ಬೆಂಗಳೂರು : ವಿಧಾನಪರಿಷತ್ ಉಪ ಸಭಾಪತಿ ಧರ್ಮೇಗೌಡ ಆತ್ಮಹತ್ಯೆಗೆ ಕಾಂಗ್ರೆಸ್ ನಾಯಕರು ಆಘಾತ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ಉಪಸಭಾಪತಿ ಎಸ್ ಎಲ್ ಧರ್ಮೇಗೌಡ ಅವರ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ. ಅವರ ಕುಟುಂಬದ ಸದಸ್ಯರು ಮತ್ತು ಅಭಿಮಾನಿಗಳ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ. ಶೋಕತಪ್ತ ಕುಟುಂಬಕ್ಕೆ ನನ್ನ ಸಂತಾಪಗಳು ಎಂದು ಕಂಬನಿ ಮಿಡಿದಿದ್ದಾರೆ.
ಧರ್ಮೇಗೌಡ ಅವರ ಸಾವಿಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸಂತಾಪ ಸೂಚಿಸಿದ್ದು, ಧರ್ಮೇಗೌಡ ಅವರ ಸಾವಿನ ಸುದ್ದಿ ಕೇಳಿ ಆಘಾತವಾಗಿದೆ. ಸಜ್ಜನ ಸ್ವಭಾವದ ರಾಜಕಾರಣಿ ಎಂದೇ ಗುರುತಿಸಿಕೊಂಡಿದ್ದ ಅವರು ಈ ರೀತಿ ಅಂತ್ಯ ಕಂಡಿರುವುದು ನೋವಿನ ಸಂಗತಿ. ಅವರ ಕುಟುಂಬ ಹಾಗೂ ಬಂಧುಮಿತ್ರರಿಗೆ ಈ ನೋವು ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ' ಎಂದು ಡಿಕೆಶಿ ತಮ್ಮ ಸಂತಾಪ ನುಡಿಗಳಲ್ಲಿ ತಿಳಿಸಿದ್ದಾರೆ.
ವಿಧಾನ ಪರಿಷತ್ತಿನ ಉಪಸಭಾಪತಿ ಎಸ್ ಎಲ್ ಧರ್ಮೇಗೌಡ ಅವರ ಆತ್ಮಹತ್ಯೆ ಸುದ್ದಿ ಕೇಳಿ ಆಘಾತವಾಗಿದೆ, ನಂಬಲು ಆಗ್ತಿಲ್ಲ. ಭಗವಂತ ಅವರ ಆತ್ಮಕ್ಕೆ ಶಾಂತಿ ಕೊಡಲಿ ಹಾಗೂ ಅವರ ಪರಿವಾರದವರಿಗೆ ದುಃಖ ಭರಿಸುವ ಶಕ್ತಿ ಕೊಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಪ್ರಾರ್ಥಿಸಿಕೊಂಡಿದ್ದಾರೆ.
ಇದೇ ವೇಳೆ ಮಾಜಿ ಸಚಿವ ದಿನೇಶ್ ಗುಂಡೂರಾವ್ ಸಂತಾಪ ವ್ಯಕ್ತಪಡಿಸಿದ್ದು, ವಿಧಾನ ಪರಿಷತ್ ಉಪ ಸಭಾಪತಿ ಧರ್ಮೇಗೌಡ ಅವರ ಸಾವಿನ ಸುದ್ದಿ ನಿಜಕ್ಕೂ ಬರಸಿಡಿಲಿನ ಆಘಾತ ತಂದಿದೆ. ಧರ್ಮೇಗೌಡರು ಆತ್ಮಹತ್ಯೆ ಮಾಡಿಕೊಳ್ಳುವ ಆತುರದ ನಿರ್ಧಾರ ಕೈಗೊಳ್ಳಬಾರದಿತ್ತು. ಅವರ ಕೆಟ್ಟ ನಿರ್ಧಾರ ಎಲ್ಲರಿಗೂ ನೋವು ತಂದಿದೆ. ಅವರ ಕುಟುಂಬದ ಶೋಕದಲ್ಲಿ ನಾನು ಭಾಗಿ. ಧರ್ಮೇಗೌಡರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.
ಧರ್ಮೇಗೌಡರ ಆತ್ಮಹತ್ಯೆ ವಿಷಯ ತಿಳಿದು ಭಾರೀ ಆಘಾತವಾಗಿದೆ. ದುರದೃಷ್ಟಕರ ಸಂಗತಿಯಾಗಿದ್ದು, ಅವರ ಕುಟುಂಬಕ್ಕೆ ಸಂತಾಪಗಳು ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಕಂಬನಿ ಮಿಡಿದಿದ್ದಾರೆ.
ವಿಧಾನ ಪರಿಷತ್ತಿನ ಉಪಸಭಾಪತಿ ಎಸ್ .ಎಲ್ . ಧರ್ಮೇಗೌಡ ಅವರು ಅಕಾಲಿಕವಾಗಿ ಇಂದು ನಮ್ಮನ್ನಗಲಿರುವ ವಿಷಯ ತಿಳಿದು ನನಗೆ ದಿಗ್ಬ್ರಮೆ ಆಗಿದೆ ಎಂದು ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ ಕಂಬನಿ ಮಿಡಿದಿದ್ದಾರೆ. ಶ್ರೀಯುತರ ಅಕಾಲಿಕ ಮರಣದಿಂದ ವಿಧಾನ ಪರಿಷತ್ ಸೇರಿದಂತೆ ರಾಜ್ಯದ ಜನತೆಗೆ ತುಂಬಲಾರದ ನಷ್ಟ. ಅವರ ಕುಟುಂಬ ವರ್ಗಕ್ಕೆ,ಅಭಿಮಾನಿ ಮತ್ತು ಸ್ನೇಹಿತರ ಬಳಗಕ್ಕೆ ಈ ನೋವನ್ನು ಸಹಿಸುವ ಶಕ್ತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಉಪಸಭಾಪತಿ ನಿಧನಕ್ಕೆ ಸ್ಪೀಕರ್ ಕಾಗೇರಿ ಮತ್ತು ಜಗದೀಶ್ ಶೆಟ್ಟರ್ ಸಂತಾಪ..