ಬೆಂಗಳೂರು : ರಾಜ್ಯ ಕಾಂಗ್ರೆಸ್ ನಾಯಕರ ಪ್ರಜಾಧ್ವನಿ ಯಾತ್ರೆಯ ಮೊದಲ ಹಂತ ಯಶಸ್ವಿಯಾಗಿದ್ದು, ಇದೀಗ ಫೆ.3 ರಿಂದ ಎರಡನೇ ಹಂತದ ಯಾತ್ರೆ ಆರಂಭವಾಗಲಿದೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕ ಭಾಗದಲ್ಲಿ ಪ್ರತ್ಯೇಕವಾಗಿ ಯಾತ್ರೆ ನಡೆಯಲಿದೆ. ಕಾಲಾವಧಿ ಕಡಿಮೆ ಇರುವ ಹಿನ್ನೆಲೆಯಲ್ಲಿ ನಾಯಕರು ರಾಜ್ಯವನ್ನು ವಿಂಗಡಿಸಿಕೊಂಡು ಯಾತ್ರೆ ಮಾಡಲಿದ್ದಾರೆ.
ಡಿ.ಕೆ.ಶಿವಕುಮಾರ್ ಪ್ರವಾಸದ ವಿವರ: ಫೆ.3 ರಂದು ಬೆಳಗ್ಗೆ 7.30ಕ್ಕೆ ಬೆಂಗಳೂರಿನಿಂದ ಹೊರಟು ಕೋಲಾರ ಜಿಲ್ಲೆಯ ಮುಳಬಾಗಿಲು ತಲುಪಲಿದ್ದಾರೆ. ಬೆಳಗ್ಗೆ 10ಕ್ಕೆ ಕುರುಡುಮಲೆ ಮಹಾಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಯಾತ್ರೆಗೆ ಚಾಲನೆ ನೀಡಲಿದ್ದಾರೆ. ಅಂದು 11ಕ್ಕೆ ಮುಳಬಾಗಿಲು ಪಟ್ಟಣ ವಿಧಾನಸಭೆ ಕ್ಷೇತ್ರದಲ್ಲಿ ಪ್ರಜಾಧ್ವನಿ ಕಾರ್ಯಕ್ರಮ ನಡೆಯಲಿದೆ. ಸಂಜೆ ಕೆಜಿಎಫ್ ತಲುಪಿ 4 ಗಂಟೆಗೆ ಅಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಬೆಂಗಳೂರು ತಲುಪುವ ಅವರು ಫೆ.4 ರಂದು ಮಾಲೂರಿಗೆ ತೆರಳಿ ಅಲ್ಲಿ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಸಂಜೆ ದೇವನಹಳ್ಳಿಗೆ ಆಗಮಿಸಿ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ.
ನಂತರ ಫೆ.6 ರಂದು ಚಿತ್ರದುರ್ಗ ಜಿಲ್ಲೆ ಹಿರಿಯೂರಿನಲ್ಲಿ ಬೆಳಗ್ಗೆ 10.30ಕ್ಕೆ ತೆರಳಿ ಪ್ರಜಾಧ್ವನಿಯಲ್ಲಿ ಭಾಗಿಯಾಗಿ ಸಂಜೆ ಚಳ್ಳಕೆರೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಸಂಜೆ 5ಕ್ಕೆ ಮೊಳಕಾಲ್ಮೂರು ತಲುಪಿ ಅಲ್ಲಿಯೂ ಕಾರ್ಯಕ್ರಮದಲ್ಲಿ ಭಾಗಿಯಾಗಿ ಚಿತ್ರದುರ್ಗದಲ್ಲೇ ವಾಸ್ತವ್ಯ ಹೂಡಲಿದ್ದಾರೆ.
ಫೆ.7 ರಂದು ಬೆಳಗ್ಗೆ 11ಕ್ಕೆ ಚಿತ್ರದುರ್ಗದಲ್ಲೇ ಕಾರ್ಯಕ್ರಮ ನಡೆಸಿ, ಮಧ್ಯಾಹ್ನ ಹೊಳಲ್ಕೆರೆ ವಿಧಾನಸಭೆ ಕ್ಷೇತ್ರದಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಸಂಜೆ 5.30ಕ್ಕೆ ಹೊಸದುರ್ಗದಲ್ಲಿ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.
