ಬೆಂಗಳೂರು: ಅಖಿಲ ಭಾರತ ಕಾಂಗ್ರೆಸ್ ಕೊಟ್ಟಿರುವ ಸ್ಪೀಕ್ ಅಪ್ ಇಂಡಿಯಾ ಬೃಹತ್ ಆನ್ಲೈನ್ ಪ್ಯಾಕೇಜ್ ಯಶಸ್ವಿಗೊಳಿಸಲು ರಾಜ್ಯ ಕಾಂಗ್ರೆಸ್ ನಾಯಕರು ಪಣ ತೊಟ್ಟಿದ್ದಾರೆ.
ಇಂದು ಬೆಳಿಗ್ಗೆ 11ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಜನರ ದನಿಯಾಗಿ ಈ ಸ್ಪೀಕ್ ಅಪ್ ಇಂಡಿಯಾ ಕಾರ್ಯಕ್ರಮವನ್ನು ನಡೆಸಿಕೊಡಲು ನಿರ್ಧರಿಸಲಾಗಿದ್ದು, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ ಸೇರಿದಂತೆ ಬಹುತೇಕ ಎಲ್ಲಾ ಕಾಂಗ್ರೆಸ್ ನಾಯಕರು ಕ್ಯಾಂಪೇನ್ನಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಲು ತೀರ್ಮಾನಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದು ಬೆಳಗ್ಗೆ 11 ಗಂಟೆಗೆ ಸಾಮಾಜಿಕ ಜಾಲತಾಣಗಳಲ್ಲಿ ಕರೆ ನೀಡುವ ಮೂಲಕ ರೈತರು, ವಲಸೆ ಕಾರ್ಮಿಕರು, ಅಸಂಘಟಿತ ವೃತ್ತಿಪರರು, ಸಣ್ಣ ಉದ್ದಿಮೆಗಳು ಮತ್ತು ದಿನಗೂಲಿ ನೌಕರರ ಪರವಾದ ಹಕ್ಕೊತ್ತಾಯ ಭಾರತದ ಧ್ವನಿಯಾಗಿ ಸಾಮಾಜಿಕ ಜಾಲತಾಣ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ದೇಶದ ಜನರ ಧ್ವನಿಯನ್ನು ಗಟ್ಟಿಗೊಳಿಸಲು ಭಾರತದ ದೋಣಿಯಾಗಿ ಅಭಿಯಾನದಲ್ಲಿ ಪಾಲ್ಗೊಳ್ಳಿ ಎಂಬ ಸಂದೇಶದೊಂದಿಗೆ ರಾಜ್ಯ ಕಾಂಗ್ರೆಸ್ ನಾಯಕರು ಈ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ.
ಇಲ್ಲಿ ಅತ್ಯಂತ ಪ್ರಮುಖವಾಗಿ ಜನರ ಬೇಡಿಕೆಗಳಾದ ಎಲ್ಲಾ ವಲಸೆ ಕಾರ್ಮಿಕರಿಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಿ ಹಾಗೂ ನರೇಗಾ ಯೋಜನೆಯ ವಾರ್ಷಿಕ ಕೆಲಸದ ದಿನಗಳನ್ನು 200 ದಿನಗಳಿಗೆ ಹೆಚ್ಚಿಸಿ ಎನ್ನುವುದಾಗಿದೆ. ಇದಲ್ಲದೆ ದೇಶದ ಎಲ್ಲಾ ಬಡ ಕುಟುಂಬಳಿಗೆ ತಕ್ಷಣ 10 ಸಾವಿರ ರೂ. ವರ್ಗಾಯಿಸಿ ಸಣ್ಣ ವ್ಯವಹಾರಗಳಿಗೆ ಸಾಲ ಬೇಡ, ಆರ್ಥಿಕ ನೆರವು ನೀಡಿ ಎನ್ನುವುದೂ ಕೂಡ ಬೇಡಿಕೆಯ ಪಟ್ಟಿಯಲ್ಲಿದೆ.
ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ತಮ್ಮ ಪಕ್ಷದ ಮುಖಂಡರು, ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು, ಕೆಪಿಸಿಸಿ ಕಚೇರಿ ಸಿಬ್ಬಂದಿ, ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರಿಗೆ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಕರೆ ಕೊಟ್ಟಿದ್ದಾರೆ. ಈ ಅಭಿಯಾನ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ಟ್ವಿಟರ್ ಹಾಗೂ ಯೂಟ್ಯೂಬ್ನಲ್ಲಿ ನಡೆಯಲಿದ್ದು, ಇದರಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಕರೆ ಕೊಟ್ಟಿದ್ದಾರೆ.
ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ. ಪ್ರತಿಯೊಬ್ಬರೂ ಸರಿಯಾಗಿ ಕೇಂದ್ರ ಸರ್ಕಾರಕ್ಕೆ ಮನವರಿಕೆಯಾಗುವ ರೀತಿ ಮಾಹಿತಿ ಒದಗಿಸುವಂತೆ ತಿಳಿಸಿದ್ದಾರೆ. ತಾವು ಪಾಲ್ಗೊಂಡಿರುವುದಕ್ಕೆ ಸಾಕ್ಷಿಯಾಗಿ ಪೋಸ್ಟ್ರ್, ಬ್ಯಾನರ್ಗಳು, ವಿಡಿಯೋ ಅಥವಾ ಮಾಹಿತಿಯನ್ನು ಕರ್ನಾಟಕ ಅಥವಾ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಜಾಲತಾಣಕ್ಕೆ ಪೋಸ್ಟ್ ಮಾಡುವಂತೆ ಸೂಚಿಸಿದ್ದಾರೆ.
ಇಂದು ಬೆಳಿಗ್ಗೆ 11ರಿಂದ ಮಧ್ಯಾಹ್ನ 2 ಗಂಟೆಯ ನಡುವೆ ತಾವು ಸಾಮಾಜಿಕ ಜಾಲತಾಣದ ಮೂಲಕ ಅಭಿಯಾನದಲ್ಲಿ ಪಾಲ್ಗೊಂಡು ಕೇಂದ್ರ ಸರ್ಕಾರದ ವಿರುದ್ಧ ನಿಮ್ಮ ಪ್ರತಿಪಾದನೆಯನ್ನು ಸಲ್ಲಿಸಿ ಅದರ ದಾಖಲೆಯನ್ನು ಪಕ್ಷಕ್ಕೆ ಸಲ್ಲಿಸಿದರೆ ಕೆಪಿಸಿಸಿ ಸಾಮಾಜಿಕ ಜಾಲತಾಣಗಳ ತಂಡ ಇಂದು ರಾತ್ರಿ 8 ಗಂಟೆಗೆ ಇದನ್ನ ತನ್ನ ಅಧಿಕೃತ ಟ್ವಿಟರ್, ಫೇಸ್ಬುಕ್ ಖಾತೆಯಲ್ಲಿ ಪ್ರಕಟಿಸಲಿದೆ. ಹೀಗಾಗಿ ತಾವು ಪಾಲ್ಗೊಂಡ ಹೋರಾಟದ ಪೋಸ್ಟ್ಗಳು, ಲೋಗೋಗಳು, ವಿಡಿಯೋಗಳನ್ನು ಪಕ್ಷದ ಸಾಮಾಜಿಕ ಜಾಲತಾಣಗಳ ತಂಡಕ್ಕೆ ಕಳುಹಿಸಿ ಕೊಡಿ ಹಾಗೂ ನಮ್ಮ ತಂಡ ಇದನ್ನ ಪ್ರಕಟಿಸಲಿದೆ ಎಂದು ತಿಳಿಸಿದ್ದಾರೆ.