ಬೆಂಗಳೂರು : ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ನಾವು ಯಾವುದೇ ರೀತಿಯ ಶಾಂತಿ ಕದಡುವ ಕೆಲಸ ನಾವು ಮಾಡುತ್ತಿಲ್ಲ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಈಗ ಕೇಂದ್ರ ಪಡೆಯೂ ಅವರದ್ದೇ ಬಂದಿದೆ. ಅಕ್ರಮ ನಡೆದಿದ್ದರೆ ತನಿಖೆ ಮಾಡಲಿ. ಅವರದೇ ಸರ್ಕಾರವಿದೆ, ಅವರದೇ ಪೊಲೀಸ್ ಇದೆ. ಯಾವ ತನಿಖೆಯನ್ನ ಬೇಕಾದರೂ ಮಾಡಿಕೊಳ್ಳಲಿ. ಮುನಿರತ್ನ ಸೆಟ್ ಟಾಪ್ ಬಾಕ್ಸ್ ವಿತರಣೆ ಬಗ್ಗೆ ನನಗೆ ಮಾಹಿತಿಯಿಲ್ಲ ಎಂದರು.
ಜಾತಿ ಒಡೆಯುವ ಕೆಲಸ ಮಾಡುತ್ತಿಲ್ಲ:
ಡಿಕೆಶಿ ಜಾತಿ ಒಡೆಯುತ್ತಿದ್ದಾರೆಂಬ ಮುನಿರತ್ನ ಹೇಳಿಕೆಗೆ ಮಾಜಿ ಸಚಿವ ಚೆಲುವರಾಯಸ್ವಾಮಿ ಮಾತನಾಡಿ, ಡಿಕೆಶಿ ಎಲ್ಲೂ ಜಾತಿ ಒಡೆಯುವ ಕೆಲಸ ಮಾಡ್ತಿಲ್ಲ. ಡೇ ಒನ್ ನಿಂದ ಎಲ್ಲಾದ್ರೂ ಜಾತಿ ತಂದಿದ್ದಾರಾ? ಸಿದ್ದರಾಮಯ್ಯನವರು ಎಲ್ಲಾದರೂ ಜಾತಿ ತಂದಿದ್ದಾರಾ? ಅನೇಕ ಚುನಾವಣೆಯನ್ನ ಡಿಕೆಶಿ ಅವರು ಮಾಡಿದ್ದಾರೆ. ಈಗ ಉಪಚುನಾವಣೆಯನ್ನೂ ಮಾಡ್ತಿದ್ದಾರೆ. ಅವರು ಯಾವ ಜಾತಿ ಕಾರ್ಡ್ ಫ್ಲೇ ಮಾಡ್ತಿಲ್ಲ. ಬಿಜೆಪಿಯವರು ಉದ್ದೇಶಪೂರ್ವಕವಾಗಿ ಹೇಳ್ತಿದ್ದಾರೆ. ಸಣ್ಣ ಪುಟ್ಟ ಪಾರ್ಟಿಗಳು ಇದನ್ನ ಮಾಡಬಹುದು. ಆದರೆ, ಕಾಂಗ್ರೆಸ್ ಒಂದು ರಾಷ್ಟ್ರೀಯ ಪಕ್ಷ. ಕಾಂಗ್ರೆಸ್ ಎಲ್ಲ ಸಮುದಾಯಗಳ ಪಕ್ಷ. ಸಿದ್ದರಾಮಯ್ಯ ಅವಧಿಯಲ್ಲಿ ಏನೆಲ್ಲ ಕೊಡಲಿಲ್ಲ. ಉಳವವನೇ ಭೂಮಿ ಒಡೆಯ ತಂದಿದ್ದು ಯಾರು? ಎಲ್ಲಾ ಸಮಾಜದ ಹಿತ ಕಾಪಾಡುವುದು ಕಾಂಗ್ರೆಸ್ನ ದೃಷ್ಟಿ. ಅವರ ಅಸ್ತಿತ್ವ ಉಳಿಸಿಕೊಳ್ಳೋಕೆ ಪ್ರವೋಕ್ ಮಾಡ್ತಿದ್ದಾರೆ. ರಾಜಕಾರಣ ದುರುಪಯೋಗ ಮಾಡಿಕೊಳ್ತಿದ್ದಾರೆ ಎಂದು ಆರೋಪಿಸಿದರು.
ಶಾಂತಿ ಕದಡುವ ಯತ್ನ ಕಾಂಗ್ರೆಸ್ ಮಾಡ್ತಿದೆ ಎಂಬ ಮುನಿರತ್ನ ಆರೋಪಕ್ಕೆ ಪ್ರತಿಕ್ರಿಯೆ ನೀಡಿ, ಗಲಾಟೆ ಮಾಡೋರು ಯಾರು? ಅವರೇ ತಾನೇ. ಅವರ ಮೇಲೆ ತಾನೇ ಎಲ್ಲ ಆರೋಪಗಳಿರೋದು. ಹೊಡೆಸಿಕೊಳ್ಳುವ ಮೊದಲೇ ಎಫ್ಐಆರ್ ಹಾಕಿಸೋರು ಅವರು. ಚುನಾವಣೆಗೆ ಏನೂ ಬೇಕೋ ಆ ಸಿದ್ಧತೆ ಮಾಡಿಕೊಳ್ತಿದ್ದಾರೆ. ಪಾರದರ್ಶಕ ಚುನಾವಣೆ ನಡೆಸೋಕೆ ನಾವು ತಯಾರಿದ್ದೇವೆ ಎಂದರು.