ಅಂದು ಶಿವಮೊಗ್ಗದಲ್ಲಿ ವಾಸ್ತವ್ಯ ಹೂಡಲಿರುವ ಅವರು, ಫೆ.8 ರಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪನವರ ಕ್ಷೇತ್ರವಾದ ಶಿಕಾರಿಪುರದಲ್ಲಿ ನಡೆಯುವ ಪ್ರಜಾಧ್ವನಿಯಲ್ಲಿ ಪಾಲ್ಗೊಳ್ಳುವರು. ಇದಾದ ಬಳಿಕ ಸೊರಬ ವಿಧಾನಸಭೆ ಕ್ಷೇತ್ರ ಹಾಗೂ ಸಾಗರ ವಿಧಾನಸಭೆ ಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಆ ದಿನವೂ ಶಿವಮೊಗ್ಗದಲ್ಲೇ ವಾಸ್ತವ್ಯ ಹೂಡುವ ಅವರು ಫೆ.9 ರಂದು ತೀರ್ಥಹಳ್ಳಿಗೆ ತೆರಳಿ ಅಲ್ಲಿನ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ. ಸಂಜೆ 3ಕ್ಕೆ ಭದ್ರಾವತಿಯಲ್ಲಿ ಪ್ರಜಾಧ್ವನಿ ಕಾರ್ಯಕ್ರಮ ಮುಗಿಸಿ ರಸ್ತೆ ಮಾರ್ಗದಲ್ಲಿ ಬೆಂಗಳೂರಿಗೆ ತಲುಪಲಿದ್ದಾರೆ.
ಸಿದ್ದರಾಮಯ್ಯ ಪ್ರವಾಸದ ವಿವರ :ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಸ ಕೈಗೊಂಡಿದ್ದು, ಫೆ. 3ರಂದು ಬೆಂಗಳೂರಿನಿಂದ ಹೆಲಿಕ್ಯಾಪ್ಟರ್ ಮೂಲಕ ಹೊರಟು ಬೀದರ್ ಜಿಲ್ಲೆಯ ಬಸವಕಲ್ಯಾಣ ತಲುಪಲಿದ್ದಾರೆ. ಅಲ್ಲಿಂದ ಬಸ್ ಯಾತ್ರೆ ಆರಂಭವಾಗಲಿದೆ. ಈ ಸಂದರ್ಭದಲ್ಲೇ ಸಿದ್ದರಾಮಯ್ಯ ಅನುಭವ ಮಂಟಪಕ್ಕೆ ಭೇಟಿ ನೀಡುವರು. ಬಸವೇಶ್ವರ ಪುತ್ತಳಿಗೆ ಮಾಲಾರ್ಪಣೆ ಮಾಡಿ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಲಿದ್ದಾರೆ.
ಅಂದು ಸಂಜೆ 3ಕ್ಕೆ ಬಾಲ್ಕಿ ತಲುಪಿ ಸಾರ್ವಜನಿಕ ಸಭೆ ನಡೆಸಿ ವಾಸ್ತವ್ಯ ಹೂಡಲಿದ್ದಾರೆ. ಒಟ್ಟು ಈ ದಿನ ಅವರು 45 ಕಿ.ಮಿ. ಬಸ್ ಯಾತ್ರೆ ಮಾಡಲಿದ್ದಾರೆ. ಫೆ. 4ರಂದು ಬಾಲ್ಕಿಯಿಂದ 42 ಕಿ.ಮಿ. ಕ್ರಮಿಸಿ ಔರಾದ್ಗೆ ಆಗಮಿಸಿ ಅಲ್ಲಿ ಸಭೆ ನಡೆಸುತ್ತಾರೆ. ನಂತರ 48 ಕಿ.ಮೀ, ಕ್ರಮಿಸಿ ಬೀದರ್ಗೆ ಬಂದು ಸಂಜೆ 3ಕ್ಕೆ ಬೀದರ್ ಹಾಗೂ ಬೀದರ್ ದಕ್ಷಿಣ ವಿಧಾನಸಭೆ ಕ್ಷೇತ್ರಗಳ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಅಲ್ಲಿಂದ 55 ಕಿ.ಮೀ. ಸಂಚರಿಸಿ ಹುಮ್ನಾಬಾದ್ಗೆ ಆಗಮಿಸುವ ಅವರು ಸಾರ್ವಜನಿಕ ಸಭೆ ನಡೆಸುವರು. ಸಭೆ ಬಳಿಕ 66 ಕಿ.ಮೀ. ಕ್ರಮಿಸಿ ಕಲಬುರ್ಗಿಗೆ ಆಗಮಿಸಿ ವಾಸ್ತವ್ಯ ಹೂಡಲಿದ್ದಾರೆ.
