎಂದು ಸಿ.ಎಂ.ಇಬ್ರಾಹಿಂ ವಾಗ್ದಾಳಿ ನಡೆಸಿದರು.
ಇದೇ ವೇಳೆ ಮಾತನಾಡಿದ ಪರಿಷತ್ ಪ್ರತಿಪಕ್ಷದ ಮುಖ್ಯ ಸಚೇತಕ ಎಂ.ನಾರಾಯಣ ಸ್ವಾಮಿ, ಆಡಳಿತ ಪಕ್ಷದ ವರ್ತನೆ ಸದನದ ಕಾರ್ಯ ಕಲಾಪ ಹಾಗೂ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ನಿನ್ನೆ ರಾಜ್ಯಪಾಲರ ಭಾಷಣದ ಮೇಲೆ ವಂದನಾ ನಿರ್ಣಯ ಚರ್ಚೆ ನಡೆಯುತ್ತಿತ್ತು. ವಂದನಾ ಚರ್ಚೆಯ ಭಾಷಣ ಮೊಟಕುಗೊಳಿಸಿ ಗೋಹತ್ಯೆ ನಿಷೇಧ ವಿಧೇಯಕ ತೆಗೆದುಕೊಂಡರು. ಇದರ ತುರ್ತು ಅಗತ್ಯ ಏನಿತ್ತು?. ಏಕಾಏಕಿ ಉಪಸಭಾಪತಿ ಮಸೂದೆ ಅಂಗೀಕಾರ ಮಾಡಿದ್ದಾರೆ. ಈ ಮೂಲಕ ಸದನದ ನಿಯಮ ಗಾಳಿಗೆ ತೂರಿದ್ದಾರೆ. ಯಾವುದೋ ಜನಾಂಗದ ಓಲೈಕೆಗಾಗಿ ಮಸೂದೆ ಜಾರಿಗೊಳಿಸಿದೆ. ಈ ಬಗ್ಗೆ ರಾಜ್ಯಪಾಲರನ್ನು ಭೇಟಿ ಮಾಡಿ ದೂರು ನೀಡುತ್ತೇವೆ ಎಂದು ಅವರು ತಿಳಿಸಿದರು.
ಪರಿಷತ್ ಸದಸ್ಯ ಪಿ.ಆರ್. ರಮೇಶ್ ಮಾತನಾಡಿ, ಬಿಲ್ ಮೂಲಕ ಬೀಫ್ ಮಾರುವುದನ್ನು ನಿಷೇಧಿಸಬೇಕಿತ್ತು. ಆದರೆ ರಪ್ತು ಹೆಚ್ಚಿಸುವ ನಿಟ್ಟಿನಲ್ಲಿ ಈ ಮಸೂದೆ ತರಲಾಗಿದೆ. ಬಿಜೆಪಿಯವರು ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯ ನಿಲುವು ಹೊಂದಿದ್ದಾರೆ ಎಂದು ಆರೋಪಿಸಿದರು.
ಓದಿ: ವಿಧಾನ ಪರಿಷತ್ನಲ್ಲಿ ಗೋಹತ್ಯೆ ನಿಷೇಧ ವಿಧೇಯಕ ಅಂಗೀಕಾರ
ಈ ಮಸೂದೆಯಿಂದ ರಾಜಕೀಯ ಲಾಭ ಹಾಗೂ ಕಾರ್ಪೊರೇಟ್ ಲಾಭ ಸಿಗಲಿದೆ. ಆ ಮೂಲಕ ಒಂದು ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುತ್ತಿದ್ದಾರೆ. ಆರ್ಎಸ್ಎಸ್ನವರು ಗೋಶಾಲೆಗಳ ಮೂಲಕ ಹಸುಗಳನ್ನು ರಪ್ತು ಮಾಡುವ ಹುನ್ನಾರ ಮಾಡುತ್ತಿದ್ದಾರೆ. ಇದು ಪ್ರಜಾಪ್ರಭುತ್ವ ಕ್ಕೆ ಧಕ್ಕೆ ತರುವ ನಡವಳಿಕೆಯಾಗಿದೆ. ಈ ಸಂಬಂಧ ರಾಜ್ಯಪಾಲರಿಗೆ ದೂರು ನೀಡಲಿದ್ದೇವೆ ಎಂದರು.
ಪರಿಷತ್ ಸದಸ್ಯ ನಜೀರ್ ಅಹ್ಮದ್ ಮಾತನಾಡಿ, ಸದನದಲ್ಲಿ ಬಿಲ್ ವಿರೋಧಿಸಿದ ಜೆಡಿಎಸ್ ಕೂಡ ರಾಜ್ಯಪಾಲರಿಗೆ ದೂರು ಕೊಟ್ಟು ಬದ್ಧತೆ ತೋರಲಿ. ಇಲ್ಲದಿದ್ದರೆ ಜೆಡಿಎಸ್ ಬಿಜೆಪಿ ಮ್ಯಾಚ್ ಫಿಕ್ಸಿಂಗ್ ಗೊತ್ತಾಗುತ್ತದೆ ಎಂದರು.