ಬೆಂಗಳೂರು: ಡಿಸೆಂಬರ್ ತಿಂಗಳಲ್ಲಿ ನಡೆಯುವ ಉಪಚುನಾವಣೆಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಕಾಂಗ್ರೆಸ್ ಕಸರತ್ತು ಮುಂದುವರಿದಿದ್ದು, ಮಹತ್ವದ ಸಭೆ ಕೆಪಿಸಿಸಿ ಕಚೇರಿಯಲ್ಲಿ ಆರಂಭವಾಗಿದೆ.
ಒಟ್ಟು 15 ಕ್ಷೇತ್ರಗಳಿಗೆ ನಡೆಯುವ ವಿಧಾನಸಭೆ ಉಪಚುನಾವಣೆ ಪೈಕಿ ಎಂಟು ಕ್ಷೇತ್ರಗಳಿಗೆ ಈಗಾಗಲೇ ಅಭ್ಯರ್ಥಿಗಳನ್ನು ಕಾಂಗ್ರೆಸ್ ಘೋಷಿಸಿದೆ. ಉಳಿದ ಕ್ಷೇತ್ರಗಳಿಗೆ ಅಭ್ಯರ್ಥಿಯ ಆಯ್ಕೆ ಮಾಡಲು ತೀವ್ರ ಕಸರತ್ತು ನಡೆಸಿದ್ದಾರೆ.
ಬಹುತೇಕ 7 ಕ್ಷೇತ್ರಗಳಿಗೆ ಅಭ್ಯರ್ಥಿಯ ಕೊರತೆ ಎದುರಾಗಿದೆ ಎಂಬ ಮಾತು ಕೇಳಿ ಬರುತ್ತಿವೆ. ಈ ಬೆನ್ನಲ್ಲೇ, ರಾಜ್ಯ ಕಾಂಗ್ರೆಸ್ ನಾಯಕರು ಇಂದು ಸಂಜೆ ಇಲ್ಲವೇ ನಾಳೆಯೊಳಗೆ ಪಟ್ಟಿ ಅಂತಿಮಗೊಳಿಸಲಿದ್ದಾರೆ. ಬಳಿಕ ಹೈಕಮಾಂಡ್ ಒಪ್ಪಿಗೆ ಪಡೆದು ಹೆಸರು ಪ್ರಕಟಿಸುವುದಾಗಿ ತಿಳಿಸಿದ್ದಾರೆ.
ಐದು ಅಂತಿಮ ಎರಡು ಬಾಕಿ:
ಏಳರಲ್ಲಿ ಐದು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಅಂತಿಮ ಮಾಡಿದ ಕಾಂಗ್ರೆಸ್ ಪಕ್ಷ, ಅಧಿಕೃತವಾಗಿ ಘೋಷಿಸುವುದು ಮಾತ್ರ ಬಾಕಿ ಇದೆ ಎಂಬ ಮಾತು ಕೂಡ ಕೇಳಿ ಬರುತ್ತಿದೆ. ಸಂಭವನೀಯರ ಪಟ್ಟಿ ಇಂತಿದೆ.
- ಕೆ.ಆರ್ ಪೇಟೆ - ಕೆ.ಬಿ ಚಂದ್ರಶೇಖರ್,
- ಯಶವಂತಪುರ - ರಾಜಕುಮಾರ್ ಅಥವಾ ಪ್ರಿಯಕೃಷ್ಣ ಅಥವಾ ಹೇಮಲತಾ ರಮೇಶ್,
- ಗೋಕಾಕ್ - ಲಕನ್ ಜಾರಕಿಹೊಳಿ,
- ಕಾಗವಾಡ - ರಾಜುಕಾಗೆ,
- ವಿಜಯ ನಗರ - ವಿವೈ ಘೋರ್ಪಡೆ ಆಯ್ಕೆ ಬಹುತೇಕ ಅಂತಿಮವಾಗಿದೆ.