ಫೆ.5 ರಂದು ಕಲಬುರಗಿಯಿಂದ ಹೆಲಿಕ್ಯಾಪ್ಟ್ ಮೂಲಕ ತೆರಳಿ ಹೂವಿನ ಹಡಗಲಿ ತಾಲ್ಲೂಕಿನ ಮೈಲಾರ ತಲುಪಿ ಅಲ್ಲಿ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಅಲ್ಲಿಂದ ವಾಪಸ್ ಕಲಬುರುಗಿಗೆ ಆಗಮಿಸಿ ವಾಸ್ತವ್ಯ ಹೂಡಲಿದ್ದಾರೆ. ಫೆ.6 ರಂದು ಬೆಳಗ್ಗೆ ಕಲಬುರುಗಿಯಿಂದ ಹೊರಟು 34 ಕಿ.ಮೀ. ಕ್ರಮಿಸಿ ಗ್ರಾಮೀಣ ವಿಧಾನಸಭೆ ಕ್ಷೇತ್ರದ ಕಮಲಾಪುರದಲ್ಲಿ ಸಾರ್ವಜನಿಕ ಸಭೆ ನಡೆಸಲಿದ್ದಾರೆ. ಅಲ್ಲಿಂದ 55 ಕಿ.ಮೀ. ದೂರದಲ್ಲಿರುವ ಚಿಂಚೊಳ್ಳಿಗೆ ತಲುಪಿ ಸಾರ್ವಜನಿಕ ಸಭೆ ನಡೆಸಿ, ಮತ್ತೆ 43 ಕಿ.ಮೀ. ದೂರದಲ್ಲಿರುವ ಸೇಡಂಗೆ ತೆರಳಿ ಅಲ್ಲಿ ಸಭೆ ನಡೆಸಿ ವಾಪಸ್ 54 ಕಿ.ಮೀ. ಕ್ರಮಿಸಿ ಕಲಬುರುಗಿಗೆ ಆಗಮಿಸಿ ವಾಸ್ತವ್ಯ ಹೂಡಲಿದ್ದಾರೆ.
ಫೆ.7ರಂದು ಬಸ್ ಮೂಲಕ ಕಲಬುರುಗಿಯಿಂದ 45 ಕಿ.ಮೀ. ಕ್ರಮಿಸಿ ಆಳಂದ ತಲುಪಿ ಸಾರ್ವಜನಿಕ ಸಭೆ ನಡೆಸುವ ಸಿದ್ದರಾಮಯ್ಯ ನಂತರ ಕಾರಿನಲ್ಲಿ 58 ಕಿ.ಮೀ. ಕ್ರಮಿಸಿ ಅಫ್ಜಲ್ಪುರ ತೆರಳಿ ಸಭೆ ನಡೆಸುವ ಅದಾದ ಬಳಿಕ ಕಾರಿನಲ್ಲೇ 57 ಕಿ.ಮೀ. ಕ್ರಮಿಸಿ ಯಂಡ್ರಾಮಿ ತಲುಪುವರು. ಅಲ್ಲಿ ಜೇವರ್ಗಿ ಕ್ಷೇತ್ರದ ಸಾರ್ವಜನಿಕ ಸಭೆ ನಡೆಸಿ ವಾಪಸ್ ಕಲಬುರುಗಿಗೆ ಪ್ರಯಾಣ ಬೆಳೆಸುತ್ತಾರೆ. ಅಂದು ವಾಸ್ತವ್ಯ ಹೂಡುವ ಸಿದ್ದರಾಮಯ್ಯ ಫೆ.8 ರಂದು ಬೆಳಗ್ಗೆ ಕಲಬುರುಗಿಯಿಂದ ಹೊರಟು 48 ಕಿ.ಮೀ. ದೂರದಲ್ಲಿರುವ ಚಿತ್ತಾಪುರ ಕ್ಷೇತ್ರ ತಲುಪಿ ಸಾರ್ವಜನಿಕ ಸಭೆ ನಡೆಸುತ್ತಾರೆ. ಅಲ್ಲಿಂದ ಕಲಬುರುಗಿಗೆ ವಾಪಸ್ ತೆರಳಿ ಬೆಂಗಳೂರಿನತ್ತ ಪ್ರಯಾಣ ಬೆಳೆಸುತ್ತಾರೆ.
