ಬೆಂಗಳೂರು : ಪರಿಷತ್ ಟಿಕೇಟ್ ಆಕಾಂಕ್ಷಿಗಳು ಇಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ನಿವಾಸಕ್ಕೆ ಗುಂಪು ಗುಂಪಾಗಿ ಆಗಮಿಸಿದ್ದರು.
ಸಿದ್ದರಾಮಯ್ಯನವರ ಬೆಂಗಳೂರಿನ ಸರ್ಕಾರಿ ನಿವಾಸಕ್ಕೆ ಆಗಮಿಸಿದ್ದ ಮೇಲ್ಮನೆ ಚುನಾವಣೆ ಟಿಕೆಟ್ ಆಕಾಂಕ್ಷಿಗಳು ಸಾಕಷ್ಟು ಸಮಾಲೋಚನೆ ನಡೆಸಿ ತೆರಳಿದ್ದಾರೆ. ಮಾಜಿ ಸಚಿವ ಎಂ ಆರ್ ಸೀತಾರಾಂ ಭೇಟಿ ನೀಡಿ ಸಿದ್ದರಾಮಯ್ಯನವರ ಜೊತೆ ಕೆಲಕಾಲ ಆಪ್ತ ಸಮಾಲೋಚನೆ ನಡೆಸಿದರು. ವಿಧಾನ ಪರಿಷತ್ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿರುವ ಅವರು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಲ್ಲೇಶ್ವರಂ ವಿಧಾನಸಭೆ ಕ್ಷೇತ್ರದಿಂದ ಟಿಕೆಟ್ ಸಿಕ್ಕರೂ ಕಡೆಯ ಕ್ಷಣದಲ್ಲಿ ಕಣದಿಂದ ಹಿಂದೆ ಸರಿದಿದ್ದರು.
ಇದೇ ತಿಂಗಳ ಕೊನೆಯಲ್ಲಿ ವಿಧಾನ ಪರಿಷತ್ ಸದಸ್ಯತ್ವದ ಅವಧಿ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ಸದಸ್ಯ ಅಬ್ದುಲ್ ಜಬ್ಬಾರ್ ಕೂಡ ಭೇಟಿ ನೀಡಿ, ಮರು ಆಯ್ಕೆಗೆ ಒತ್ತಡ ಹೇರಿದ್ದಾರೆ. ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಕೂಡ ಪರಿಷತ್ತು ಟಿಕೇಟ್ ಆಕಾಂಕ್ಷಿಯಾಗಿ ಸಿದ್ದರಾಮಯ್ಯ ನಿವಾಸಕ್ಕೆ ಆಗಮಿಸಿದ್ದರು. ಕೇಶವಮೂರ್ತಿ ಅವರಿಗೆ ಮಾಜಿ ಸಚಿವ ಡಾ. ಹೆಚ್ ಸಿ ಮಹದೇವಪ್ಪ ಬೆಂಬಲವಾಗಿ ನಿಂತಿದ್ದಾರೆ.
ಸಿದ್ದರಾಮಯ್ಯ ಭೇಟಿ ನಂತರ ಮಾತನಾಡಿದ ಮಾಜಿ ಸಚಿವ ಎಂ ಆರ್ ಸೀತಾರಾಮ್, ನಾನು ಪಕ್ಷಕ್ಕಾಗಿ ಹಲವು ವರ್ಷಗಳಿಂದ ದುಡಿದಿದ್ದೇನೆ. ಹಿಂದುಳಿದ ವರ್ಗಗಳ ಕೋಟಾದಲ್ಲಿ ನನಗೆ ಟಿಕೇಟ್ ಸಿಗುವ ವಿಶ್ವಾಸವಿದೆ. ಕಳೆದ ಬಾರಿ ನನಗೆ ಟಿಕೇಟ್ ಸಿಗಬೇಕಿತ್ತು. ಆದರೆ, ಸಿಕ್ಕಿರಲಿಲ್ಲ ಇದರಿಂದಾಗಿ ಈ ಬಾರಿ ಟಿಕೆಟ್ಗೆ ಸಿದ್ದರಾಮಯ್ಯ ಜೊತೆ ಚರ್ಚೆ ಮಾಡಿದ್ದೇನೆ. ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರಿಗೆ ಟಿಕೇಟ್ ನೀಡುವ ಭರವಸೆ ನೀಡಿದ್ದಾರೆ. ಹೈಕಮಾಂಡ್ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಕಾದು ನೋಡಬೇಕು ಎಂದರು.
ಎಂಎಲ್ಸಿ ಅಬ್ದುಲ್ ಜಬ್ಬಾರ್ ಮಾತನಾಡಿ, ಈಗ ನಮಗೆ ಅವಕಾಶ ಕೊಟ್ಟಿದ್ದಾರೆ. ಮತ್ತೊಂದು ಅವಧಿಗೆ ಅವಕಾಶಕ್ಕೆ ಕೋರಿದ್ದೇನೆ. ಈ ಬಗ್ಗೆ ನಮ್ಮ ನಾಯಕರ ಬಳಿ ಮನವಿ ಮಾಡಿದ್ದೇವೆ. ಅಲ್ಪಸಂಖ್ಯಾತರಲ್ಲಿ ಹೆಚ್ಚು ಜನ ನಿವೃತ್ತಿಯಾಗುತ್ತಿದ್ದೇವೆ. ಹೀಗಾಗಿ ಅಲ್ಪಸಂಖ್ಯಾತ ಕೋಟಾದಲ್ಲಿ ಕೇಳುತ್ತಿದ್ದೇವೆ. ಯಾರಿಗೆ ಕೊಡುತ್ತಾರೋ ನಮ್ಮ ಹೈಕಮಾಂಡ್ ನಿರ್ಧಾರ ಮಾಡಲಿದೆ ಎಂದಿದ್ದಾರೆ.
ರಹಸ್ಯ ಸ್ಥಳಕ್ಕೆ ತೆರಳಿದ ಸಿದ್ದರಾಮಯ್ಯ : ಸಾಕಷ್ಟು ನಾಯಕರು ಮನೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕೆಲ ನಾಯಕರ ಜೊತೆ ಸಿದ್ದರಾಮಯ್ಯ ಅಜ್ಞಾತ ಸ್ಥಳಕ್ಕೆ ಹೋಗಿದ್ದಾರೆ. ಸಿದ್ದರಾಮಯ್ಯ ತಾವು ಯಾವಾಗಲೂ ಬಳಸುತ್ತಿದ್ದ ಕಾರು ಬಿಟ್ಟು ಬೇರೆ ಕಾರಲ್ಲಿ, ಭದ್ರತಾ ಸಿಬ್ಬಂದಿ ಹಾಗೂ ಬೆಂಗಾವಲು ವಾಹನವನ್ನು ಬಿಟ್ಟು ಮಾಜಿ ಸಚಿವ ಚೆಲುವರಾಯಸ್ವಾಮಿ ಜೊತೆ ತೆರಳಿದರು. ಇವರೊಂದಿಗೆ ಮಾಜಿ ಸಚಿವ ಡಾ. ಹೆಚ್ ಸಿ ಮಹಾದೇವಪ್ಪ ಕೂಡ ತೆರಳಿದ್ದಾರೆ.