ಬೆಂಗಳೂರು: ಕಾವಲ್ ಭೈರಸಂದ್ರ ಗಲಭೆ ಪ್ರಕರಣದ ಸೂಕ್ತ ತನಿಖೆ ಆಗಲಿ ಎಂದು ಕಾಂಗ್ರೆಸ್ ನಾಯಕರು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಇಂದು ನಡೆದ ಕಾಂಗ್ರೆಸ್ ಸತ್ಯಶೋಧನ ಸಮಿತಿ ಸಭೆಯ ನಂತರ ಮಾತನಾಡಿದ ನಾಯಕರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದು, ಆದಷ್ಟು ಬೇಗ ರಾಜ್ಯಸರ್ಕಾರ ಆರೋಪಿಗಳನ್ನು ಬಂಧಿಸುವ ಮೂಲಕ ನಮ್ಮ ಪಕ್ಷದ ಶಾಸಕರಿಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ಒದಗಿಸಿಕೊಡಲಿ ಎಂದು ಹೇಳಿದ್ದಾರೆ.
ಮಾಜಿ ಗೃಹ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ಯಾರು ಏನೇ ಆರೋಪ ಮಾಡಲಿ, ಪೊಲೀಸರು ತನಿಖೆ ಮಾಡುತ್ತಿದ್ದಾರೆ, ಮಾಡಲು ಬಿಡಿ, ಎಲ್ಲವೂ ಹೊರಬರಲಿದೆ. ಅಲ್ಲಿಯವರೆಗೆ ಮಾತನಾಡುವುದು ಸರಿಯಲ್ಲ. ಸಲೀಂ ಪಾಷ ಕಾರ್ಪೋರೇಟರ್ ಗಂಡ. ನನ್ನ ಜೊತೆ ಅವರು ಓಡಾಡುತ್ತಾರೆ. ಹಾಗಂತ ಅವರ ಜೊತೆ ಸೇರೋಕೆ ಆಗುತ್ತಾ? ಪೊಲೀಸ್ ಕರೆದರೆ ನಾನು ವಿಚಾರಣೆಗೆ ಹೋಗುತ್ತೇನೆ ಎಂದಿದ್ದಾರೆ.
ಮಾಜಿ ಗೃಹ ಸಚಿವ ರಾಮಲಿಂಗಾ ರೆಡ್ಡಿ ಮಾತನಾಡಿ, ಕೆಪಿಸಿಸಿ ಅಧ್ಯಕ್ಷರು ಸತ್ಯಶೋಧನಾ ಸಮಿತಿ ರಚಿಸಿ, ಆರು ಜನರ ತಂಡ ಮಾಡಿದ್ದಾರೆ. ಘಟನೆಯ ಹಿಂದಿನ ವಿಚಾರವನ್ನು ಅರಿಯಬೇಕಿದೆ. ಪೊಲೀಸರು ಕ್ರಮ ತೆಗೆದುಕೊಳ್ಳಬೇಕು. ಸ್ವತಃ ಪೊಲೀಸ್ ಸ್ಟೇಷನ್ ರಕ್ಷಿಸಿಕೊಳ್ಳಲು ಅವರಿಗೆ ಆಗಿಲ್ಲ. ನಾವು ಈ ಪ್ರಕರಣದ ಸಮಗ್ರ ತನಿಖೆಗೆ ಆಗ್ರಹಿಸುತ್ತಿದ್ದೇವೆ. ನಮ್ಮ ತಂಡ ಕೂಡ ಇದಕ್ಕೆ ಪೂರಕವಾಗುವ ರೀತಿಯಲ್ಲಿ ತನಿಖೆ ಮಾಡಲಿದೆ.
