ಬೆಂಗಳೂರು : ಉದಯಪುರ ಕನ್ಹಯ್ಯಲಾಲ್ ಹತ್ಯೆ ವಿಚಾರವಾಗಿ ರಾಜ್ಯ ಕಾಂಗ್ರೆಸ್ ನಾಯಕರು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಮಾಜಿ ಸಚಿವ ಡಾ ಹೆಚ್ ಸಿ ಮಹದೇವಪ್ಪ ಟ್ವೀಟ್ ಮೂಲಕ ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ. ಈ ವಿಚಾರವನ್ನು ಬಿಜೆಪಿ ರಾಜಕೀಯ ವಿಷಯವಾಗಿ ಬಳಸಿಕೊಳ್ಳುತಿದೆ ಎಂದು ಸಹ ಅವರು ಆರೋಪಿಸಿದ್ದಾರೆ.
ದಿನೇಶ್ ಗುಂಡೂರಾವ್ ತಮ್ಮ ಟ್ವೀಟ್‌ನಲ್ಲಿ, ಕನ್ಹಯ್ಯ ಹತ್ಯೆಯನ್ನ ಬಿಜೆಪಿ ರಾಜಕೀಯಗೊಳಿಸ್ತಿದೆ. ರಾಜಸ್ತಾನದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ಹಾಗಾಗಿ, ಕಾಂಗ್ರೆಸ್ ಪಕ್ಷದ ಮೇಲೆ ಬಿಜೆಪಿ ಗೂಬೆ ಕೂರಿಸ್ತಿದೆ. ಇತ್ತೀಚೆಗೆ ಶಿವಮೊಗ್ಗದಲ್ಲಿ ಹರ್ಷನ ಹತ್ಯೆಯಾಯ್ತು. ಆಗ ರಾಜ್ಯದಲ್ಲಿದ್ದದ್ದು ಇದೇ ಬಿಜೆಪಿ ಸರ್ಕಾರವಲ್ಲವೇ? ಹರ್ಷನ ಕೊಲೆಗೆ ಹೊಣೆಗಾರಿಕೆ ಬಿಜೆಪಿ ಹೊರಬೇಕಲ್ಲವೇ? ಧರ್ಮದ ಅಫೀಮು ತಿಂದಿರುವ ಕೋಮು ಕ್ರಿಮಿಗಳಿಗೆ ಯಾವ ಸರ್ಕಾರ ಇದ್ರೂ ಅಂಜಿಕೆಯಿಲ್ಲ.
ಅಂತಹ ಕ್ರಿಮಿಗಳ ಹುಟ್ಟಡಗಿಸಬೇಕು. ಹುಟ್ಟಡಗಿಸಲು ಯಾರ ತಕರಾರಿಲ್ಲ. ಆದರೆ, ಬಿಜೆಪಿ ಹೆಣದಲ್ಲೂ ರಾಜಕೀಯ ಮಾಡೋದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಇನ್ನೂ ಉದಯಪುರ ಕೊಲೆ ಪ್ರಕರಣ ಟ್ವೀಟ್ ಮಾಡಿರುವ ಮಾಜಿ ಸಚಿವ ಹೆಚ್ ಸಿ. ಮಹದೇವಪ್ಪ, ಘಟನೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಇಂತಹ ಘಟನೆ ಆಘಾತಕಾರಿ.
ಧರ್ಮಾಂಧರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ. ಯಾವುದೇ ಧರ್ಮ ಆಗಲಿ ಧರ್ಮಾಂದರು ಅಪಾಯಕಾರಿ. ಸಂವಿಧಾನ ಇದನ್ನು ಒಪ್ಪಲ್ಲ. ನಾವು ಬಯಸೋದು ಸಹಬಾಳ್ವೆ, ಶಾಂತಿ, ನೆಮ್ಮದಿ. ಅವರಿಗೆ ಶಿಕ್ಷೆ ನೀಡಲೇಬೇಕು. ಇದು ಅಪಾಯಕಾರಿ ಬೆಳವಣಿಗೆ ಎಂದರು.
ಇದನ್ನೂ ಓದಿ: ನಾಳೆ 'ಮಹಾ' ರಾಜಕೀಯ ಪರೀಕ್ಷೆ: 'ನಮಗೆ 50 ಶಾಸಕರ ಬಲ, ಗೆಲುವು ನಮ್ಮದೇ': ಏಕನಾಥ್ ಶಿಂದೆ