ಬೆಂಗಳೂರು: ರಾಜರಾಜೇಶ್ವರಿನಗರ ವಿಧಾನಸಭೆ ಉಪಚುನಾವಣೆ ಬಿಜೆಪಿ ಅಭ್ಯರ್ಥಿಯಾಗಿರುವ ಮುನಿರತ್ನ ವಿರುದ್ಧ ಕಾಂಗ್ರೆಸ್ ನಾಯಕರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.
ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ನಿಯೋಗ ಬೆಂಗಳೂರು ಶೇಷಾದ್ರಿ ರಸ್ತೆಯಲ್ಲಿರುವ ರಾಜ್ಯ ಚುನಾವಣಾ ಆಯೋಗದ ಕಚೇರಿಗೆ ತೆರಳಿ ಚುನಾವಣಾಧಿಕಾರಿಗಳಿಗೆ ದೂರು ನೀಡಿದೆ. ಬಿಜೆಪಿ ಅಭ್ಯರ್ಥಿಗಳಿಂದ ಮತದಾರರಿಗೆ ಆಮಿಷ ಒಡ್ಡುವ ಕಾರ್ಯ ನಡೆಯುತ್ತಿದೆ. ತಮ್ಮದೇ ಹೆಸರಿನಲ್ಲಿ ಟಿವಿ, ಸೆಟ್ ಆಫ್ ಬಾಕ್ಸ್ ಅನ್ನು ವಿತರಿಸಿದ್ದಾರೆ. ಮತದಾರರನ್ನ ಸೆಳೆಯಲು ಇವನ್ನು ಉಚಿತವಾಗಿ ನೀಡಿದ್ದಾರೆ. ಇದು ಸಂವಿಧಾನ ಬಾಹಿರವಾಗಿದ್ದು, ಈ ಕುರಿತು ಕ್ರಮ ತೆಗೆದುಕೊಳ್ಳಬೇಕು ಎಂದು ನಿಯೋಗದ ಸದಸ್ಯರು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾರೆ.
ದೂರು ನೀಡಿದ ಬಳಿಕ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಮುನಿರತ್ನ ಚುನಾವಣಾ ನಿಯಮ ಉಲ್ಲಂಘನೆ ಮಾಡಿದ್ದಾರೆ. ಹೀಗಾಗಿ, ಅವರ ವಿರುದ್ಧ ಎರಡು ದೂರು ನೀಡಿದ್ದೇವೆ. ಅವರು, 50 ಸಾವಿರ ರೂ.ಗಳ ಸೆಟ್ ಆಫ್ ಬಾಕ್ಸ್ನ್ನು ಹಂಚಿದ್ದಾರೆ. ಒಂದೊಂದರ ಬೆಲೆ ಸುಮಾರು 1 ಸಾವಿರಕ್ಕೂ ಹೆಚ್ಚಿದೆ. ಇದರ ಮೌಲ್ಯ ಸುಮಾರು 5 ಕೋಟಿಯಾಗಲಿದೆ. ಇದನ್ನು ಅವರೇ ಒಪ್ಪಿದ್ದಾರೆ. ಇದು ಪ್ರಜಾಪ್ರಭುತ್ವ ಕಾಯ್ದೆಗೆ ವಿರುದ್ಧವಾಗಿದೆ. ಹೀಗಾಗಿ ಅವರ ವಿರುದ್ಧ ಕ್ರಮತೆಗೆದುಕೊಳ್ಳಬೇಕು ಎಂದರು.
