ಬೆಂಗಳೂರು: ಉಪಚುನಾವಣೆ ಫಲಿತಾಂಶ ಬಂದ ಬಳಿಕ ಸೋನಿಯಾ ಗಾಂಧಿ ಭೇಟಿ ಮಾಡಲು ರಾಜ್ಯದ ಮೂಲ ಕಾಂಗ್ರೆಸಿಗರು ನಿರ್ಧರಿಸಿದ್ದಾರೆ ಎನ್ನಲಾಗ್ತಿದೆ.
ಉಪಚುನಾವಣಾ ಫಲಿತಾಂಶ ಪಕ್ಷಕ್ಕೆ ವ್ಯತಿರಿಕ್ತವಾಗಿ ಬಂದರೆ ಎಲ್ಲಾ ಮೂಲ ಕಾಂಗ್ರೆಸಿಗರು ಎಐಸಿಸಿ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ, ಮಾತನಾಡಲು ನಿರ್ಧರಿಸಿದ್ದಾರೆ ಎಂಬ ಮಾಹಿತಿ ಇದೆ. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ವಿರುದ್ಧ ದೂರುಗಳನ್ನು ನೀಡುವ ಸಾಧ್ಯತೆ ಇದೆ. ದೂರಿನಲ್ಲಿ ಮುಖ್ಯವಾಗಿ ಕೆ.ಸಿ. ವೇಣುಗೋಪಾಲ್ ಅವರು ಸಿದ್ದರಾಮಯ್ಯ ಅವರ ಮಾತನ್ನು ಬಿಟ್ಟರೆ ನಮ್ಮ ಹಿರಿಯ ನಾಯಕರ ಅಭಿಪ್ರಾಯವನ್ನು ಕೇಳುತ್ತಿಲ್ಲ ಎಂದು ದೂರಲು ನಿರ್ಧರಿಸಿದ್ದಾರೆ. ಜೊತೆಗೆ ನಮ್ಮ ಸಲಹೆ ಸೂಚನೆಗಳನ್ನು ಅವರು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪ ಸಹ ಆ ದೂರಿನಲ್ಲಿದೆ.
ಉಪಚುನಾವಣೆ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ನಮ್ಮನ್ನು ಒಂದು ಮಾತು ಸಭೆಗೆ ಕರೆದಿಲ್ಲ. ಜೊತೆಗೆ ಪಕ್ಷದ ಅಧ್ಯಕ್ಷ ಸ್ಥಾನವನ್ನು ಆದಷ್ಟು ಬೇಗ ಬದಲಾವಣೆ ಮಾಡಬೇಕು. ಪಕ್ಷದ ಪದಾಧಿಕಾರಿಗಳನ್ನು ಕೂಡ ಆದಷ್ಟು ಬೇಗ ನೇಮಿಸಬೇಕು. ಮೂಲ, ವಲಸಿಗ ಕಾಂಗ್ರೆಸಿಗರು ಎಂಬ ಮಾತುಗಳು ದಿನೇ ದಿನೇ ಪಕ್ಷದ ಒಳಗೆ ಹೆಚ್ಚಾಗುತ್ತಿವೆ. ಇದು ಮಾಧ್ಯಮಗಳಲ್ಲೂ ನಿರಂತರವಾಗಿ ಬಿತ್ತರವಾಗುತ್ತಿದೆ ಎಂಬ ಅಂಶವನ್ನು ಕೂಡ ಹೈಕಮಾಂಡ್ ಗಮನಕ್ಕೆ ತರಲಿದ್ದಾರೆ.
ಮೂಲ ಕಾಂಗ್ರೆಸಿಗರ ತಂಡದಲ್ಲಿ ಮಾಜಿ ಸಂಸದ ಕೆ.ಹೆಚ್. ಮುನಿಯಪ್ಪ, ಬಿ.ಕೆ ಹರಿಪ್ರಸಾದ್, ರೆಹಮಾನ್ ಖಾನ್, ಮಾಜಿ ಡಿಸಿಎಂ ಡಾ. ಜಿ ಪರಮೇಶ್ವರ್ ಸೇರಿದಂತೆ ಹಲವು ಹಿರಿಯ ನಾಯಕರು ಇದ್ದಾರೆ. ಹೈಕಮಾಂಡ್ಗೆ ಈ ರೀತಿಯಲ್ಲಿ ದೂರು ನೀಡಲು ಇವರೆಲ್ಲ ಮುಂದಾಗಿದ್ದಾರೆ ಎಂಬ ಮಾಹಿತಿ ಇದೆ. ನಾಳೆ ವಿಧಾನಸಭೆ ಉಪಚುನಾವಣೆಯ 15 ಕ್ಷೇತ್ರಗಳ ಫಲಿತಾಂಶ ಗಮನಿಸಿ ದಿಲ್ಲಿಗೆ ಯಾವಾಗ ತೆರಳುವುದು ಎಂಬ ಕುರಿತು ನಿರ್ಧಾರ ಕೈಗೊಳ್ಳಲು ಮೂಲ ಕಾಂಗ್ರೆಸ್ ನಾಯಕರು ಒಂದೆಡೆ ಸೇರಿ ಸಭೆ ನಡೆಸುವ ಸಾಧ್ಯತೆ ಇದೆ ಎಂದು. ಬೆಂಗಳೂರಿನ ಯಾವುದಾದರೂ ನಾಯಕರ ನಿವಾಸ ಇಲ್ಲವೇ ಹೋಟೆಲ್ನಲ್ಲಿ ಸಭೆ ನಡೆಸಲು ಯೋಚಿಸಲಾಗಿದೆ ಎಂದು ತಿಳಿದುಬಂದಿದೆ.