ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಲೋಕಸಭಾವಾರು ವೀಕ್ಷಕರನ್ನು ನೇಮಿಸಲಾಗಿದ್ದು, ಇದರ ಮೊದಲ ಸಭೆ ಇಂದು ನಗರದಲ್ಲಿ ನಡೆಯಲಿದೆ. ರಾಜ್ಯ ವಿಧಾನಸಭಾ ಚುನಾವಣಾ ತಯಾರಿ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ 2.30ಕ್ಕೆ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸಭೆ ಕರೆಯಲಾಗಿದೆ.
ಈ ಸಭೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷರು ಭಾಗವಹಿಸಲಿದ್ದಾರೆ. ಸಭೆಯಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕೈಗೊಳ್ಳಬೇಕಾಗಿರುವ ಕಾರ್ಯತಂತ್ರಗಳ ಕುರಿತು ಸುದೀರ್ಘ ಚರ್ಚೆ ನಡೆಯಲಿದೆ.
ಲೋಕಸಭಾ ಕ್ಷೇತ್ರವಾರು ನೇಮಕಗೊಂಡಿರುವ ವೀಕ್ಷಕರು ತಮ್ಮ ವ್ಯಾಪ್ತಿಯಲ್ಲಿ ಬರುವ ಜಿಲ್ಲಾ ತಾಲೂಕು ಮತ್ತು ಹೋಬಳಿ ಮಟ್ಟದ ಮುಖಂಡರ ಜೊತೆ ನಿರಂತರ ಸಂಪರ್ಕದಲ್ಲಿದ್ದು ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಚಟುವಟಿಕೆಯ ಮೇಲೆ ನಿಗಾ ವಹಿಸಬೇಕಿದೆ. ಯಾವುದೇ ರೀತಿಯ ಬೆಳವಣಿಗೆಗಳು ನಡೆದರೂ ಅದನ್ನು ತಕ್ಷಣವೇ ರಾಜ್ಯ ಹಾಗೂ ರಾಷ್ಟ್ರೀಯ ಕಾಂಗ್ರೆಸ್ ನಾಯಕರಿಗೆ ಮಾಹಿತಿ ತಲುಪಿಸಬೇಕಿದೆ. ಅಭ್ಯರ್ಥಿಗಳ ಆಯ್ಕೆಯಿಂದ ಆರಂಭಗೊಂಡು ಅಂತಿಮವಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಗೆಲುವಿನವರೆಗೂ ಇವರು ನಿರಂತರವಾಗಿ ತಮಗೆ ವಹಿಸಿರುವ ಕ್ಷೇತ್ರ ವ್ಯಾಪ್ತಿಯಲ್ಲಿದ್ದು ಕಾರ್ಯನಿರ್ವಹಿಸುವಂತೆ ಇಂದಿನ ಸಭೆಯಲ್ಲಿ ನಾಯಕರು ಸೂಚಿಸಲಿದ್ದಾರೆ. ಅಲ್ಲದೇ ಆಯಾ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿಯೇ ಇದ್ದು ಅದರ ವ್ಯಾಪ್ತಿಯಲ್ಲಿ ಬರುವ ವಿಧಾನಸಭೆ ಕ್ಷೇತ್ರಗಳ ಮೇಲೆ ಸಂಪೂರ್ಣ ನಿಗಾ ಹಾಗೂ ನಿಯಂತ್ರಣ ವಹಿಸುವಂತೆ ಸೂಚನೆ ನೀಡಲಿದ್ದಾರೆ.