ಜೊತೆಗೆ ಇಬ್ಬರು ಎಸಿಪಿಗಳು ಮುನಿರತ್ನ ಪರ ಕೆಲಸ ಮಾಡ್ತಿದ್ದಾರೆ ಎಂದು ಆರೋಪಿಸಿದ ಅವರು, ಇಬ್ಬರು ಎಸಿಪಿಗಳನ್ನೂ ವರ್ಗಾವಣೆ ಮಾಡಬೇಕು. ಮಲ್ಲೇಶ್ವರಂ ಎಸಿಪಿ ವೆಂಕಟೇಶ್ ನಾಯ್ಡು, ಯಶವಂತಪುರ ಎಸಿಪಿ ಶ್ರೀನಿವಾಸರೆಡ್ಡಿ ವಿರುದ್ಧ ದೂರು ನೀಡಿದ್ದೇವೆ. ಇಬ್ಬರೂ ನಮ್ಮ ಕಾರ್ಯಕರ್ತರನ್ನು ಬೆದರಿಸುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಹೇಳಿದಂತೆ ನಡೆದುಕೊಳ್ತಿದ್ದಾರೆ. ಹೀಗಾಗಿ, ಬಿಜೆಪಿ ಸರ್ಕಾರ ಇರುವ ತನಕ ಪಾರದರ್ಶಕ ಚುನಾವಣೆ ಅಸಾಧ್ಯ. ಕೂಡಲೇ ಇಬ್ಬರನ್ನ ವರ್ಗಾವಣೆ ಮಾಡಬೇಕು. ಈ ಬಗ್ಗೆ ಆಯೋಗ ಕೂಡ ಭರವಸೆ ನೀಡಿದೆ ಎಂದು ತಿಳಿಸಿದರು.
ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಮಾತನಾಡಿ, ಕ್ಷೇತ್ರದ 50 ಸಾವಿರ ಕುಟುಂಬಕ್ಕೆ ಸೆಟ್ ಆಫ್ ಬಾಕ್ಸ್ ನೀಡಿದ್ದಾರೆ. ಇವರಿಗೆಲ್ಲ ಉಚಿತ ಕೇಬಲ್ ಸಂಪರ್ಕ ನೀಡಿದ್ದಾರೆ. ಒಂದೊಂದು ಸೆಟ್ ಆಫ್ ಬಾಕ್ಸ್ ಬೆಲೆ 1000, 1200 ರೂ ಆಗಿದೆ. ಇದರ ಒಟ್ಟು ಮೌಲ್ಯ 5 ಕೋಟಿ ಯಾಗಲಿದೆ. ಇದು ಮತದಾರರಿಗೆ ಆಮಿಷ ಒಡ್ಡಿದಂತೆ. ಪಾರದರ್ಶಕ ಚುನಾವಣೆಗೆ ವಿರೋಧವಾಗಿದೆ. ಬಾಕ್ಸ್ ಕೊಟ್ಟಿರುವ ಬಗ್ಗೆ ಅವರೇ ಒಪ್ಪಿಕೊಂಡಿದ್ದಾರೆ. ರಾಕ್ಲೈನ್ ಹೆಸರಿನ ಕಂಪನಿ ಇದನ್ನ ನೀಡಿದೆ. ಮುನಿರತ್ನ ಕೂಡ ಕಂಪನಿ ನಿರ್ದೇಶಕರಾಗಿದ್ದಾರೆ. ಇದು ಸಂಪೂರ್ಣ ಕಾನೂನಿನ ಉಲ್ಲಂಘನೆ ಎಂದು ಆರೋಪಿಸಿದರು.
ಕೂಡಲೇ ಕೇಬಲ್ ಅನ್ನು ಚುನಾವಣಾ ಆಯೋಗ ಸೀಜ್ ಮಾಡಿಸಬೇಕು. ಖರ್ಚು ಮಾಡಿರುವ ಮೌಲ್ಯದ ಬಗ್ಗೆ ಕ್ರಮ ಜರುಗಿಸಬೇಕು. ಇದರ ಬಗ್ಗೆ ಆಯೋಗ ಗಮನಹರಿಸಲಿದೆ. ಇಬ್ಬರು ಎಸಿಪಿಗಳನ್ನ ವರ್ಗಾವಣೆ ಮಾಡಬೇಕು. ಇವರನ್ನು ನಾಲ್ಕು ತಿಂಗಳ ಮುಂಚೆ ಮುನಿರತ್ನ ಈ ಠಾಣೆಗಳಿಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಚುನಾವಣೆ ದೃಷ್ಟಿಯಿಂದಲೇ ಹಾಕಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.