ಬೆಂಗಳೂರು: ಇಂದು ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆ ನಡೆಸಿದ್ದು, ಸದನದಲ್ಲಿ ಸಕ್ರಿಯವಾಗಿ ವಿರೋಧ ಪಕ್ಷವಾಗಿ ಕೆಲಸ ಮಾಡೋಣ. ಇವತ್ತಿನ ಸಭೆಯಲ್ಲಿ ಆಪರೇಷನ್ ಕಮಲದ ಬಗ್ಗೆ ಸರ್ಕಾರದ ಕಿವಿ ಹಿಂಡಬೇಕು ಎಂಬ ನಿರ್ಧಾರವನ್ನು ಸಭೆಯಲ್ಲಿ ಕೈಗೊಳ್ಳಲಾಗಿದೆ.
ಇಂದು ವಿಧಾನಸೌಧದಲ್ಲಿ ಬೆಳಗ್ಗೆ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು, ಸಾಧ್ಯವಾದಷ್ಟು ಶಾಸಕರು ಹೆಚ್ಚು ಚರ್ಚೆಯಲ್ಲಿ ಪಾಲ್ಗೊಳ್ಳಿ. ಜೆಡಿಎಸ್ ನಿಲುವು ಏನೇ ಇರಲಿ, ವಿಪಕ್ಷ ನಾಯಕರಾಗಿ ನಾವು ಸಕ್ರಿಯವಾಗಿ ಕೆಲಸ ಮಾಡೋಣ ಎಂಬ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.
ಉಪಚುನಾವಣೆಯನ್ನ ಗಂಭೀರವಾಗಿ ಪರಿಗಣಿಸಲು ಸೂಚನೆ ನೀಡಲಾಗಿದ್ದು, ಪ್ರಬಲ ಅಭ್ಯರ್ಥಿ ಕಣಕ್ಕೆ ಇಳಿಸಿ ಅತೃಪ್ತರಿಗೆ ಟಕ್ಕರ್ ಕೊಡಲು ನಿರ್ಧಾರ ಮಾಡಲಾಗಿದೆ. ಚುನಾವಣೆಯಲ್ಲಿ ಮೈತ್ರಿ ಬೇಡ. ಸದನದಲ್ಲಿ ಆಡಳಿತ ಪಕ್ಷದ ವಿರುದ್ಧ ಜೆಡಿಎಸ್ ಪ್ರತಿಪಾದಿಸುವ ವಿಚಾರಗಳಿಗೆ ಸಹಮತ ಕೊಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂಬ ಮಾಹಿತಿ ಇದೆ.
ಸಿದ್ದರಾಮಯ್ಯ ಬಗ್ಗೆ ಒಮ್ಮತ:
ಪ್ರತಿಪಕ್ಷದ ನಾಯಕರಾಗಿ ಸಿದ್ದರಾಮಯ್ಯ ಆಯ್ಕೆಗೆ ಶಾಸಕರ ಒಮ್ಮತದ ನಿರ್ಧಾರ ಕೈಗೊಂಡಿದ್ದಾರೆ. ಹೈಕಮಾಂಡ್ ಸೂಚನೆ ಮೇರೆಗೆ ನಡೆದುಕೊಳ್ಳಲು ನಿರ್ಧಾರ ಕೈಗೊಳ್ಳಲಾಗಿದ್ದು, ವಿಪಕ್ಷ ನಾಯಕರ ನೇಮಕ ಹೈಕಮಾಂಡ್ ತೀರ್ಪಿಗೆ ಬಿಟ್ಟು ಕೊಡಲು ಸಮ್ಮತಿಸಿದ್ದಾರೆ.
ಸಭೆಯಲ್ಲಿ ಹಲವು ಮಹತ್ವದ ವಿಚಾರಗಳ ಚರ್ಚೆ ನಡೆದಿದ್ದು, 17 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನ ಕಣಕ್ಕಿಳಿಸೋಣ. ಒಬ್ಬೊಬ್ಬರು ಹಿರಿಯರು ಒಂದೊಂದು ಕ್ಷೇತ್ರ ವಹಿಸಿಕೊಳ್ಳಬೇಕು. ಆ ಕ್ಷೇತ್ರದ ಸಂಘಟನೆ ಅವರೇ ನೋಡಿಕೊಳ್ಳಬೇಕು. ಗೆಲ್ಲುವ ಅಭ್ಯರ್ಥಿಯನ್ನೆ ಆಯ್ಕೆ ಮಾಡಬೇಕು. ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆಯನ್ನು ಆಯಾ ಶಾಸಕರಿಗೆ ಕೊಟ್ಟು, ಕ್ಷೇತ್ರದ ಹೊಣೆಯ ಸಂಪೂರ್ಣ ಜವಾಬ್ದಾರಿಯನ್ನು ಅವರೇ ಹೊರಬೇಕು ಎಂಬ ಸೂಚಿನೆ ನೀಡಲಾಗಿದೆ ಎನ್ನಲಾಗುತ್ತಿದೆ.
ಜೆಡಿಎಸ್ ಜೊತೆ ಮೈತ್ರಿ ಎಐಸಿಸಿ ನಿರ್ಧರಿಸಲಿದ್ದು, ಇಂದು ಗುಲಾಂ ನಬಿ ಆಜಾದ್ ಬರಲಿದ್ದಾರೆ. ಮೈತ್ರಿ ಮುಂದುವರಿಕೆ ಬಗ್ಗೆ ಇಂದು ಚರ್ಚೆಯಾಗಲಿದೆ. ಬಹುತೇಕ ಜೆಡಿಎಸ್ ಮೈತ್ರಿಗೆ ತಿಲಾಂಜಲಿ ಹಾಡಲು ತೀರ್ಮಾನಿಸಲಾಗಿದೆ ಎನ್ನಲಾಗುತ್ತಿದ್ದು, ಬಿಜೆಪಿ ವಿರುದ್ಧ ರಚನಾತ್ಮಕ ಹೋರಾಟ ಮಾಡಲು ಸದನದ ಒಳಗೆ, ಹೊರಗೆ ಹೋರಾಟ ನಡೆಸುವುದು. ಅತೃಪ್ತರ ವಿಚಾರದಲ್ಲಿ ಬಿಜೆಪಿ ನಡೆದುಕೊಂಡ ರೀತಿ ಬಿಂಬಿಸುವುದು. ಜನರಿಗೆ ಮನವರಿಕೆ ಮಾಡಿ ಕೊಡುವ ತೀರ್ಮಾನ ಕೈಗೊಳ್ಳಲಾಗಿದೆ ಎಂಬ ಮಾಹಿತಿ ಹೊರ ಬಿದ್ದಿದೆ.