ಬೆಂಗಳೂರು: ವಿಧಾನಸೌಧದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆ ನಡೆಯಿತು.
ಇಂದಿನ ಉಭಯ ಸದನದಲ್ಲಿ ಕಾಂಗ್ರೆಸ್ ನಡೆ, ಹೋರಾಟ ಹಾಗೂ ಧರಣಿ ಮುಂದುವರೆಸುವ ಕುರಿತಾಗಿ ಚರ್ಚೆ ನಡೆಯಿತು. ಸಂವಿಧಾನದ ಮೇಲಿನ ಚರ್ಚೆಯ ವೇಳೆ ಭಾಗವಹಿಸುವಿಕೆ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು. ಮಾಜಿ ಸಚಿವರಾದ ಎಂ.ಬಿ. ಪಾಟೀಲ್, ರಮೇಶ್ಕುಮಾರ್, ಶಾಸಕರಾದ ಐವಾನ್ ಡಿಸೋಜಾ, ಹ್ಯಾರಿಸ್, ಜಿ. ಪರಮೇಶ್ವರ್, ರಘುಮೂರ್ತಿ, ವಿ. ಮುನಿಯಪ್ಪ, ಗಣೇಶ, ಕುಸುಮಾ ಶಿವಳ್ಳಿ, ಆನಂದ ನ್ಯಾಮಗೌಡ, ಯತೀಂದ್ರ ಸೇರಿದಂತೆ ಶಾಸಕರು, ಪರಿಷತ್ ಸದಸ್ಯರು ಭಾಗಿಯಾಗಿದ್ದರು.
ಕಲಾಪ ಆರಂಭವಾಗುತ್ತಿದ್ದಂತೆ ಧರಣಿ ಮುಂದುವರೆಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ಧರಣಿ ಬಳಿಕ ಸ್ಪೀಕರ್ ಕರೆದರೆ ಚರ್ಚೆಗೆ ಅವಕಾಶ ನೀಡುವ ಭರವಸೆ ಕೊಟ್ಟರೆ ಸಂವಿಧಾನದ ಮೇಲಿನ ಚರ್ಚೆಯಲ್ಲಿ ಪಾಲ್ಗೊಳ್ಳಲು ಶಾಸಕಾಂಗ ಸಭೆಯಲ್ಲಿ ತೀರ್ಮಾನ ಕೈಗೊಂಡರು. ಸದನದಲ್ಲಿ ಹೋರಾಟ ಮಾಡಲು ಕೈ ನಾಯಕರು ಮತ್ತಷ್ಟು ದಾಖಲೆಗಳನ್ನು ಸಂಗ್ರಹಿಸಿದ್ದು, ಯತ್ನಾಳ್ ವಿರುದ್ಧ ಇರುವ 23 ಕ್ರಿಮಿನಲ್ ಕೇಸ್ಗಳ ಪಟ್ಟಿ ಸಂಗ್ರಹಿಸಲಾಗಿದ್ದು, 23 ಪ್ರಕರಣಗಳ ಸಂಪೂರ್ಣ ಮಾಹಿತಿ ತರಿಸಿಕೊಂಡ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇದನ್ನು ಸದನದಲ್ಲಿ ಚರ್ಚಿಸಿದರು.
ಶಾಸಕಾಂಗ ಸಭೆಯಲ್ಲಿ ಎಲ್ಲಾ ಕೈ ಶಾಸಕರಿಗೆ ಯತ್ನಾಳ್ ವಿರುದ್ಧದ ಪ್ರಕರಣಗಳ ಪಟ್ಟಿ ಸಿದ್ಧಪಡಿಸಿಕೊಳ್ಳಲಾಯಿತು. ಇದನ್ನೇ ಆಧರಿಸಿ ಸದನದ ಒಳಗೆ ಗದ್ದಲ ಎಬ್ಬಿಸಲು ನಿರ್ಧರಿಸಲಾಯಿತು ಎಂದು ತಿಳಿದುಬಂದಿದೆ. ಯತ್ನಾಳ್ ವಿರುದ್ಧದ ಚರ್ಚೆಗೆ ಅವಕಾಶ ನೀಡುವಂತೆ ಸ್ಪೀಕರ್ಗೆ ನಿಯಮ 363 ಅಡಿಯಲ್ಲಿ ನೋಟಿಸ್ ನೀಡಲು ತೀರ್ಮಾನಿಸಲಾಯಿತು.
ಶಾಸಕಾಂಗ ಸಭೆಯಲ್ಲಿ ಮಾಜಿ ಡಿಸಿಎಂ ಜಿ. ಪರಮೇಶ್ವರ್ ಅವರು ಗರಂ ಆದರು. ಧರಣಿ ಸಾಕು, ಸುಮ್ಮನೆ ಯತ್ನಾಳ್ಗೆ ನಾವೆಲ್ಲಾ ಹೀರೋ ಮಾಡ್ತಿದ್ದೀವಿ. ಯತ್ನಾಳ್ ಹೇಳಿಕೆ ಬಗ್ಗೆ ಸದನದಲ್ಲಿ ಚರ್ಚೆಗೆ ಬ್ರೇಕ್ ಹಾಕಿ. ಚರ್ಚೆ ಮಾಡಲು ಸಾಕಷ್ಟು ವಿಷಯಗಳಿವೆ. ಹಾಗಾಗಿ ಇದಕ್ಕೆ ಫುಲ್ ಸ್ಟಾಫ್ ಹಾಕಿ. ಸುಖಾಸುಮ್ಮನೆ ಒಂದೇ ವಿಚಾರಕ್ಕೆ ಅಂಟಿಕೊಂಡು ಕಲಾಪದ ಸಮಯ ಹಾಳು ಮಾಡೋದು ಬೇಡ. ಸಂವಿಧಾನದ ಬಗ್ಗೆ ಚರ್ಚೆಯಲ್ಲಿ ಪಾಲ್ಗೊಳ್ಳೋಣ ಎಂದು ಶಾಸಕಾಂಗ ಸಭೆಯಲ್ಲಿ ಗರಂ ಆದರು.
ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಮಾಧ್ಯಮಗಳ ಮೇಲೆ ಬೇಸರ ವ್ಯಕ್ತಪಡಿಸಿದ ಸಿದ್ದರಾಮಯ್ಯ, ನಮ್ಮನ್ನು ನೀವ್ಯಾರೂ ತೋರಿಸುತ್ತಿಲ್ಲ. ಮತ್ತೇಕೆ ಶೂಟ್ ಮಾಡುತ್ತಿದ್ದೀರಾ ಎಂದು ಅಸಮಧಾನ ವ್ಯಕ್ತಪಡಿಸಿದರು. ಸದನದಲ್ಲಿ ನಿಮ್ಮ ಕ್ಯಾಮರಾ ಬಿಟ್ಟಿಲ್ಲ. ಅಲ್ಲೂ ನಮ್ಮನ್ನೂ ತೋರಿಸಲ್ಲ. ಸದನದಲ್ಲಿ ನಿಮ್ಮನ್ನು ಬಿಡಬೇಕು. ಸಿಎಲ್ಪಿ ಮೀಟಿಂಗ್ ಸಭೆ ಬಗ್ಗೆಯೂ ನೀವು ತೋರಿಸಲ್ಲವೆಂದು ಕೈ ಶಾಸಕರು ಕೂಡ ಅಸಮಾಧಾನ ವ್ಯಕ್ತಪಡಿಸಿದರು.