ಬೆಂಗಳೂರು: ನಗರದ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ಇಂದಿರಾ ಗಾಂಧಿ 35ನೇ ಪುಣ್ಯ ಸ್ಮರಣೆ ಹಾಗೂ ಸರ್ದಾರ್ ವಲ್ಲಭಭಾಯ್ ಪಟೇಲ್ ಜನ್ಮದಿನದ ಸಮಾರಂಭದಲ್ಲಿ ಅವರಿಗಿಂತ ಟಿಪ್ಪು ಸುಲ್ತಾನ್ ಹೆಚ್ಚು ಮಿಂಚಿದ್ದಾರೆ.
ಗಣ್ಯರ ಗುಣಗಾನವಾಗಬೇಕಿದ್ದ ಸಮಾರಂಭದಲ್ಲಿ ಟಿಪ್ಪು ಸುಲ್ತಾನ್ ವೈಭವಿಕರಿಸಿದ್ದು ವಿಶೇಷವಾಗಿತ್ತು. ಕಾರ್ಯಕ್ರಮದಲ್ಲಿ ಮಾತನಾಡಿದ ಗಣ್ಯರ ಪೈಕಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಂಸದ ಡಾ. ಎಂ. ವೀರಪ್ಪ ಮೊಯ್ಲಿ, ರಾಜ್ಯಸಭೆ ಸದಸ್ಯ ಬಿ.ಕೆ. ಹರಿಪ್ರಸಾದ್ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರುವ ಭರದಲ್ಲಿ ಟಿಪ್ಪು ವೈಭವೀಕರಣಕ್ಕೆ ಹೆಚ್ಚಿನ ಒತ್ತು ಕೊಟ್ಟರು. ಒಂದು ಸಂದರ್ಭದಲ್ಲಿ ಇದು ಇಂದಿರಾಗಾಂಧಿ, ಸರ್ದಾರ್ ಪಟೇಲ್ ನೆನಪು ಕಾರ್ಯಕ್ರಮವಾ ಅಥವಾ ಟಿಪ್ಪು ಜಯಂತಿಯಾ ಅನ್ನುವ ಅನುಮಾನ ಕೂಡ ಮೂಡಿತು.
ಸುಮ್ಮನೆ ಕೂರಲ್ಲ:
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಟಿಪ್ಪು ಸುಲ್ತಾನ್ ವಿಚಾರದಲ್ಲಿ ನಾವು ಸುಮ್ಮನೆ ಕೂರುವ ಕೆಲಸ ಮಾಡುವುದಿಲ್ಲ. ನಾವು ಸತ್ಯವನ್ನು ಹೇಳುವ ಕೆಲಸ ಮಾಡೇ ಮಾಡುತ್ತೇವೆ. ಸುಮ್ಮನೆ ಕೂರುವ ಪಕ್ಷ ನಮ್ಮದಾಗಬಾರದು. ಟಿಪ್ಪು ಸುಲ್ತಾನ್ ವಿಚಾರವನ್ನು ಪುಸ್ತಕದಿಂದ ತೆಗೆಯುತ್ತೇವೆ ಎಂದು ಯಡಿಯೂರಪ್ಪ ಅವರು ನಿನ್ನೆ ಹೇಳಿದ್ದಾರೆ. ಇದಕ್ಕಿಂತ ಮೂರ್ಖತನ ಬೇರೆ ಇಲ್ಲ ಎಂದರು.
ನಾಚಿಕೆಗೇಡಿನ ಸಂಗತಿ:
ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಸಂಸದ ವೀರಪ್ಪ ಮೊಯ್ಲಿ ಮಾತನಾಡಿ, ರಾಜ್ಯ ಸರ್ಕಾರದವರು ಟಿಪ್ಪು ಸುಲ್ತಾನ್ ಅವರ ಹೆಸರನ್ನು ಪಠ್ಯದಿಂದ ಅಳಿಸಲು ಹೋಗಿದ್ದಾರೆ. ಇಂತಹ ಮೂರ್ಖರನ್ನು ಏನಂತ ಹೇಳಬೇಕು. ಶಿಕ್ಷಣ ಸಚಿವರು ಇದಕ್ಕೆ ಕೈ ಜೋಡಿಸುತ್ತಿದ್ದಾರೆ. ಟಿಪ್ಪು ಸುಲ್ತಾನ್ ಹಲವಾರು ಯೋಜನೆಗಳನ್ನ ಕೊಟ್ಟಿದ್ದಾರೆ. ಸಿಲ್ಕ್ ತಂದರು, ಪಂಚವಾರ್ಷಿಕ ಯೋಜನೆಯನ್ನು ಪರಿಚಯಿಸಿದರು. ಟಿಪ್ಪು ಸುಲ್ತಾನ್ ಅವರ ಇತಿಹಾಸವನ್ನು ತಿರುಚಲು ಹೊರಟಿರುವುದು ನಾಚಿಕೆಗೇಡಿನ ಸಂಗತಿ ಎಂದರು.
ರಾಜ್ಯಸಭೆ ಸದಸ್ಯ ಬಿ.ಕೆ. ಹರಿಪ್ರಸಾದ್ ಮಾತನಾಡಿ, ಟಿಪ್ಪು ಸುಲ್ತಾನ್ ಬ್ರಿಟಿಷರ ವಿರುದ್ಧ ಹೋರಾಡಿದ್ದರು. ಅವರ ವಿಚಾರವನ್ನು ತೆಗೆದುಹಾಕಲು ಸರ್ಕಾರ ಮುಂದಾಗಿದೆ. ಸಾವರ್ಕರ್, ಬ್ರಿಟಿಷರ ಪರ ಇದ್ದರು. ಅಂತವರಿಗೆ ಭಾರತ ರತ್ನ ಕೊಡಲು ಕೇಂದ್ರ ಸರ್ಕಾರ ಹೊರಟಿದೆ. ಅವರಿಗೆ ಬೇಕಾದರೆ ಹಿಂದುತ್ವ ರತ್ನ, ಜನಸಂಘ ರತ್ನ ಪ್ರಶಸ್ತಿ ನೀಡಲಿ ತೊಂದರೆ ಇಲ್ಲ. ಭಾರತ ರತ್ನ ಕೊಡಬೇಕಾದರೆ ರಾಷ್ಟ್ರಕ್ಕಾಗಿ ತ್ಯಾಗ ಮಾಡಿದವರು, ಸ್ವಾತಂತ್ರಕ್ಕಾಗಿ ಹೋರಾಡಿದವರು, ಅಖಂಡತೆಗಾಗಿ ತ್ಯಾಗ ಮಾಡಿದವರಿಗೆ ನೀಡಲಿ. ಟಿಪ್ಪು ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ವ್ಯಕ್ತಿ. ಅವರನ್ನು ದೇಶದ್ರೋಹಿ ಎನ್ನುವುದು ಸರಿಯಲ್ಲ ಎಂದಿದ್ದಾರೆ.