ಫೆ.9 ರಂದು ಬೆಳಗ್ಗೆ ಬೆಂಗಳೂರಿನಿಂದ ಹೆಲಿಕ್ಯಾಪ್ಟರ್ ಮೂಲಕ ಹೊರಟು ದಾವಣಗೆರೆಯ ರಾಜನಹಳ್ಳಿ ತಲುಪಿ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬೆಂಗಳೂರಿಗೆ ಹಿಂದಿರುಗಲಿದ್ದಾರೆ. ಫೆ.10ರಂದು ಬೆಂಗಳೂರಿನಿಂದ ಸುರಪುರ ತಲುಪಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡು, ನಂತರ ಬಸ್ ಮೂಲಕ ಶಹಪೂರ ತಲುಪಿ ಸಭೆ ನಡೆಸುವರು. ಅಲ್ಲಿಂದ ಕಾರಿನ ಮೇಲೆ 80 ಕಿ.ಮೀ. ಕ್ರಮಿಸಿ ಕಲಬುರುಗಿಗೆ ಅಗಮಿಸಿ ಅಲ್ಲಿ ಕಲಬುರುಗಿ ಉತ್ತರ ಹಾಗೂ ದಕ್ಷಿಣ ವಿಧಾನಸಭೆ ಕ್ಷೇತ್ರಗಳ ಜಂಟಿ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಅಂದು ಕಲಬುರುಗಿಯಲ್ಲೇ ವಾಸ್ತವ್ಯ ಹೂಡುವ ಸಿದ್ದರಾಮಯ್ಯ ಫೆ.11 ರಂದು ಅಲ್ಲಿಂದ 90 ಕಿ.ಮೀ. ಕಾರಲ್ಲಿ ತೆರಳಿ ಸಿಂದಗಿಯಲ್ಲಿ ಸಭೆ ನಡೆಸುವರು. ಇದಾದ ಬಳಿಕ ಇಂಡಿ, ನಾಗಠಾಣಸಲ್ಲಿ ಸಭೆ ನಡೆಸಿ ವಿಜಯಪುರಕ್ಕೆ ಆಗಮಿಸಿ ವಾಸ್ತವ್ಯ ಹೂಡಲಿದ್ದಾರೆ.
ಫೆ.12 ರಂದು ಬೆಳಗ್ಗೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಪ್ರತಿನಿಧಿಸುವ ಬಬಲೇಶ್ವರದಲ್ಲಿ ಸಾರ್ವಜನಿಕ ಸಭೆ ನಡೆಸಲಿದ್ದಾರೆ. ಅಲ್ಲಿಂದ ಮಧ್ಯಾಹ್ನ ದೇವರ ಹಿಪ್ಪರಗಿ, ಸಂಜೆ ಬಸವನ ಬಾಗೇವಾಡಿಯಲ್ಲಿ ಸಭೆ ನಡೆಸುತ್ತಾರೆ. ಆಲಮಟ್ಟಿಯಲ್ಲಿ ವಾಸ್ತವ್ಯ ಹೂಡಲಿರುವ ಅವರು ಫೆ.13 ರಂದು ಬೆಂಗಳೂರಿಗೆ ಆಗಮಿಸಿ ವಿಧಾನಸಭೆಯಲ್ಲಿ ರಾಜ್ಯಪಾಲರ ಕಾರ್ಯ ಕಲಾಪದಲ್ಲಿ ಭಾಗಿಯಾಗಲಿದ್ದಾರೆ.
ಇದನ್ನೂ ಓದಿ: ಚಾಮರಾಜನಗರದಲ್ಲಿ ಪ್ರಜಾಧ್ವನಿ ಯಾತ್ರೆ: ಮೋದಿ, ರಾಜ್ಯ ಸರ್ಕಾರ ವಿರುದ್ಧ ಕಾಂಗ್ರೆಸ್ ನಾಯಕರ ವಾಗ್ದಾಳಿ