ಇದನ್ನೂ ಓದಿ: ಜ.16 ರಂದು ಬೆಂಗಳೂರಿನಲ್ಲಿ ಕಾಂಗ್ರೆಸ್ 'ನಾ ನಾಯಕಿ' ಸಮಾವೇಶ: ಪ್ರಿಯಾಂಕ ಗಾಂಧಿ ಆಗಮನ
ಒಟ್ಟಾರೆ ಇಂದಿನ ಸಭೆಯಲ್ಲಿ ಮುಂಬರುವ ವಿಧಾನಸಭೆ ಚುನಾವಣೆ ಗೆಲುವಿಗೆ ಕಾಂಗ್ರೆಸ್ನ ಇನ್ನೊಂದು ಹಂತದ ಮಹತ್ವದ ಕಾರ್ಯಾಚರಣೆಯ ಚರ್ಚೆ ನಡೆಯಲಿದೆ. ಎಐಸಿಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ನಿನ್ನೆಯಷ್ಟೇ ಲೋಕಸಭಾ ಕ್ಷೇತ್ರವಾರು ವೀಕ್ಷಕರ ನೇಮಕ ಆದೇಶ ಹೊರಡಿಸಿದ್ದಾರೆ. ನೇಮಕಗೊಂಡಿರುವ ಎಲ್ಲಾ 28 ಸದಸ್ಯರು ಇಂದಿನ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
28 ವೀಕ್ಷಕರ ಹೆಸರು ಮತ್ತು ಕ್ಷೇತ್ರ ವಿವರ ಇಂತಿದೆ: ಕ್ರಿಸ್ಟೋಫರ್ ತಿಲಕ್ (ಬಾಗಲಕೋಟೆ), ಟಿ ರಾಮಕೃಷ್ಣನ್ (ಬೆಂಗಳೂರು ಕೇಂದ್ರ), ಸಂಸದ ವಿ. ವೈತಿಲಿಂಗಮ್ (ಬೆಂಗಳೂರು ಉತ್ತರ), ಸಂಸದ ಹಿಬಿ ಎಡೇನ್ (ಬೆಂಗಳೂರು ಗ್ರಾಮಾಂತರ), ಸಂಸದ ಅದೂರು ಪ್ರಕಾಶ್ (ಬೆಂಗಳೂರು ದಕ್ಷಿಣ), ಸಂಸದ ಡಾ. ಮೊಹಮ್ಮದ್ ಜಾವೇದ್ (ಬೆಳಗಾವಿ), ವಸಂತ ಪುರ್ಕೆ (ಬಳ್ಳಾರಿ), ಡಾ. ಸಿರಿವೆಲ್ಲಾ ಪ್ರಸಾದ್ (ಬೀದರ್), ನಿತಿನ್ ರಾವತ್ (ವಿಜಯಪುರ(ಎಸ್ಸಿ)), ಎ.ಪಿ. ಅನಿಲ್ ಕುಮಾರ್ (ಚಾಮರಾಜನಗರ (ಎಸ್ಸಿ)), ವಿ.ಎಸ್. ಶಿವಕುಮಾರ್ (ಚಿಕ್ಕಬಳ್ಳಾಪುರ), ಮೋಹನ್ ಜೋಶಿ (ಚಿಕ್ಕೋಡಿ), ಸಂಜಯ್ ದತ್ (ಚಿತ್ರದುರ್ಗ), ಸುನೀಲ್ ಕೇದಾರ್ (ದಕ್ಷಿಣ ಕನ್ನಡ), ಪ್ರಣೀತಿ ಶಿಂಧೆ (ದಾವಣಗೆರೆ), ಸಂಸದ ಕುಲದೀಪ್ ರೈ ಶರ್ಮ (ಧಾರವಾಡ), ವರ್ಷಾ ಗಾಯಕ್ವಾಡ್ (ಕಲಬುರುಗಿ(ಎಸ್ಸಿ)), ಸಂಸದ ವಿಜಯ್ ವಸಂತ್ (ಹಾಸನ), ಪೂನಮ್ ಪ್ರಭಾಕರ್ (ಹಾವೇರಿ), ಎಚ್.ವೇಣುಗೋಪಾಲ್ ರಾವ್ (ಕೋಲಾರ (ಎಸ್ಸಿ)), ಸಂಸದೆ ಜೆಬಿ ಮಥೇರ್ (ಕೊಪ್ಪಳ), ಸಂಸದ ವಿಷ್ಣುಪ್ರಸಾದ್ (ಮಂಡ್ಯ), ಸಂಸದ ಎಂ.ಕೆ.ರಾಘವನ್ (ಮೈಸೂರು), ಅಸ್ಲಾಂ ಷಾಹಿಕ್ (ರಾಯಚೂರು), ವಿಷ್ವಜಿತ್ ಕದಂ (ಶಿವಮೊಗ್ಗ), ಮೊಹಮ್ಮದ್ ಆರಿಫ್ ನಾಸಿಮ್ ಖಾನ್ (ತುಮಕೂರು), ಸಂಸದ ಟಿ.ಎನ್. ಪ್ರತಾಪನ್ (ಉಡುಪಿ ಚಿಕ್ಕಮಗಳೂರು) ಹಾಗೂ ಸಂಸದ ನೀರಜ್ ದಂಗಿ (ಉತ್ತರ ಕನ್ನಡ) ವೀಕ್ಷಕರಾಗಿ ನಿಯೋಜಿತರಾಗಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ನಾಯಕರ ಪ್ರವಾಸ ಸಮಿತಿ ಸಭೆ; ಮಹತ್ವದ ವಿಚಾರಗಳ ಚರ್ಚೆ