ಬೆಂಗಳೂರು: ಇಂದು ಕೃಷಿ ಸಚಿವರು ಕೊಡಗಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ರೈತರು ರೈತರೇ ಅಲ್ಲ ಎನ್ನುವ ಹೇಳಿಕೆ ನೀಡಿದ್ದು, ಸಾಮಾಜಿಕ ಜಾಲ ತಾಣಗಳಲ್ಲಿ ಪರ ವಿರೋಧ ಚರ್ಚೆ ವ್ಯಕ್ತವಾಗುತ್ತಿದೆ. ಕಾಂಗ್ರೆಸ್ ಪಕ್ಷ ಸಾಮಾಜಿಕ ಜಾಲತಾಣದಲ್ಲಿ ತಕ್ಷಣ ಕೃಷಿ ಸಚಿವರ ಹೇಳಿಕೆ ಖಂಡಿಸಿದ್ದು, ಕ್ಷಮೆ ಕೇಳಬೇಕೆಂದು ಒತ್ತಾಯಿಸಿದೆ.
ಈ ಬಗ್ಗೆ ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಮಾತನಾಡಿದ್ದು, ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಇವತ್ತು ಪೊನ್ನಂ ಪೇಟೆಯಲ್ಲಿ ಕೃಷಿ ಸಚಿವ ಬಿ ಸಿ ಪಾಟೀಲ್ ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು ಅನ್ನೋ ಮಾತನ್ನ ಹೇಳಿದ್ದಾರೆ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ, ರಾಷ್ಟಕ್ಕೆ ಅನ್ನವನ್ನು ಕೊಟ್ಟ ರೈತ ಇವತ್ತು ಕಷ್ಟದ ಪರಿಸ್ಥಿತಿಯಲ್ಲಿ ಇದ್ದಾನೆ. ಈ ಸರ್ಕಾರ ರೈತರಿಗೆ ಸಹಾಯ ಮಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪ ಮಾಡಿದರು.
ಕಳೆದ ವರ್ಷದ ನೆರೆ ಹಾವಳಿಯಿಂದ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ 50,000 ಕೋಟಿ ಹಣ ಬರಬೇಕಿತ್ತು. ಆದರೆ, ಕೊಟ್ಟಿದ್ದು 2000 ಕೋಟಿ ಅಷ್ಟು ಹಣ ಮಾತ್ರ, ಈ ಬಾರಿ ಮಳೆ ಬಂದು ಸುಮಾರು 10,000 ಕೋಟಿ ನಷ್ಟ ಉಂಟಾಗಿದೆ. ಆದರೆ, ಸಿಕ್ಕಿದ್ದು 600 ಕೋಟಿ ಹಣ ಮಾತ್ರ. ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಎದ್ದು ಕಾಣುತ್ತಿದ್ದು ರೈತರ ಕಷ್ಟಕ್ಕೆ ಸ್ಪಂದಿಸುವ ಶಕ್ತಿ ಈ ಸರ್ಕಾರಕ್ಕೆ ಇಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.
ಕೃಷಿ ಮಂತ್ರಿಗಳು ರೈತರ ಸಹಕಾರಕ್ಕೆ ಬರುವುದು ಬಿಟ್ಟು ಇಂತಹ ಹೇಳಿಕೆ ಕೊಡುವುದು ದುರ್ದೈವ. ಈ ತರ ಮಾತುಗಳು ಕೃಷಿ ಸಚಿವರು ಆಡಬರದು. ಅವರಿಗೆ ಸಾಂತ್ವನ ಹೇಳಿ ಧೈರ್ಯ ತುಂಬುವಂತ ಕೆಲಸ ಮಾಡಬೇಕು ಎಂದು ನಾನು ಒತ್ತಾಯಿಸುತ್ತೇನೆ ಎಂದರು.
ಪಂಜಾಬ್ ರೈತರ ಹೋರಾಟಕ್ಕೆ ಸಂಪೂರ್ಣ ಬೆಂಬಲ ಕಾಂಗ್ರೆಸ್ ಪಕ್ಷ ನೀಡಿದೆ. ರೈತ ವಿರೋಧಿ ಕಾಯ್ದೆಯನ್ನು ಕೇಂದ್ರ ಸರ್ಕಾರ ತಂದಿದೆ. ಅದು ಜನ ವಿರೋಧಿ , ರೈತ ವಿರೋಧಿ ಯಾಗಿದ್ದು, ಈ ಹೋರಾಟ ಒಂದು ಇಡೀ ರಾಷ್ಟ್ರಕ್ಕೆ ಸಂದೇಶ ರವಾನೆಯಾಗುತ್ತಿದೆ. ಕಾಯ್ದೆ ಸಂಪೂರ್ಣ ವಾಪಸ್ ಪಡಿಯಬೇಕು ಎಂಬ ಒತ್ತಾಯ ಎಲ್ಲಾ ಕಡೆಯಿಂದ ಕೇಳಿ ಬರುತ್ತಿದೆ. ಕೇಂದ್ರ ಸರ್ಕಾರ ಅವರ ಹಠಮಾರಿ ಧೋರಣೆ ಮುಂದುವರೆಸಿದೆ ಎಂದರು.