ಬೆಂಗಳೂರು : ರಾಜ್ಯ ನಾಯಕರ ಆಶಯಕ್ಕೆ ತಕ್ಕಂತೆ ಸರ್ಕಾರ ನಡೆಯುತ್ತಿಲ್ಲ. ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸಲಾಗುತ್ತಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆಡಳಿತಾರೂಢ ಸರ್ಕಾರದ ವಿರುದ್ಧ ಗುಡುಗಿದ್ದಾರೆ.
ವಿಧಾನಸೌಧದ ಕೊಠಡಿಯಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಬಜೆಟ್ ಲೇಖಾನುದಾನ ಪಡೆಯುವುದೇ ಅತ್ಯಂತ ಮುಖ್ಯವಾಗಿದೆ. ರಾಜ್ಯ ನಾಯಕರ ಆಶಯಕ್ಕೆ ತಕ್ಕಂತೆ ಸರ್ಕಾರ ನಡೆಯುತ್ತಿಲ್ಲ, ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸಲಾಗುತ್ತಿದೆ. ಕೇಂದ್ರದ ಸರ್ವಾಧಿಕಾರಿ ಧೋರಣೆ ಹಾಗೂ ಫ್ಯಾಸಿಸ್ಟ್ ಮನೋಭಾವ ರಾಜ್ಯದಲ್ಲಿಯೂ ಗೋಚರಿಸುತ್ತಿದೆ. ಇಂತಹ ಸರ್ಕಾರದಿಂದ ಉತ್ತಮ ಆಡಳಿತ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ರಾಜ್ಯ ಕಾಂಗ್ರೆಸ್ ಇಂತಹ ಸರ್ಕಾರದ ವಿರುದ್ಧ ಸಮರ್ಥ ಹೋರಾಟ ನಡೆಸಬೇಕಾಗಿದೆ ಎಂದು ಶಾಸಕರಿಗೆ ಕರೆಕೊಟ್ಟರು.
ಸ್ಪೀಕರ್ ಸರ್ಕಾರದ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ. ನಾವು ಬಿಎಸಿ ಸಭೆಯಲ್ಲಿ ಹೇಳಿದ್ದೇವೆ ಕನಿಷ್ಠ 10 ದಿನ ಅಧಿವೇಶನ ನಡೆಸಿ ಎಂದು. ಅವರಿಗೆ ಅಧಿವೇಶನ ನಡೆಸಲು ಇಷ್ಟ ಇಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ತರಹದ ಧೋರಣೆ ಇರಬಾರದು. ನಾವುಗಳು ಜನರ ಪ್ರತಿನಿಧಿಗಳಾಗಿ ಇಲ್ಲಿಗೆ ಬರುತ್ತೇವೆ. ಈ ಸರ್ಕಾರ ಸರ್ವಾಧಿಕಾರಿ ಆಡಳಿತ ಮಾತ್ರವಲ್ಲದೇ ಆರ್ಫ್ಯಾಸಿಸ್ಟ್, ಅಂಟಿ ಡೆಮೊಕ್ರಟಿಕ್ ಪಾರ್ಟಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರವಾಹ ಪರಿಹಾರ ಕೆಲಸವನ್ನು ಸರಿಯಾಗಿ ಮಾಡಿಲ್ಲ. ಇವರು ಕೇಂದ್ರದಲ್ಲಿ 35,161 ಕೋಟಿ ಕೇಳಿದ್ದಾರೆ. ನೆರೆ ವಿಚಾರವನ್ನು ಇವತ್ತು ಪ್ರಮುಖವಾಗಿ ಚರ್ಚೆ ಮಾಡಬೇಕು. ನಿನ್ನೆ ಸದನದಲ್ಲಿ ಜೆಡಿಎಸ್ನ ಕೆಲವು ಶಾಸಕರು ನಮ್ಮ ಧ್ವನಿಗೆ ಧ್ವನಿ ಗೂಡಿಸಿದ್ದಾರೆ. 10 ದಿನಗಳು ಅಧಿವೇಶನ ನಡೆಸಿ ಎಂದು ಪಟ್ಟು ಹಿಡಿಯೋಣ. ಮೊದಲು ನಾನು ಇವತ್ತು ಪ್ರಾರಂಭ ಮಾಡುತ್ತೇನೆ. ಆ ನಂತರ ಕೆಲವರು ನೆರೆ ಬಗ್ಗೆ ಮಾತನಾಡಿ ಎಂದು ಸೂಚನೆ ನೀಡಿದರು.
ಸರ್ಕಾರದ ವಿರುದ್ಧ ಹೋರಾಟ: ಶಾಸಕಾಂಗ ಪಕ್ಷದ ಸಭೆಯಲ್ಲಿ ಬಹುತೇಕ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಕುರಿತ ಚರ್ಚೆ ನಡೆಯುತ್ತಿದ್ದು, ಸೀಮಿತ ಕಾಲಾವಧಿಯಲ್ಲಿ ಸರ್ಕಾರವನ್ನು ಕಟ್ಟಿ ಹಾಕುವ ನಿಟ್ಟಿನಲ್ಲಿ ಯಾವ್ಯಾವ ವಿಧದ ಕ್ರಮ ಕೈಗೊಳ್ಳಬಹುದು ಎಂಬ ಕುರಿತು ಚರ್ಚೆ ನಡೆಯುತ್ತಿದೆ. ಅನುದಾನದಲ್ಲಿ ತಾರತಮ್ಯ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚಿಸಲು ನಿರ್ಧರಿಸಲಾಗಿದೆ.
ಸಭೆ ಮುಕ್ತಾಯದ ನಂತರ ಮಾತನಾಡಿದ ಸಿದ್ದರಾಮಯ್ಯ ಸದನದಲ್ಲಿ ಪಾಲ್ಗೊಳ್ಳುತ್ತೇವೆ. ಇಂದು ಕೂಡ ನಾನು ಭಾಷಣ ಮುಂದುವರಿಸುತ್ತೇನೆ ಎಂದಷ್ಟೇ ಹೇಳಿ ತೆರಳಿದರು.