- ಶಿವಾಜಿನಗರ - ರಿಜ್ವಾನ್ ಅರ್ಷದ್ ಇಲ್ಲವೇ ಸಲಿಂ ಮಹಮದ್ ಹಾಗೂ ಅಥಣಿ ಇದುವರೆಗೂ ಅಂತಿಮ ಆಗಿಲ್ಲ.
ಹಿರಿಯರ ಗೈರು: ಕೈ ನಾಯಕರ ಸಭೆಗೆ ಹಿರಿಯರೇ ಗೈರು ಹಾಜರಾಗಿ ಮುಜುಗರ ಮೂಡಿಸಿದ್ದಾರೆ. ಮತ್ತೆ ಮೂಲ ಹಾಗೂ ವಲಸೆ ಕಾಂಗ್ರೆಸ್ ನಾಯಕರ ನಡುವೆ ಕಿತ್ತಾಟ ಇಂದಿನ ಸಭೆಯಲ್ಲಿ ಗೋಚರಿಸಿದೆ. ಕೆಪಿಸಿಸಿ ಅಧ್ಯಕ್ಷರು ಕರೆದಿದ್ದ ಸಭೆಗೆ ಹಿರಿಯ ನಾಯಕರು ಗೈರಾಗಿದ್ದಾರೆ. ಸಭೆಗೆ ಗೈರಾದ ಬಿ.ಕೆ ಹರಿಪ್ರಸಾದ್, ಕೆ.ಹೆಚ್.ಮುನಿಯಪ್ಪ, ಹೆಚ್.ಕೆ.ಪಾಟೀಲ್, ಪರಮೇಶ್ವರ್, ಡಿಕೆ ಶಿವಕುಮಾರ್ ಹಾಜರಾಗಿಲ್ಲ.
ಸಿದ್ದರಾಮಯ್ಯ, ಎಂಬಿ ಪಾಟೀಲ್, ಕೃಷ್ಣಬೈರೇಗೌಡ, ಕೆ.ಜೆ.ಜಾರ್ಜ್, ಈಶ್ವರ್ ಖಂಡ್ರೆ ಮಾತ್ರ ಹಾಜರಾಗಿದ್ದಾರೆ.
ಚಿಕ್ಕಬಳ್ಳಾಪುರ ಗೊಂದಲ:
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ಈಗಾಗಲೇ ಅಭ್ಯರ್ಥಿಯಾಗಿ ಆಂಜಿನಪ್ಪ ಹೆಸರು ಘೋಷಣೆಯಾಗಿದ್ದು, ಕೆಲವು ಸಮಸ್ಯೆಗಳು ಇರುವ ಹಿನ್ನೆಲೆ ಹಾಗೂ ಆಂಜಿನಪ್ಪ ಆರ್ಥಿಕವಾಗಿ ಸಬಲರಾಗಿರುವ ಕಾರಣ ಅಭ್ಯರ್ಥಿ ಬದಲಿಸುವ ಕುರಿತು ಸಭೆ ನಡೆಸಲು ನಿರ್ಧರಿಸಲಾಗಿದೆ. ಚಿಕ್ಕಬಳ್ಳಾಪುರ ಭಾಗದ ಕಾಂಗ್ರೆಸ್ ನಾಯಕರನ್ನು ಕರೆದು ಸಭೆ ನಡೆಸಲು ತೀರ್ಮಾನಿಸಿರುವ ದಿನೇಶ್ ಗುಂಡೂರಾವ್ ಅವರು, ಆಂಜಿನಪ್ಪ ಬದಲು ಯಲುವನಹಳ್ಳಿ ರಮೇಶ್ ಅವರಿಗೆ ಟಿಕೆಟ್ ನೀಡುವ ಸಂಬಂಧ ಚರ್ಚಿಸಲಿದ್ದಾರೆ ಎನ್ನಲಾಗಿದೆ. ಇಂದಿನ ಸಭೆ ಕೂಡ ಸುದೀರ್ಘವಾಗಿ ನಡೆದಿದ್ದು, ಸಭೆಯ ನಂತರ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಹೈಕಮಾಂಡ್ಗೆ ಕಳಿಸಿಕೊಡುವ ಕಾರ್ಯ ಆಗಲಿದೆ.