ಎಸ್ಡಿಪಿಐ ಬೆಂಬಲ ನೀಡುವುದರಿಂದ ನಮಗೆ ಹಾನಿಯಾಗಲಿದೆ. ಇವರು ನಮ್ಮ ಮತಬ್ಯಾಂಕ್ ಅನ್ನೇ ಆಧರಿಸಿದ್ದಾರೆ. ಇವರಿಂದ ಬಿಜೆಪಿಗೆ ಯಾವುದೇ ನಷ್ಟವಿಲ್ಲ. ಮತಗಳು ಹಂಚಿ ಹೋಗೋದು ನಮ್ಮವೇ ತಾನೇ. ಅದಕ್ಕೆ ಅವರು ಎಸ್ಡಿಪಿಐ ಬ್ಯಾನ್ ಮಾಡುತ್ತಿಲ್ಲ. ಕೇಂದ್ರ, ರಾಜ್ಯದಲ್ಲಿ ಇವರದೇ ಸರ್ಕಾರವಿದೆ. ಯಾಕೆ ಅವರು ಎಸ್ಡಿಪಿಐ ಬ್ಯಾನ್ ಮಾಡುತ್ತಿಲ್ಲವೆಂದು ಸರ್ಕಾರವೇ ಉತ್ತರ ಕೊಡಬೇಕು ಎಂದರು. ಆರ್ಎಸ್ಎಸ್, ಸಂಘ ಪರಿವಾರ, ಎಸ್ಡಿಪಿಐ ಎಲ್ಲವೂ ಒಂದೇ ನಾಣ್ಯದ ಮುಖಗಳಿದ್ದಂತೆ. ಹೆಡ್, ಟೈಲ್ ಎರಡೂ ಅವರೇ. ದಕ್ಷಿಣಕನ್ನಡದಲ್ಲಿ ಏನು ಮಾಡಿದರೂ, ಇಲ್ಲಿ ಏನ್ಮಾಡಿದ್ರು ಗೊತ್ತಿದೆ. ನಾನು ಗೃಹ ಸಚಿವನಾಗಿದ್ದಾಗ ಎಲ್ಲವೂ ಗೊತ್ತಿದೆ. ಮೊದಲು ಎಸ್ಡಿಪಿಐ ಬ್ಯಾನ್ ಮಾಡಲಿ ಎಂದು ಆಗ್ರಹಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಮಾತನಾಡಿ, ಕಾಂಗ್ರೆಸ್, ಬಿಜೆಪಿ ಪ್ರಶ್ನೆಯಲ್ಲ. ಇದರ ಹಿಂದಿರುವವರ ಬಗ್ಗೆ ತನಿಖೆಯಾಗಬೇಕು. ನಮ್ಮ ಪಕ್ಷ ಯಾರ ಬೆಂಬಲಕ್ಕೂ ನಿಲ್ಲಲ್ಲ. ಪೊಲೀಸರು ಸಂಪೂರ್ಣ ತನಿಖೆ ಮಾಡಲಿ. ಆ ನಂತರ ಸತ್ಯ ಹೊರಬರುತ್ತೆ. ಈಗ ಹೇಳೋಕೆ ಆಗಲ್ಲ, ತನಿಖೆ ನಡೆಯಲಿ. ಎಸ್ಡಿಪಿಐ ಸಂಘಟನೆ ತಪ್ಪಿದೆ ಅನ್ನೋದು ತನಿಖೆಯಿಂದ ಗೊತ್ತಾದರೆ ಬ್ಯಾನ್ ಮಾಡಲಿ. ನಾವು ಯಾರನ್ನೂ ಬೆಂಬಲಿಸುವುದಿಲ್ಲ. ದೇಶದ ಪರವಾಗಿ ಯಾರು ಇರ್ತಾರೋ ಅವರನ್ನ ಬೆಂಬಲಿಸುತ್ತೇವೆ. ಸಂಘಟನೆಗಳು ಬಹಳಷ್ಟಿವೆ. ಕಾನೂನು ವಿರುದ್ಧ ಚಟುವಟಿಕೆ ಮಾಡಿದರೆ ಕ್ರಮ ತೆಗೆದುಕೊಳ್ಳಲಿ ಎಂದು ಒತ್ತಾಯಿಸಿದರು.