ಬೆಂಗಳೂರು : ಬಿಜೆಪಿ ಸರ್ಕಾರದ ತೈಲ ಬೆಲೆ ಏರಿಕೆ, ದಿನಬಳಕೆ ಆಹಾರ ಪದಾರ್ಥಗಳ ಬೆಲೆ ಏರಿಕೆ ನೀತಿಯನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಮಹಾಲಕ್ಷ್ಮಿಲೇಔಟ್ನ ಕುರುಬರಹಳ್ಳಿ ವೃತ್ತದಿಂದ ಶಂಕರಮಠ ಸರ್ಕಲ್ವರೆಗೆ ಸೈಕಲ್ ಜಾಥಾ ನಡೆಸಿದರು.
ಈ ಕುರಿತು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಮಾತನಾಡಿ, ಬಿಜೆಪಿ ಪಕ್ಷದವರು ಅಧಿಕಾರದ ಅಮಲಿನಲ್ಲಿ ತೇಲುತ್ತಿದ್ದಾರೆ. ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಆಡಳಿತದಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಿಂದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಲಾಗಿತ್ತು. ಆಗ ಬಿ. ಎಸ್. ಯಡಿಯೂರಪ್ಪ, ಕೆ.ಎಸ್. ಈಶ್ವರಪ್ಪ, ಶೋಭಾ ಕರಂದ್ಲಾಜೆ, ಸ್ಮೃತಿ ಇರಾನಿ ಪ್ರತಿಭಟಿಸಿದ್ದರು. ಇಂದು ಪೆಟ್ರೋಲ್ 105 ರೂಪಾಯಿ, ಡೀಸೆಲ್ 96 ರೂಪಾಯಿ, ಅಡುಗೆ ಅನಿಲ 840 ರೂಪಾಯಿ ಆಗಿದೆ. ಹೀಗಿದ್ದರೂ ಬಿಜೆಪಿ ಪಕ್ಷದವರು ಮೌನವಹಿಸಿರುವುದು ಏಕೆ? ಎಂದು ಪ್ರಶ್ನಿಸಿದ್ದಾರೆ.
ದುರಂತಕ್ಕೆ ಬಿಜೆಪಿ ಕಾರಣ : ಬಿ.ಕೆ.ಹರಿಪ್ರಸಾದ್ ಮಾತನಾಡಿ, ಬಿಜೆಪಿಗೆ ಬಡವರ ಬಗ್ಗೆ ಕಾಳಜಿ ಮತ್ತು ಸೌಜನ್ಯವಿಲ್ಲ. 140 ಕೋಟಿ ಜನಸಂಖ್ಯೆಗೆ ಸುಮಾರು 280 ಕೋಟಿ ಲಸಿಕೆ ಬೇಕು. ಆದರೆ, ಈವರಗೆ 36 ಕೋಟಿ ಲಸಿಕೆ ಮಾತ್ರ ನೀಡಿದ್ದಾರೆ. ಬಡವರಿಗೆ ಚಿಕಿತ್ಸೆ ಸಿಗುತ್ತಿಲ್ಲ, ಕೋವಿಡ್ನಿಂದ ಮೃತಪಟ್ಟವರ ಅಂತ್ಯಸಂಸ್ಕಾರವಾಗುತ್ತಿಲ್ಲ. ಗಂಗಾ ನದಿಯಲ್ಲಿ 20 ಸಾವಿರ ಮೃತದೇಹ ಬಿಸಾಡಿದ್ದಾರೆ. ಇಂತಹ ದುರಂತಕ್ಕೆ ಕಾರಣಕವೇ ಬಿಜೆಪಿ ಸರ್ಕಾರ. ಆತ್ಮನಿರ್ಭರ್ ಅಲ್ಲ, ಆತ್ಮಬರ್ಭರ ಭಾರತವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜೀವನ ನಡೆಸುವುದು ಕಷ್ಟ: ಸಲೀಮ್ ಅಹಮ್ಮದ್ ಮಾತನಾಡಿ, ಕೊರೊನಾ ಸಾಂಕ್ರಾಮಿಕ ರೋಗ ನಿಯಂತ್ರಣ ಮಾಡುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕೊರೊನಾ ಸಂಕಷ್ಟದ ಸಮಯದಲ್ಲಿ ಬಡವರು ಮತ್ತು ಮಧ್ಯಮ ವರ್ಗದವರು ಜೀವನ ನಡೆಸುವುದು ಕಷ್ಟ. ಇಂತಹ ಸಂದರ್ಭದಲ್ಲಿ ತೈಲ ಬೆಲೆ ಏರಿಕೆಯನ್ನ ಇಳಿಸಬೇಕು ಎಂದು ಒತ್ತಾಯಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಸಲೀಂ ಅಹಮದ್, ವಿಧಾನಪರಿಷತ್ ಸದಸ್ಯರಾದ ಬಿ.ಕೆ.ಹರಿಪ್ರಸಾದ್ ಮತ್ತು ಶಾಸಕ ರಂಗನಾಥ್, ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎಂ.ಶಿವರಾಜು ಮತ್ತಿತರರು ಸೈಕಲ್ ಜಾಥಾದಲ್ಲಿ ಭಾಗವಹಿಸಿದ್ದರು. ಮಹಿಳಾ ಕಾಂಗ್ರೆಸ್, ಯುವ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು ಉಪಸ್ಥಿತರಿದ್ದರು.
ಓದಿ: ಯಡಿಯೂರಪ್ಪ ಪ್ರಶ್ನಾತೀತ ನಾಯಕ, ನಾಯಕತ್ವ ಬದಲಾವಣೆ ಪ್ರಶ್ನೆ ಉದ್ಭವಿಸಲ್ಲ: ತೇಜಸ್ವಿ ಸೂರ್ಯ